ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಎಂಬ ದಾಖಲೆ ಇರುವುದು ಗೋಲ್ಡನ್ ಸ್ಟಾರ್ ಗಣೇಶ್. ಚೆಲ್ಲಾಟ, ಹುಡುಗಾಟ, ಮುಂಗಾರು ಮಳೆ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ.. ಹೀಗೆ ಸತತ 6, 100 ಡೇಸ್ ಸಿನಿಮಾ ನೀಡಿರುವ ದಾಖಲೆಯೂ ಗೋಲ್ಡನ್ ಸ್ಟಾರ್ ಹೆಸರಲ್ಲಿದೆ. ಆ 6 ಚಿತ್ರಗಳಲ್ಲಿ ಮುಂಗಾರು ಮಳೆ ಸೃಷ್ಟಿಸಿದ್ದು ಹೊಸ ಇತಿಹಾಸ. ಆ ಚಿತ್ರದ ನಂತರ ಮುಂದಿನ ಚಿತ್ರಕ್ಕೆ ಕೋಟಿ ಸಂಭಾವನೆ ಪಡೆದ ಗಣೇಶ್, ಕೋಟಿ ಸಂಭಾವನೆ ಪಡೆದ ಮೊದಲ ಕನ್ನಡ ಹೀರೋ ಎಂಬ ದಾಖಲೆ ಸೃಷ್ಟಿಸಿದವರು. ಈಗ ಇನ್ನೊಂದು ದಾಖಲೆ ಬರೆದಿದ್ದಾರೆ. ಅದೂ ಇತ್ತೀಚೆಗೆ ಅಪರೂಪದಲ್ಲಿ ಅಪರೂಪವಾಗಿರು ದಾಖಲೆ.
ಗೋಲ್ಡನ್ ಸ್ಟಾರ್ ಗಣೇಶ್ ಒಂದು ಅಪರೂಪದ ವಿಶೇಷ ದಾಖಲೆ ಬರೆದಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ಶತದಿನೋತ್ಸವ ಸೆಲಬ್ರೇಟ್ ಮಾಡಿದ್ದಾರೆ. ಗಣೇಶ್ ಅವರಿಗೆ 100 ದಿನ, 25 ವಾರ, ವರ್ಷದ ಸಂಭ್ರಮಗಳು ಹೊಸದೇನಲ್ಲ. ಆದರೆ ಇತ್ತೀಚೆಗೆ ಚಿತ್ರವೊಂದು 100 ದಿನ ಪ್ರದರ್ಶನ ಕಾಣುವುದು ಅಪರೂಪ. ಅಂತಹ ಅಪರೂಪದ ಸಾಧನೆ ಬರೆದಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ.
ಆಗಸ್ಟ್ 15ರಂದು ತೆರೆ ಕಂಡಿದ್ದ “ಕೃಷ್ಣಂ ಪ್ರಣಯ ಸಖಿ” ಈಗ ಶತದಿನೋತ್ಸವ ಆಚರಿಸಿದೆ. ಚಿತ್ರ ತೆರೆಕಂಡು ನೂರು ದಿನಗಳಾಗಿದೆ. ಕರ್ನಾಟಕದ ನಾಲ್ಕು ಕಡೆ ಈ ಚಿತ್ರ ನೂರುದಿನಗಳ ಪ್ರದರ್ಶನ ಕಂಡಿದೆ. ಈಗಲೂ ಪ್ರದರ್ಶನವಾಗುತ್ತಿದೆ. ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ಗಣೇಶ್ ಧನ್ಯವಾದ ತಿಳಿಸಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ರಕ್ತಸಿಕ್ತ ಕಥೆಗಳನ್ನೇ ಹೆಚ್ಚು ಮಾಡುತ್ತಿದ್ದ ಶ್ರೀನಿವಾಸ ರಾಜು ಫ್ರೆಶ್ ಎನಿಸುವಂತ ಲವ್ ಸ್ಟೋರಿ ನೀಡಿ ಗೆದ್ದಿದ್ದಾರೆ.
ಕೃಷ್ಣಂ ಪ್ರಣಯ ಸಖಿಯಲ್ಲಿ ಗಣೇಶ್ ಜೊತೆ ಮಾಳವಿಕ ನಾಯರ್ ನಾಯಕಿಯಾಗಿ ನಟಿಸಿದ್ದು, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶಿವಧ್ವಜ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಗಣೇಶ್ ಅಭಿನಯದ 41ನೇ ಚಿತ್ರ. ಅಂದಹಾಗೆ ಸಿನಿಮಾ ಇನ್ನೂ ಒಟಿಟಿಗೆ ಬಂದಿಲ್ಲ.
ಈ ಚಿತ್ರದ ಜೊತೆ ಗಣೇಶ್ ಅವರೂ ಸೋಲಿನ ಸರಪಳಿ ಕಳಚಿಕೊಂಡಿದ್ದಾರೆ. ಅಂದಹಾಗೆ ಇತ್ತೀಚೆಗೆ ಗಣೇಶ್ ಚಿತ್ರಗಳು ನೋಡುವುದಕ್ಕೆ ಆಗುವುದಿಲ್ಲ ಎಂಬ ರೀತಿಯ ಕೆಟ್ಟದಾಗಿ ಇರುತ್ತಿರಲಿಲ್ಲ. ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತಿದ್ದ ಚಿತ್ರಗಳು ಅದಾದ ಮೇಲೆ ಪಲ್ಟಿ ಹೊಡೆಯುತ್ತಿದ್ದವು. ಯೋಗರಾಜ್ ಭಟ್ಟರ ಜೊತೆ ಮಾಡಿದ್ದ ಗಾಳಿಪಟ 2 ಚಿತ್ರವೂ ಸೇರಿದಂತೆ ಯಾವುದೇ ಚಿತ್ರ ದೊಡ್ಡ ಮಟ್ಟದ ಹಿಟ್ ಆಗಿರಲಿಲ್ಲ. ಹಾಗೆಂದು ನಿರ್ಮಾಪಕರಿಗೆ ಲಾಸ್ ಮಾಡಿರಲಿಲ್ಲ. ಇದೀಗ ಆ ಸೋಲಿನ ಸರಪಳಿಯನ್ನೂ ಕೃಷ್ಣಂ ಪ್ರಣಯ ಸಖಿ ಬ್ರೇಕ್ ಮಾಡಿದೆ.



