2021ರಲ್ಲಿ ಗೋಕರ್ಣ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಕೊಡಲಾಗಿತ್ತ. ಅದನ್ನು ಪುನಃ ಗೋಕರ್ಣ ದೇವಸ್ಥಾನಕ್ಕೇ ಮರಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು ಸುಪ್ರೀಂಕೋರ್ಟ್. ಇದೀಗ ಜು. 24ರಂದು ಗೋಕರ್ಣ ದೇವಸ್ಥಾನದ ಆಡಳಿತ ಮಂಡಳಿ ರಚನೆಗಾಗಿ ಸಮಿತಿಯೊಂದನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದು ರಾಮಚಂದ್ರಾಪುರ ಮಠಕ್ಕೆ ಹಿನ್ನಡೆ ಎಂದರೂ ತಪ್ಪಿಲ್ಲ.
ಗೋಕರ್ಣದ ಶ್ರೀಮಹಾಬಲೇಶ್ವರ ಮಠದ ದೇವಸ್ಥಾನದಲ್ಲಿ ಯಾರು ಪೂಜೆ ಮಾಡಬೇಕು ಎಂಬುದೇ ವಿವಾದಕ್ಕೆ ಕಾರಣವಾಗಿತ್ತು. ಸುಮಾರು 12 ವರ್ಷಗಳಿಂದ ವಂಶಪಾರಂಪರ್ಯವಾಗಿ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದಿದ್ದ ಅರ್ಚಕರ ವಂಶಸ್ಥರಿಗೆ ಅಧಿಕಾರ ಇದೆಯೋ.. ಅಥವಾ.. ರಾಮಚಂದ್ರಾಪುರ ಮಠಕ್ಕೆ ಪೂಜೆಯ ಅಧಿಕಾರ ಇದೆಯೋ ಎಂಬ ಪ್ರಶ್ನೆ ಎದ್ದಿತ್ತು. ಆ ವಿವಾದ ಇತ್ತೀಚೆಗೆ ಅಂತ್ಯ ಕಂಡಿತ್ತಾದರೂ.. ಮುಂದಿನದ್ದನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರಕ್ಕೇ ಇತ್ತು. ಈಗ ಅದಕ್ಕೂ ತೀರ್ಪು ನೀಡಿದೆ ಸುಪ್ರೀಂಕೋರ್ಟ್.
2021ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠದಿಂದ ಪುನಃ ದೇವಸ್ಥಾನಕ್ಕೇ ವರ್ಗಾಯಿಸಬೇಕು. ಆದರೆ, ಅದಕ್ಕೊಂದು ಆಡಳಿತ ಮಂಡಳಿ ನೇಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಆಡಳಿತ ಮಂಡಳಿ ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿರಲಿಲ್ಲ. ಆಡಳಿತ ಮಂಡಳಿ ನೇಮಿಸುವ ಸಾಧಕ ಬಾಧಕಗಳ ಬಗ್ಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆ ಬಗ್ಗೆ ವರದಿಯನ್ನು ಕೊಡುವಂತೆ ಸೂಚಿಸಿತ್ತು. ಇದೀಗ ಆ ವರದಿಯನ್ನು ಸ್ವೀಕರಿಸಿರುವ ನ್ಯಾಯಪೀಠ, ಆಡಳಿತ ಮಂಡಳಿ ನೇಮಕಕ್ಕೆ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಹೇಗಿರುತ್ತೆ ನೂತನ ಸಮಿತಿಯ ಕಾರ್ಯವೈಖರಿ.. ಅಧಿಕಾರ..?
ರಾಜ್ಯ ಸರ್ಕಾರದಿಂದ ನೇಮಿಸಲ್ಪಡುವ ಸಮಿತಿಗೆ ಸುಪ್ರೀಂ ಕೋರ್ಟ್ ಒಂದಿಷ್ಟು ನಿಯಮಗಳನ್ನು ವಿಧಿಸಿದೆ. ಅವುಗಳೆಂದರೆ, ಸರ್ಕಾರ ನಾಲ್ವರು ಖಾಸಗಿ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಬಹುದು. ಆದರೆ, ನಾಲ್ವರು ಖಾಸಗಿ ಸದಸ್ಯರು ಉಪಧಿವಾಂತರಾಗಿರಬೇಕು ಎಂದು ಹೇಳಿದೆ. ಸದಸ್ಯರಿಗೆ ಕೇವಲ ಸಲಹೆ ನೀಡುವ ಅಧಿಕಾರ ಇರಲಿದೆ. ಅಂತಿಮ ನಿರ್ಧಾರ ಸಮಿತಿಯ ಅಧ್ಯಕ್ಷರಿಗೆ ಬಿಟ್ಟಿದ್ದು. ಸಮಿತಿ ಸದಸ್ಯರ ನೇಮಕ ಮತ್ತು ಬದಲಾವಣೆ ಹೊಣೆ ರಾಜ್ಯ ಸರ್ಕಾರದ್ದು. ಆದರೆ, ಅವರೂ ಕಮಿಟಿಯ ಅಧ್ಯಕ್ಷರ ಸಲಹೆ ಪಡೆಯಬೇಕು.
2022ರಲ್ಲಿ ಕೂಡಾ ಸಮಿತಿ ಇತ್ತು. ಆದರೆ ನಾಲ್ವರೂ ರಾಮಚಂದ್ರಾಪುರ ಮಠದವರೇ ಆಗಿದ್ದರು. ಹೀಗಾಗಿ ಸಮಿತಿಯ ಪ್ರತಿಯೊಂದಕ್ಕೂ ಆಕ್ಷೇಪ ಎತ್ತಿ, ಅಡ್ಡಿ ಮಾಡುತ್ತಿದ್ದರು. ಇನ್ನು ಮುಂದೆ ಆ ಸದಸ್ಯರು ಇದ್ದರೂ, ಅಂತಿಮ ನಿರ್ದಾರ ಅಧ್ಯಕ್ಷರದ್ದೇ ಆಗಿರುತ್ತದೆ. ಹೀಗಾಗಿ ಇದು ರಾಮಚಂದ್ರಾಪುರ ಮಠಕ್ಕೆ ಹಿನ್ನಡೆ.
ಗೋಕರ್ಣದ ಇತಿಹಾಸ : ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಕ್ರಿ.ಶ. 4 ನೇ ಶತಮಾನದಲ್ಲಿ ಕಟ್ಟಲಾಗಿದೆ. ಇದನ್ನು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದು.
ಇನ್ನು ಈ ಕ್ಷೇತ್ರದ ಪೌರಾಣಿಕ ಕಥೆ ಗೊತ್ತಿರುವಂಥದ್ದೇ. ರಾವಣನು ಹಿಮಾಲಯದಲ್ಲಿ ತಪಸ್ಸು ಮಾಡಿ, ಶಿವನಿಂದ ಪಡೆದ ಆತ್ಮಲಿಂಗವನ್ನು ಶ್ರೀಲಂಕೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಇಳಿದು ಶೌಚಕ್ಕೆ ಹೋಗಲು ನಿರ್ಧರಿಸುತ್ತಾನೆ. ಲಿಂಗಕ್ಕೆ ಭೂಸ್ಪರ್ಶ ಮಾಡಬಾರದೆಂಬ ನಿಯಮವನ್ನು ಶಿವನು ವಿಧಿಸಿದ್ದರಿಂದ ರಾವಣನು, ಅದನ್ನು ಕೆಳಗಿಡದೇ ಅಲ್ಲಿಯೇ ಗೋಪಾಲಕನನ್ನು (ಮಾರುವೇಶದಲ್ಲಿ ಬಂದ ಗಣೇಶ) ಕರೆದು ಆತನ ಕೈಯ್ಯಲ್ಲಿ ಶಿವಲಿಂಗವನ್ನು ಕೊಟ್ಟು ಹೋಗುತ್ತಾನೆ. ಆದರೆ, ರಾವಣನು ತಡವಾಗಿ ಬಂದ ಕಾರಣಕ್ಕಾಗಿ ಗೋಪಾಲಕನು ಅದನ್ನು ಭೂಮಿಯ ಮೇಲಿಡುತ್ತಾನೆ. ಆಗ, ಅದನ್ನು ಕೀಳಲು ರಾವಣನು ಪ್ರಯತ್ನಿಸಿದಾಗ ಲಿಂಗ ತಿರುಚಿದಂತಾಗುತ್ತದೆ. ಹಾಗಾಗಿ, ಇದಕ್ಕೆ ಗೋಕರ್ಣ (ಹಸುವಿನ ಕಿವಿ ಸ್ವರೂಪದ ಲಿಂಗ ಎಂಬರ್ಥ) ಎಂಬ ಹೆಸರು ಬಂತೆಂದು ಪುರಾಣದ ಕಥೆ ಹೇಳುತ್ತದೆ. ಈಗಲೂ ಆ ರೀತಿ ತಿರುಚಿದ ಲಿಂಗಕ್ಕೇ ಪೂಜೆ, ಅಭಿಷೇಕಗಳು ನಡೆಯುತ್ತಿವೆ.



