ಗುಜರಾತಿನಿಂದ ಅಯೋಧ್ಯೆಗೆ ಹೋಗಿ, ವಾಪಸ್ ಬರುತ್ತಿದ್ದ ಕರಸೇವಕರಿದ್ದ ಬೋಗಿಯದು. ಆ ರೈಲಿಗೆ ಹೊರಗಿನಿಂದ ಲಾಕ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಕಿರಾತಕರು. ಜೀವಂತವಾಗಿ ವಿಲವಿಲನೆ ಒದ್ದಾಡಿ ಸುಟ್ಟು ಹೋಗಿದ್ದರು ೫೯ ಜನ. ಅದಾದ ಮೇಲೆ ಇಡೀ ಗುಜರಾತ್ ಹೊತ್ತಿ ಉರಿದಿದ್ದು, ನೂರಾರು ಜನ ಸತ್ತಿದ್ದು, ಭಾರತೀಯ ಚರಿತ್ರೆಯಲ್ಲಿ ಕರಾಳ ಇತಿಹಾಸ. ವಿಚಿತ್ರವೆಂದರೆ ಗುಜರಾತ್ ಹತ್ಯಾಕಾಂಡದ ಮಾತನಾಡುವ, ಖಂಡಿಸುವ ಜನ ಉದ್ದೇಶಪೂರ್ವಕವಾಗಿಯೇ ಇದಕ್ಕೆಲ್ಲ ಮೂಲ ಕಾರಣವಾದ ಗೋದ್ರಾ ರೈಲು ಹತ್ಯಾಕಾಂಡವನ್ನು, ಗೋದ್ರಾ ರೈಲು ದುರಂತ ಎಂದು ಬರೆಯುತ್ತಾರೆ.
ಎರಡು ಪದಗಳ ನಡುವಿನ ವ್ಯತ್ಯಾಸದಲ್ಲೇ ಮನುಷ್ಯ ಧರ್ಮದ ಕ್ರೌರ್ಯವೂ ಇದೆ. ಅಪ್ಪಿತಪ್ಪಿಯೂ ರೈಲಿಗೆ ಬೆಂಕಿ ಇಟ್ಟವರನ್ನು ದುಷ್ಟರು ಎನ್ನುವುದಿಲ್ಲ. ಅದೊಂದು ಆಕಸ್ಮಿಕ ಘಟನೆ ಎಂಬಂತೆ ಬಿಂಬಿಸುವ ಪ್ರಯತ್ನವೇ ಎಲ್ಲ ಕಡೆ ನಡೆದಿತ್ತು. ಆ ಸಂಚನ್ನು ಬಯಲಿಗೆಳೆಯುವ ಸಲುವಾಗಿಯೇ ಸಾಬರಮತಿ ರಿಪೋರ್ಟ್ ಬರುತ್ತಿದೆ.
ಕಳೆದ ವಾರವಷ್ಟೇ ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಆಗಿ, ಜಮ್ಮು ಕಾಶ್ಮೀರ ಮತ್ತೆ ಭಾರತದ ಸಂವಿಧಾನಕ್ಕೆ ಒಳಪಟ್ಟ ಕಥೆ ಹೇಳಿತ್ತು. ಇದೀಗ ಮತ್ತೊಂದು ಸಿನಿಮಾ ಬರುತ್ತಿದೆ. ಸಾಬರಮತಿ ರಿಪೋರ್ಟ್. ಇದು ಗೋದ್ರಾ ಹತ್ಯಾಕಾಂಡದ ಕಥೆ. 2002ರ ಫೆಬ್ರವರಿ 27 ರಂದು ನಡೆದ ಗೋಧ್ರಾ ರೈಲು ಹತ್ಯಾಕಾಂಡ ನಡೆದಿತ್ತು. ೨೨ ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿ ಬರುತ್ತಿದ್ದ ೫೯ ಕರಸೇವಕರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಈ ರೈಲು ಹತ್ಯಾಕಾಂಡದ ಘಟನೆಯನ್ನು ಇಟ್ಟುಕೊಂಡು ‘ಸಬರಮತಿ ಎಕ್ಸ್‌ಪ್ರೆಸ್’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ವಿಕ್ರಾಂತ್ ಮಸ್ಸಿ ಸುದ್ದಿ ವಾಚಕ ಶ್ರಬನ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಹೊರಬಿದ್ದಿದೆ.
‘ಸಬರಮತಿ ರಿಪೋರ್ಟ್’ ಸಿನಿಮಾ ಚಿಕ್ಕ ವಿಡಿಯೋದಲ್ಲಿ ವಿಕ್ರಾಂತ್ ಮಸ್ಸಿ ನ್ಯೂಸ್ ಚಾನೆಲ್ ಒಂದರ ಸ್ಟುಡಿಯೋದಲ್ಲಿ ಕೂತು ಸುದ್ದಿಯನ್ನು ಓದುತ್ತಿರುತ್ತಾರೆ. ಸಬರಮತಿ ಎಕ್ಸ್‌ಪ್ರೆಸ್ ರೈಲು ದುರಂತದ ಸುದ್ದಿಯನ್ನು ಟೆಲಿಪ್ರಾಮ್‌ಟರ್‌ನಲ್ಲಿ ಓದುವಾಗ, ಈ ಘಟನೆ ಬೆಂಕಿ ಆಕಸ್ಮಿಕ ಎಂದು ಹೇಳಲಾಗಿರುತ್ತೆ. ತಕ್ಷಣವೇ ತಡವರಿಸಿದ ನಟ ಇದು ಆಕಸ್ಮಿಕ ಅಲ್ಲ ಎಂದು ಹೇಳುವ ದೃಶ್ಯವಿದೆ.
ಇತ್ತೀಚೆಗೆ ೧೨ ಫೇಲ್ ಚಿತ್ರದ ಮೂಲಕ ಮೆಚ್ಚುಗೆ ಗಳಿಸಿದ್ದ ವಿಕ್ರಾಂತ್ ಮಸ್ಸಿ ಈ ಚಿತ್ರದ ಮೂಲಕ ಮತ್ತೊಂದು ಕುತೂಹಲ ಹುಟ್ಟಿಸಿದ್ದಾರೆ. ರಂಜನ್ ಚಂಡೇಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಮೇ ೩ರಂದು ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ ಗೋದ್ರಾ ಹತ್ಯಾಕಾಂಡದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಜನ, ಈ ರೈಲು ದುರಂತದ ಸತ್ಯವನ್ನೇಕೆ ಹೇಳೋದಿಲ್ಲ ಎನ್ನುವುದು ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯದ ಅಣಕವೂ ಹೌದು.



