ಕೃಷ್ಣಂ ಪ್ರಣಯ ಸಖಿ ಭರ್ಜರಿ ಗೆಲುವಿನ ಸಿಗ್ನಲ್ ಕೊಟ್ಟಿದ್ದಾಗಿದೆ. .. ಪ್ರೇಕ್ಷಕರು ಖುಷೀಭವ.. ಹೀಗಾಗಿ.. ಪ್ರೊಡ್ಯೂಸರ್ ಸುಖೀಭವ ಎನ್ನುವಂತೆ ಹರಸಿದ್ದಾರೆ. ಕೃಷ್ಣಂ ಪ್ರಣಯ ಸಖಿಯಲ್ಲಿ ಸುದೀರ್ಘ ಗ್ಯಾಪ್ ನಂತರ ಗಣೇಶ್ ಗೆದ್ದಿದ್ದಾರೆ. ಪ್ರೇಕ್ಷಕರು ಮೊದಲ ದಿನವೇ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಖುಷಿಯಾಗಿದ್ದಾರೆ. ನಿರ್ದೇಶಕರು ಗೆದ್ದಿದ್ದಾರೆ. ನಾಯಕ ನಾಯಕಿಯರ ಮುಖದಲ್ಲಿ ನಗು ಮೂಡಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಅಲ್ಲಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಗೆಲುವಿನ ಹಬ್ಬಗಳು ಆರಂಭವಾಗುವ ಸೂಚನೆ ಸಿಕ್ಕಿದೆ.
ಕೃಷ್ಣಂ ಪ್ರಣಯ ಸಖಿಯಲ್ಲಿ ಹೊಸತನದ ಕಥೆ ಇಲ್ಲ. ಹೊಸತನದ ರೋಮಾಂಚನ ಇದೆ. ಶ್ರೀಮಂತ ಮನೆತನದ ಹುಡುಗ, ಅನಾಥ, ಬಡ ಹುಡುಗಿಯನ್ನು ನೋಡಿ ಇಷ್ಟಪಡುತ್ತಾನೆ. ಆದರೆ ಆಕೆಯನ್ನು ಒಲಿಸಿಕೊಳ್ಳೋದಕ್ಕೆ ಡ್ರೈವರ್ ರೀತಿ ನಾಟಕವಾಡ್ತಾನೆ. ಹುಡುಗ ಶ್ರೀಮಂತ ಎಂದು ಗೊತ್ತಾದಾಗ ಒಂದು ಟ್ವಿಸ್ಟ್. ಅದೇ ಹುಡುಗಿಯನ್ನು ಮತ್ತೊಮ್ಮೆ ಲವ್ ಮಾಡೋಕೆ ಹೊರಡುವ ಹೀರೋ.. ಟ್ವಿಸ್ಟ್ ಮೇಲೆ ಟ್ವಿಸ್ಟ್.. ನಗುವಿನ ಮೇಲೆ ನಗು. ನಿರ್ದೇಶಕ ಶ್ರೀನಿವಾಸರಾಜು ಸಿಂಪಲ್ ಕಥೆಯನ್ನು ಹೇಳಿರುವ ರೀತಿ ಚೆನ್ನಾಗಿದೆ. ‘ಇಲ್ಲೇನೋ ಇದೆ, ಆದ್ರೆ ಅದೇನೂ ಅಂತ ಗೊತ್ತಾಗ್ತಿಲ್ಲ’ ಎಂದು ಕನ್ʻಫ್ಯೂಸ್ ಆಗುವ ಪ್ರೇಕ್ಷಕರಿಗೆ ನಗು ನಗಿಸುತ್ತಲೇ ಡೌಟ್ ಕ್ಲಿಯರ್ ಮಾಡೋ ಟೆಕ್ನಿಕ್ ಖುಷಿ ಕೊಡುತ್ತದೆ. ಗಣೇಶ್ ನಗು ನಗಿಸುತ್ತಾ ಚಿತ್ರವನ್ನು ಹೊತ್ತುಕೊಂಡು ಹೋದರೆ.. ನಾಯಕಿ ಮಾಳವಿಕಾ ನಾಯರ್ ಕಣ್ಣಲ್ಲೇ ಕೊಲ್ಲುತ್ತಾ ಹೋಗ್ತಾರೆ. ಶರಣ್ಯ ಶೆಟ್ಟಿ ನೆಗೆಟಿವ್ ರೋಲ್ʻನಲ್ಲಿದ್ದರೂ.. ಪ್ರೇಕ್ಷಕರಿಗೆ ಇಷ್ಟವಾಗೋದು ಮಾದಕತೆಯಿಂದ. ಶಶಿಕುಮಾರ್, ಶ್ರುತಿ, ರಾಮಕೃಷ್ಣ, ಅಶೋಕ್, ಶಿವಧ್ವಜ್, ಅವಿನಾಶ್, ಅಶೋಕ್ ಅವರಂತಹ ದೊಡ್ಡ ದೊಡ್ಡ ಕಲಾವಿದರ ದಂಡೇ ಇದೆ.
ಆದರೆ ಚಿತ್ರದಲ್ಲಿ ಇನ್ನಿಬ್ಬರು ಹೀರೋಗಳಿದ್ದಾರೆ. ಒಬ್ಬರು ಅರ್ಜುನ್ ಜನ್ಯ. ಚಿತ್ರವನ್ನು ಹಾಡುಗಳ ಮೂಲಕವೇ ಗೆಲ್ಲಿಸುವ ಶಕ್ತಿ ಅವರ ಹಾಡುಗಳಿಗೆ ಇದೆ. ‘ದ್ವಾಪರ ದಾಟುತ..’, ‘ಚಿನ್ನಮ್ಮ..’, ‘ಮೈ ಮ್ಯಾರೇಜ್ ಈಸ್ ಫಿಕ್ಸ್..’ ಹೀಗೆ ಎಲ್ಲ ಹಾಡುಗಳೂ ಸಖತ್ ರೊಮ್ಯಾಂಟಿಕ್ ಆಗಿವೆ. ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳೆಂದರೆ.. ಕ್ಯಾಮರಾಮ್ಯಾನ್ ವೆಂಕಟ ರಾಮ ಪ್ರಸಾದ್ ಹಾಗೂ ಸಂಕಲನಕಾರ ಕೆ ಎಂ ಪ್ರಕಾಶ್. ಇಡೀ ಸಿನಿಮಾ ನೋಡಿ ಹೊರಬರುವಾಗ.. ಲವ್ ಕಾಮಿಡಿ ಅಷ್ಟೇ ಅಲ್ಲ, ಸೊಗಸಾದ ದೃಶ್ಯ ವೈಭವ ಹಾಗೂ ಹಾಡಿನ ಇಂಪು ಕಿವಿಯಲ್ಲಿರುತ್ತದೆ.
ಇದೆಲ್ಲದರಿಂದಾಗಿ ನಿರ್ಮಾಪಕ ಪ್ರಶಾಂತ್ ಜಿ.ರುದ್ರಪ್ಪ ಖುಷಿಯಾಗಿದ್ದಾರೆ.
ಇದೆಲ್ಲದರ ಮಧ್ಯೆ ಒಂದೇ ಒಂದು ಸಮಸ್ಯೆ ಎಂದರೆ.. ಗಣೇಶ್ ಅವರ ಚಿತ್ರಗಳಿಗೆ ಒಳ್ಳೆಯ ಓಪನಿಂಗ್ ಈ ಹಿಂದೆಯೂ ಸಿಕ್ಕಿತ್ತು. ಅದರಲ್ಲಿಯೂ ಮುಗುಳುನಗೆ ಚಿತ್ರ ಅದ್ಧೂರಿ ಆರಂಭವನ್ನೇ ಪಡೆದುಕೊಂಡಿತ್ತು. ನಿರ್ಮಾಪಕರು ಸೇಫ್ ಆಗಿದ್ದರು. ಆದರೆ.. ಎಷ್ಟು ವೇಗವಾಗಿ ಶುರುವಾಗಿತ್ತೋ.. ಅಷ್ಟೇ ವೇಗವಾಗಿ ಹೊರಟು ಹೋಯ್ತು.ಅಂದದರೆ.. ಹೊಸ ಪ್ರೇಕ್ಷಕರು ಬರಲಿಲ್ಲ. ಕೃಷ್ಣಂ ಪ್ರಣಯ ಸಖಿಗೆ ಹಾಗಾಗದಿರಲಿ.



