ಸದ್ಯಕ್ಕೆ ರಾಜ್ಯದಾದ್ಯಂತ ಚರ್ಚೆಯಾಗುತ್ತಿರುವ ವಿಷಯ ಇದು. ಬೆಂಗಳೂರಿನಲ್ಲಿ ಬಿಡಿಎ ಇರುವಂತೆಯೇ ಮೈಸೂರಿನಲ್ಲಿ ಮುಡಾ ಇದೆ. ಮುಡಾ ಎಂದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದರ್ಥ. ಈ ಮುಡಾದವರು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಸೈಟು ಕೊಟ್ಟಿರುವುದು ಅಕ್ರಮ ಎನ್ನುವುದು ಕೆಲವರ ವಾದ. ಇದು ಅಕ್ರಮ ಅಲ್ಲ, ಕಾನೂನುಬದ್ಧವಾಗಿ ನಮಗೆ ಸಿಗಬೇಕಾದ ಭೂಮಿ ಪಡೆದಿದ್ದೇವೆ ಎನ್ನುವುದು ಸಿದ್ದರಾಮಯ್ಯ ಅವರ ವಾದ.
ಏನಿದು ಸೈಟು ಪ್ರಕರಣದ ಕಥೆ? 50:50 ಅನುಪಾತ ಎಂದರೆ ಏನು..?
ರಾಜ್ಯದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿಗೆ ಭೂಮಿ ವಶಪಡಿಸಿಕೊಳ್ಳುವಾಗ ಭೂಮಾಲೀಕರ ಜಮೀನಿಗೆ ಒಂದು ಪರಿಹಾರ ನೀಡುತ್ತವೆ ಅಥವಾ ಮತ್ತೊಂದು ರೀತಿಯಲ್ಲಿ 50 : 50 ಅನುಪಾತದಲ್ಲಿ ಪರ್ಯಾಯ ಭೂಮಿ ಹಂಚುವ ಪದ್ಧತಿ ಇಟ್ಟುಕೊಂಡಿವೆ. ಸರಳವಾಗಿ ಹೇಳಬೇಕೆಂದರೆ ಒಬ್ಬ ವ್ಯಕ್ತಿಯ 1 ಎಕರೆ ಜಮೀನು ವಶಪಡಿಸಿಕೊಂಡು, ಅಭಿವೃದ್ಧಿ ಪಡಿಸಿದರೆ.. ಆ ಒಂದು ಎಕರೆಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಅರ್ಧ ಎಕರೆಯನ್ನು ಪರ್ಯಾಯವಾಗಿ ನೀಡುತ್ತವೆ. 50:50 ಅನುಪಾತ ಎಂದರೆ ಇಷ್ಟೆ. ಅರ್ಧ ಎಕರೆಯನ್ನು ಪ್ರಾಧಿಕಾರ ಮಾರಿದರೆ, ಇನ್ನರ್ಧ ಎಕರೆ (ಪರಿವರ್ತಿತವಾದ, ರಸ್ತೆ, ಚರಂಡಿ ಇತ್ಯಾದಿ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಅಭಿವೃದ್ಧಿಯಾದ) ಭೂಮಿಯನ್ನು ಮೂಲ ಮಾಲೀಕರು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಕೊಳ್ಳಬಹುದು. ಇಲ್ಲಿ ಪಾರ್ವತಮ್ಮನವರಿಗೆ ಮುಡಾ ಸೈಟು ದಕ್ಕಿರುವುದು ಕೂಡಾ ಇದೇ ರೀತಿ.
ಮುಡಾದವರು 1998ರಲ್ಲಿ ಪಾರ್ವತಮ್ಮನವರಿಗೆ ಸೇರಿದ್ದ ಜಮೀನು ವಶಪಡಿಸಿಕೊಂಡಿದ್ದರು. ಆ ಜಮೀನು, ಪಾರ್ವತಮ್ಮನವರಿಗೆ ತವರು ಮನೆಯಿಂದ ಬಂದಿದ್ದು. ಹರಿಶಿನ ಕುಂಕುಮಕ್ಕೆ ಕೊಡುವುದು ಅಂತಾರಲ್ಲ, ಆ ರೀತಿಯಲ್ಲಿ ಬಂದಿದ್ದು. ಆ ಜಮೀನಿಗೂ.. ಸಿದ್ದರಾಮಯ್ಯ ಅವರಿಗೂ ಸಂಬಂಧ ಇಲ್ಲ.
3.16 ಎಕರೆಗೆ (1,48,104 ಚದರ ಅಡಿ) 38,284 ಚದರ ಅಡಿ ಸೈಟುಗಳು :
1998ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ. ಅಂದಹಾಗೆ ಈ ರೀತಿ ಪಾರ್ವತಿಯವರು ಜಮೀನು ಅರ್ಥಾತ್ ಸೈಟುಗಳನ್ನು ಪಡೆದುಕೊಂಡಾಗ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರ ಅಲ್ಲ. ಬಿಜೆಪಿ ಸರ್ಕಾರ. 2021ರಲ್ಲಿ ಸಿಎಂ ಆಗಿದ್ದವರು ಬಸವರಾಜ ಬೊಮ್ಮಾಯಿ.
ವಿವಾದ ಏಕೆ..? ಪ್ರಶ್ನೆಯಾದರೂ ಏನು..?
ಕಡಿಮೆ ಮೌಲ್ಯದ ಜಾಗವನ್ನು ನೀಡಿ ಹೆಚ್ಚಿನ ಮೌಲ್ಯದ ಜಾಗವನ್ನು ಬದಲಿಗೆ ಪಡೆದಿದ್ದಾರೆ. ಇದರಿಂದ ಮುಡಾಗೆ ಆರ್ಥಿಕ ನಷ್ಟವಾಗಿದೆ ಎನ್ನುವುದು ಪ್ರಕರಣ ಬೆಳಕಿಗೆ ತಂದ ಆರ್ʻಟಿಐ ಕಾರ್ಯಕರ್ತ ಗಂಗರಾಜು ಆರೋಪ.1998ರಲ್ಲಿ ವಶಪಡಿಸಿಕೊಂಡ ಭೂಮಿಗೆ 2021ರಲ್ಲಿ ಬದಲಿ ಭೂಮಿ ನೀಡಿದ್ದಾರೆ. 50 : 50 ಅನುಪಾತದ ಅನ್ವಯ ಬದಲಿ ನಿವೇಶನ ನೀಡಲಾಗಿದೆ. 50 : 50 ಪಾಲಿಸಿ ಆರಂಭವಾಗಿದ್ದು 2020ರಲ್ಲಿ 50 : 50 ಅನ್ವಯ ಮುಡಾ ವಶಪಡಿಸಿಕೊಂಡ ಜಾಗವನ್ನು ಮುಡಾ ಅಭಿವೃದ್ಧಿಪಡಿಸಬೇಕು. ಅಭಿವೃದ್ದಿ ಪಡಿಸಿದ ಜಾಗ ನಾಲ್ಕು ಭಾಗ ಮಾಡಲಾಗುತ್ತದೆ. ಒಂದು ಭಾಗ ಭೂ ಮಾಲೀಕರಿಗೆ ಇನ್ನು ಎರಡು ಭಾಗ ರಸ್ತೆ ಉದ್ಯಾನವನ ಸೇರಿ ಇತರ ಬಳಕೆಗೆ. ಮತ್ತೊಂದು ಭಾಗ ಮುಡಾಗೆ ಸೇರುತ್ತದೆ.
ಇದರ ಪ್ರಕಾರ ಪಾರ್ವತಿಯವರು ಭೂಮಿ ನೀಡಿದ್ದು 1998ರಲ್ಲಿ. 50:50 ಅನುಪಾತ ಶುರುವಾಗಿದ್ದೇ 2020ರಲ್ಲಿ. ಅಂದರೆ 50:50 ಅನುಪಾತದ ಹಂಚಿಕೆಯ ಪ್ರಸ್ತಾಪದ ಯೋಚನೆ ಬರುವ 22 ವರ್ಷಗಳ ಹಿಂದೆ ಭೂಮಿ ಕೊಟ್ಟಿದ್ದರು. 22 ವರ್ಷದ ಹಿಂದೆ ಕೊಟ್ಟ ಭೂಮಿಗೆ ಈಗ ಸೈಟು ಪಡೆದಿರುವುದು ಅಕ್ರಮ ಎನ್ನುವುದು ವಿರೋಧಿಗಳ ವಾದ. ಅಲ್ಲದೆ 22 ವರ್ಷಗಳ ಹಿಂದೆ ಕೊಟ್ಟಿದ್ದ ಭೂಮಿಗೆ 2021ರ ಮಾರುಕಟ್ಟೆ ಆಧಾರದಲ್ಲಿ ಪರಿಹಾರ ಕೊಡುವ ಯೋಜನೆಯೇ ತಪ್ಪು ಎನ್ನುವುದು ಇವರ ವಾದ.



