ಶಿವಣ್ಣ ಮತ್ತು ಸುದೀಪ್. ಇಬ್ಬರೂ ಕನ್ನಡ ಚಿತ್ರರಂಗದ ಧೃವ ನಕ್ಷತ್ರಗಳು. ಸುದೀಪ್ ಅವರು ವೇದಿಕೆಯಲ್ಲಿದ್ದ ವೇಳೆ ಶಿವಣ್ಣ ಇದ್ದು ಬಿಟ್ಟರೆ.. ಅಬ್ಬಾ.. ಅದೆಷ್ಟು ಕಾಲೆಳೆದು ಮಜಾ ತಗೊಳ್ತಾರೆ ಅಂದ್ರೆ.. ನೋಡುತ್ತಿದ್ದವರು ನಕ್ಕು ನಕ್ಕು ಸುಸ್ತಾಗ್ತಾರೆ. ಶಿವಣ್ಣ ಕೂಡಾ ಅಷ್ಟೆ.. ಒಡಹುಟ್ಟಿದ ತಮ್ಮನೇನೋ ಎಂಬಂತೆ ಅದನ್ನೆಲ್ಲ ಎಂಜಾಯ್ ಮಾಡ್ತಾರೆ.
ಶಿವಣ್ಣ ಸಿನಿಮಾಗಳ ಫಂಕ್ಷನ್ನಿನಲ್ಲಿ ಸುದೀಪ್ ಇರುವುದು ಕಾಮನ್ ಅನ್ನೋ ಹಾಗಿದ್ದರೆ, ಸುದೀಪ್ ಜೊತೆ ಶಿವಣ್ಣ ಕೂಡಾ ಇರ್ತಾರೆ ಅನ್ನೋದೂ ಅಷ್ಟೇ ಕಾಮನ್. ಆದರೆ.. ಇದೇ ಸುದೀಪ್ ಮತ್ತು ಶಿವಣ್ಣ ಮಧ್ಯೆ ಒಂದು ಕಾಲದಲ್ಲಿ ಬಿರುಕು ಮೂಡಿತ್ತು. ಅದರ ಕಥೆಯೇ ಇದು.
ದಿ ವಿಲನ್. ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ಸೆನ್ಸೇಷನ್ ಸೃಷ್ಟಿಸಿತ್ತು. ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ನಿನ ಕಾರಣಕ್ಕೇ ಭರ್ಜರಿ ಸುದ್ದಿಯಾಗಿದ್ದ ವಿಲನ್ ಸಿನಿಮಾ ನಿರೀಕ್ಷೆಯ ಮಟ್ಟ ಮುಟ್ಟಲಿಲ್ಲ. ಇನ್ನು ಸ್ಪರ್ಶ ಸಿನಿಮಾ. ಸುದೀಪ್ ಅದಕ್ಕೂ ಮೊದಲೇ ನಟಿಸಿದ್ದರಾದರೂ, ಸ್ಪರ್ಶ ಸಿನಿಮಾವನ್ನು ಒಂದು ರೀತಿಯಲ್ಲಿ ಮೊದಲ ಸಿನಿಮಾ ಪರಿಗಣಿಸಬಹುದು. ಈ ಎರಡೂ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ ಕಿಚ್ಚ ಸುದೀಪ್.
ದಿ ವಿಲನ್ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ದು ಬ್ರಿಲಿಯಂಟ್ ವಿಚಾರ. ನಮ್ಮಿಬ್ಬರ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಈಗಲೂ ಅನಿಸುತ್ತದೆ. ಆ ಕೊರತೆ ಈಗಲೂ ಇದೆ. ಇದೊಂದು ಅಪರೂಪದ ಕಾಂಬಿನೇಷನ್. ಆದಾಗ್ಯೂ ಆ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಆಯಿತು ಎನ್ನುವ ಖುಷಿ ಇದೆ ಎಂದು ನೆನಪಿಸಿಕೊಂಡಿದ್ಧಾರೆ ಕಿಚ್ಚ ಸುದೀಪ್.
ಕರಟಕ ದಮನಕ ಚಿತ್ರದ ಪಾತ್ರಗಳ ಪರಿಚಯದ ವಿಡಿಯೋ ರಿಲೀಸ್ ಮಾಡಿ ಮಾತನಾಡಿರುವ ಸುದೀಪ್, ತಮ್ಮ ಸ್ಪರ್ಶ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದವರು ಶಿವಣ್ಣ ಎಂದು ನೆನಪಿಸಿಕೊಂಡಿದ್ಧಾರೆ.
ಶಿವರಾಜ್ಕುಮಾರ್ ಹಾಗೂ ಪ್ರಭುದೇವ ಒಂದೇ ಫ್ರೇಮ್ನಲ್ಲಿ ಬಂದು ಡ್ಯಾನ್ಸ್ ಮಾಡೋದನ್ನು ನೋಡೋದೇ ಅದ್ಭುತ. ಇಬ್ಬರೂ ಒಳ್ಳೆಯ ಡ್ಯಾನ್ಸರ್ಸ್. ಒಬ್ಬರು ಪರ್ಫೆಕ್ಷನಿಸ್ಟ್ ಆದರೆ, ಇನ್ನೊಬ್ಬರು ಎನರ್ಜಿಯಲ್ಲಿ ಅನ್ಲಿಮಿಟೆಡ್ ಪ್ಯಾಕೇಜ್. ಇಬ್ಬರಿಗೂ ಡ್ಯಾನ್ಸ್ ಇಷ್ಟ. ಇಬ್ಬರಿಗೂ ಒಳ್ಳೆಯ ಕಾಮಿಡಿ ಟೈಮಿಂಗ್ ಇದೆ. ಇದು ಅಪರೂಪದ ಕಾಂಬಿನೇಷನ್. ಇವರು ಈ ಮೊದಲೇ ಒಟ್ಟಾಗಿ ಕೆಲಸ ಮಾಡಬೇಕಿತ್ತು ಎಂದಿರುವ ಸುದೀಪ್, ನನ್ನ, ಶಿವಣ್ಣ ಮಧ್ಯೆ ಗೆಳೆತನ ಬೆಳೆಯೋಕೆ ಕಾರಣ ಗೀತಕ್ಕ ಎಂದೂ ಹೇಳಿದ್ಧಾರೆ.
ಹೌದು, ಡಾ.ರಾಜ್ ಕಪ್ ಹೆಸರಿನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಸುದೀಪ್ ಮತ್ತು ದೊಡ್ಮನೆ ಫ್ಯಾನ್ಸ್ ಮಧ್ಯೆ ಶುರುವಾದ ವಾಗ್ವಾದ, ಸ್ವಲ್ಪ ವಿಪರೀತಕ್ಕೆ ಹೋಗಿತ್ತು. ಅದಾದ ಮೇಲೆ ಕೆಲ ವರ್ಷ ಬಿಗುಮಾನವೇ ತುಂಬಿತ್ತು. ಅದಾದ ಎಷ್ಟೋ ವರ್ಷಗಳ ನಂತರ ಸುದೀಪ್ ಕೆಲವರ ಮಾತು ಕೇಳಬಾರದು, ಡೈರೆಕ್ಟ್ ಆಗಿ ಮಾತನಾಡಿದರೆ ಎಲ್ಲದಕ್ಕೂ ಉತ್ತರ ಸಿಗುತ್ತೆ ಅನ್ನೋ ಮೂಲಕ ಎಲ್ಲಿಂದ ಶುರುವಾಯ್ತು ಅನ್ನ ವಿಷಯ ಹೇಳಿದ್ದರು. ಈಗ ಇಬ್ಬರೂ ಬೆಸ್ಟ್ ಫ್ರೆಂಡ್ಸ್ʻಗಳಂತಿದ್ದಾರೆ. ಹೀಗೆಯೇ ಇರಲಿ.



