ಅಂಗೈಯಲ್ಲೇ ಆಕಾಶ ತೋರಿಸ್ತಾನೆ. ಅವನ ಮಾತು ಕೇಳ್ತಾ ಇದ್ರೆ ಕೆಲಸ ಸಿಕ್ಕೇ ಬಿಡ್ತು ಅಂತಾ ನಂಬ್ತಾರೆ ಹುಡುಗೀರು. ಮಾತು ಮಾತಲ್ಲೇ ಸ್ವರ್ಗ ತಂದು ಕಣ್ಣೆದುರು ಇಡ್ತಾನೆ. ನಗ್ತಾ ನಗ್ತಾನೇ ಚಂದಮಾಮನ್ನ ನಿಮ್ಮ ಪಕ್ಕದಲ್ಲೇ ಕೂರಿಸ್ತಾನೆ. ಕಿವಿ ಮೇಲೆ ಚೆಂಡು ಹೂವನ್ನಲ್ಲ, ಲಾಲ್ʻಬಾಗ್ʻನ್ನೇ ಇಟ್ಟಿರ್ತಾನೆ..ಗೊತ್ತಾಗಿರಲ್ಲ, ಅಷ್ಟೆ. ಗೊತ್ತಾಗುವ ಹೊತ್ತಿಗೆ ದುಡ್ಡು ಮಿಸ್ ಆಗಿರುತ್ತೆ. ಆಸ್ತಿ ಕೈಬಿಟ್ಟಿರುತ್ತೆ. ಇವನಿಗೆ ಹೆಣ್ಣು ಮಕ್ಕಳೇ ಟಾರ್ಗೆಟ್. ಅದರಲ್ಲೂ ಹಳ್ಳಿಯಿಂದ ಬೆಂಗಳೂರಿಗೆ ಬಂದಿರೋ ಕೆಲಸಕ್ಕಾಗಿ ಹುಡುಕುತ್ತಿರುವ ಹೆಣ್ಣು ಮಕ್ಕಳು.
Job seekers women should be alert about fraudsters̤ special warning for village background women̤
53 ವರ್ಷ ವಯಸ್ಸಿನ ಮೋಹನ್ ಕುಮಾರ್ ಎಂಬಾತನನ್ನ ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಬಣ್ಣ, ಬಣ್ಣದ ಮಾತುಗಳೇ ಬಂಡವಾಳ. ಸರ್ಕಾರಿ ಅಧಿಕಾರಿಗಳು ಹಾಗೂ ಎಲ್ಲ ಸಚಿವರು ನನ್ನ ಜೇಬಿನಲ್ಲಿದ್ದಾರೆ ಎಂದು ನಂಬಿಸುತ್ತಿದ್ದ ಈತ ಹಳ್ಳಿಯಿಂದ ಬಂದ ಯುವತಿಯರು ಹಾಗೂ ಮಹಿಳೆಯರಿಗೆ ವಿಧಾನಸೌಧ (Vidhanasoudha) ತೋರಿಸಿಯೇ ಯಾಮಾರಿಸ್ತಾ ಇದ್ದ. ತಾಲೂಕು ಕಚೇರಿ ಹಾಗೂ ಬಿಬಿಎಂಪಿ ಕಚೇರಿಗಳಲ್ಲಿನ ಸಣ್ಣಪುಟ್ಟ ಪ್ರಮಾಣಪತ್ರಗಳನ್ನು ಮಾಡಿಸಿಕೊಟ್ಟು ನಂಬಿಕೆ ಗಿಟ್ಟಿಸಿಕೊಳ್ಳುತ್ತಿದ್ದ. ಆಮೇಲೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದ ಮೋಹನ್ ಕಮಾರ, ಲಕ್ಷ ಲಕ್ಷ ಹಣ ನುಂಗ್ತಾ ಇದ್ದ.
ಬೆಂಗಳೂರಿನಲ್ಲಿ ಹಳ್ಳಿಗಳಿಂದ ಬಂದು ವಾಸ ಮಾಡಿವ ಯುವತಿಯರು, ಮಹಿಳೆಯರಿಗೆ ಸರ್ಕಾರ ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳನ್ನು ಕೊಡಿಸೋದಾಗಿ ನಂಬಿಸ್ತಾ ಇದ್ದ. ದುಡಿಯುತ್ತಿದ್ದ ಮಹಿಳೆಯರು ತಾವು ದುಡಿದ ಹಣವನ್ನು ಈತನಿಗೆ ಕೊಟ್ಟರೆ, ಹೊಸದಾಗಿ ಬೆಂಗಳೂರಿಗೆ ಬಂದ ಯುವತಿಯರು ಊರಲ್ಲಿರುವ ಪೋಷಕರಿಗೆ ಜಮೀನು ಮಾರಿಸಿ, ಅಥವಾ ಮದುವೆಗೆ ಕೂಡಿಟ್ಟ ಹಣವನ್ನು ಪಡೆದು ಈತನಿಗೆ ಕೊಡುತ್ತಿದ್ದರು. ಈ ಎಲ್ಲ ಹಣವನ್ನು ಪಡೆದು ಒಂದೆರಡು ಬಾರಿ ವಿಧಾನಸೌಧದ ಮುಂದೆ ಹೋಗಿ ಫೋಟೋ ತೆಗೆಸಿಕೊಂಡು ಬಂದು ನಿಮ್ಮ ಫೈಲ್ ರಿಜಿಸ್ಟರ್ ಆಗಿದೆ ಅಂತ ಹೇಳಿ ಮತ್ತಷ್ಟು ಹಣ ವಸೂಲಿ ಮಾಡುತ್ತಿದ್ದ. ಎಲ್ಲ ಆಗಿ ಕೆಲಸ ಕೊಡಿಸುವ ಬಗ್ಗೆ ಆ ಹೆಣ್ಣು ಮಕ್ಕಳು ದುಂಬಾಲು ಬಿದ್ದರೆ ಮೋಹನ ಕುಮಾರನ ಮೊಬೈಲ್ ಸ್ವಿಚ್ ಆಫ್ ಆಗುತ್ತಿತ್ತು. ಹೀಗೆ, ಅನೇಕ ಯುವತಿಯರು ಹಾಗೂ ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಆರೋಪಿ, ತನ್ನನ್ನು ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದು ವಾರ ಅಥವಾ 15 ದಿನಗಳ ಕಾಲ ಬೆಂಗಳೂರು ಬಿಟ್ಟು ಹೊರ ರಾಜ್ಯ ಅಥವಾ ವಿದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದ. ಬ್ಯಾಂಕಾಕಿಗೆ ಹೋಗಿ ಮಜಾ ಮಾಡುತ್ತಿದ್ದ. ಅವನೀಗ ಸಿಕ್ಕಿಬಿದ್ದಿದ್ದಾನೆ.
ಈತನನ್ನು ಅರೆಸ್ಟ್ ಮಾಡಿರುವ ಪೊಲೀಸರು ಗ್ರಾಮೀಣ ಭಾಗದಲ್ಲಿ ಕಾಲೇಜು (college girls) ಹಂತದವರೆಗೆ ಓದಿಕೊಂಡು ಮನೆಯಲ್ಲಿರುವ ಬಡತನವನ್ನು ನೀಗಿಸಲು ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕಂಪನಿಗಳು ಹಾಗೂ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನ ನಡೆಸುವಂತಹ ಹುಡುಗಿಯರು ಹಾಗೂ ಹೆಣ್ಣು ಮಕ್ಕಳೇ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.



