ಒಟ್ಟಗಾಥ ಕಟ್ಟುಕೋ..
ಚುಕುಬುಕು ರೈಲೇ..
ಎನ್ ವೀತು ತೊಟ್ಟಥಿಲ್ಲ…
ಹೀಗೆ ಒಂದೊಂದು ಹಾಡು ಒಂದೊಂದು ಸೆನ್ಸೇಷನ್. ರಸ್ತೆಗಳಲ್ಲಿ.. ಅಂಗಡಿಗಳಲ್ಲಿ.. ಬಸ್ಸು, ಆಟೋ, ಕಾರುಗಳಲ್ಲಿ ಜೆಂಟಲ್ ಮ್ಯಾನ್ ಹಾಡುಗಳು ಸೃಷ್ಟಿಸಿದ್ದ ಸಂಚಲನವೇ ಬೇರೆ. 1993ರಲ್ಲಿ ಅರ್ಜುನ್ ಸರ್ಜಾ-ಮಧುಬಾಲಾ (ಅಣ್ಣಯ್ಯ ಖ್ಯಾತಿ) ನಟಿಸಿದ್ದ ಜೆಂಟಲ್ ಮ್ಯಾನ್ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ಹಿಟ್ ಆಗಿತ್ತು. ಬಾಕ್ಸಾಫೀಸ್ ದೂಳೆಬ್ಬಿಸಿತ್ತು. ಹಾಡುಗಳಂತೂ ಮನೆ ಮಾತಾಗಿದ್ದವು. ಜೆಂಟಲ್ ಮ್ಯಾನ್ ಸಿನಿಮಾ ಭಾರತೀಯ ಚಿತ್ರರಂಗಲ್ಲೊಂದು ದಾಖಲೆ ಬರೆದ ಸಿನಿಮಾ. ಇದೀಗ ಜೆಂಟಲ್ ಮ್ಯಾನ್ 2 ಸಿನಿಮಾ ಶುರುವಾಗಿದೆ. ಒಂದು ವ್ಯತ್ಯಾಸ ಎಂದರೆ ನಿರ್ದೇಶಕ ಶಂಕರ್ ಅವರಲ್ಲ. ನಿರ್ಮಾಪಕರು ಮಾತ್ರ ಅವರೇ ಕೆ.ಟಿ.ಕುಂಜುಮೋನ್. ಇದೀಗ ಜಂಟಲ್ ಮ್ಯಾನ್ 2 ಸಿನಿಮಾ ಸೆಟ್ಟೇರಿದ್ದು, ಆ ಚಿತ್ರದಲ್ಲಿ ಸುಧಾರಾಣಿ ಕೂಡಾ ನಟಿಸುತ್ತಿರುವುದು ವಿಶೇಷ.
ಚೆನ್ನೈನ ರಾಜ ಮುತ್ತಯ್ಯ ಸಭಾಂಗಣದಲ್ಲಿ ನಿರ್ದೇಶಕ ಗೋಕುಲ್ ಕೃಷ್ಣ ಅವರಿಗೆ ನಿರ್ಮಾಪಕ ಕುಂಜುಮೋನ್, ಚಿತ್ರದ ಸ್ಕ್ರಿಪ್ಟ್ ಹಸ್ತಾಂತರಿಸುವ ಮೂಲಕ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ನಾಟು ನಾಟು ಗೀತೆಗೆ ಆಸ್ಕರ್ ಪ್ರಶಸ್ತಿ ಪಡೆದ ಪದ್ಮಶ್ರೀ ಪುರಸ್ಕøತ ಎಂ ಎಂ ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜೆಂಟಲ್ ಮ್ಯಾನ್ ಚಿತ್ರಕ್ಕೆ ಸಂಗೀತ ನೀಡಿದ್ದವರು ಎ.ಆರ್.ರೆಹಮಾನ್.
ಜಂಟಲ್ ಮ್ಯಾನ್ 2 ಚಿತ್ರದಲ್ಲಿ ಚೇತನ್ ಚೀನು ನಾಯಕನಾಗಿದ್ದು, ನಯನತಾರಾ ಚಕ್ರವರ್ತಿ, ಪ್ರಿಯಾ ಲಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಮಿಕ್ಕಂತೆ ಕನ್ನಡ ನಟಿ ಸುಧಾರಾಣಿ, ಸಿತಾರಾ, ಸುಮನ್, ಸತ್ಯಪ್ರಿಯಾ ಸೇರಿದಂತೆ ಬೇರೆಬೇರೆ ಭಾಷೆಗಳ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.



