ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ನಂತರ ಡಿವೈನ್ ಸ್ಟಾರ್ ಆಗಿದ್ಧಾರೆ. ಕಾಂತಾರ ಚಿತ್ರದಲ್ಲಿ ಪಂಜುರ್ಲಿ ಮತ್ತು ಗುಳಿಗ ದೈವದ ಹಿನ್ನೆಲೆ ಇತ್ತು. ಹೀಗಾಗಿಯೇ ಧರ್ಮಸ್ಥಳದ ಅಣ್ಣಪ್ಪ ಸೇರಿದಂತೆ ಹಲವು ದೈವಗಳ ಬಳಿ ಅಪ್ಪಣೆ ಪಡೆದುಕೊಂಡಿದ್ದ ರಿಷಬ್ ಶೆಟ್ಟಿ, ಕಾಂತಾರ ಚಿತ್ರದ ಪ್ರೀಕ್ವೆಲ್ ಮಾಡುವುದಕ್ಕೂ ಅಪ್ಪಣೆ ಪಡೆದುಕೊಂಡಿದ್ದಾರೆ. ದೈವಗಳ ಆಶೀರ್ವಚನ ಪಡೆದುಕೊಂಡಿದ್ದಾರೆ.
ಕಾಂತಾರ ೧ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ದೈವದ ಆಶೀರ್ವಾದ ಸಿಕ್ಕಿದೆ. ರಿಷಬ್ ಶೆಟ್ಟಿ ಮಂಗಳೂರು ವಜ್ರದೇಹಿ ಮಠದ ದೈವ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನಟ ರಿಷಬ್ ಶೆಟ್ಟಿಯನ್ನು ಕೋಲಕ್ಕೆ ಆಗಮಿಸುವಂತೆ ಈ ಹಿಂದೆ ಆಹ್ವಾನಿಸಿದ್ದರು. ಜನವರಿ 5 ರಂದು ನಡೆದ ಕೋಲಾದಲ್ಲಿ ಭಾಗಿಯಾಗಿ ದೈವದ ಅನುಗ್ರಹ ಪಡೆದುಕೊಂಡ ಅವರಿಗೆ “ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ನಾನಿದ್ದೇನೆ” ಎಂದು ದೈವ ಅಭಯ ನೀಡಿದೆ.
ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಪಂಜುರ್ಲಿ ದೈವ ಆಶೀರ್ವದಿಸಿದೆ. ವಜ್ರದೇಹಿ ಮಠದ ದೈವ ಕೋಲದಲ್ಲಿ ರಿಷಭ್ ಶೆಟ್ಟಿಗೆ ದೈವ ಅಭಯ ನೀಡಿದೆ. ಗುರುಪುರ ವಜ್ರದೇಹಿ ಮಠದಲ್ಲಿ ನಡೆದ ಜಾತ್ರೆಯ ಮೈಸಂದಾಯ ಕೋಲದಲ್ಲಿ ದೈವ ರಿಷಬ್ ಶೆಟ್ಟಿ ತಲೆ ಸವರಿ ಆಶೀರ್ವಾದಿಸಿದೆ. ಇದು ರಿಷಬ್ ಶೆಟ್ಟಿಯವರ ಕಾಂತಾರ ೧ ಚಿತ್ರದ ಉತ್ಸಾಹಕ್ಕೆ ಇನ್ನಷ್ಟು ನೀರೆರೆದಿದೆ.
‘ಕಾಂತಾರ’ ಅಧ್ಯಾಯ 1 ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ನವೆಂಬರ್ ೨೭ರಂದು ಕಾಂತಾರ ೧ಗೆ ಮುಹೂರ್ತ ನೆರವೇರಿದೆ. ಹೊಸ ಕಲಾವಿದರ ಆಯ್ಕೆಯ ಅಡಿಷನ್ ನಡೆಯುತ್ತಿದೆ. ೨೫ ಸಾವಿರಕ್ಕೂ ಹೆಚ್ಚು ಕಲಾವಿದರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತ್ತೊಂದೆಡೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡಾ ಚುರುಕಾಗಿ ನಡೆಯುತ್ತಿವೆ. ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿಯವರ ಪೋಸ್ಟರ್ ಕುತೂಹಲ ಹುಟ್ಟಿಸಿದೆ. ಏಕೆಂದರೆ ಟೀಸರ್ ನೋಡಿದವರು ರಿಷಬ್ ಶೆಟ್ಟಿಯ ಲುಕ್ಕಿಗೆ ಫಿದಾ ಆಗಿದ್ಧಾರೆ. ಅದು ಪರಶುರಾಮನ ಅವತಾರವೋ.. ಗುಳಿಗನ ಅವತಾರವೋ.. ಗೊತ್ತಾಗದೆ ಕುತೂಹಲಗೊಂಡಿದ್ದಾರೆ. ಆ ಕುತೂಹಲವೇ ಪ್ರೇಕ್ಷಕರಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ.



