ಶಿವಣ್ಣ. 126ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ. ದೊಡ್ಮನೆಯ ದೊಡ್ಡ ಮಗ. ಒಂದ್ ಸಿನಿಮಾ ಅಂದ್ರೆ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ. ದೊಡ್ಮನೆಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪಾರ್ವತಮ್ಮ, ರಾಘವೇಂದ್ರ, ಪುನೀತ್ ನಿರ್ಮಾಪಕರೂ ಆಗಿದ್ಧರು. ಶಿವಣ್ಣ ಅವರ ವೊರಿಜಿನಲ್ ಹೆಸರು ಪುಟ್ಟಸ್ವಾಮಿ. ಸಿನಿಮಾ ಹೆಸರು ಶಿವ ರಾಜಕುಮಾರ್. ಈಗ ಗೀತಾ ಅವರು ಪ್ರತ್ಯೇಕ ಬ್ಯಾನರ್ ಮೂಲಕ ನಿರ್ಮಾಪಕರಾಗಿದ್ದಾರೆ. ಆಸ್ತಿ ಎಷ್ಟಿರಬಹುದು..?
ಗೀತಾ ಅವರ ತಂದೆ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿ. ಡಾ.ರಾಜ್ ಕುಮಾರ್-ಪಾರ್ವತಮ್ಮ ರಾಜಕುಮಾರ್ ಅವರ ಹಿರಿಯ ಸೊಸೆ ಗೀತಾ. ಸೆಂಚುರಿ ಸ್ಟಾರ್ ಶಿವ ರಾಜ್ʻಕುಮಾರ್ ಅವರ ಪತ್ನಿ. ಅವರ ಆಸ್ತಿ ಎಷ್ಟಿರಬಹುದು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇದು ಅಧಿಕೃತ ಲೆಕ್ಕ. ಗೀತಾ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಘೋಷಿಸಿಕೊಂಡಿದ್ಧಾರೆ. ಹೀಗಾಗಿ ಗೀತಾ ಅವರ ಆಸ್ತಿಯ ಲೆಕ್ಕ ಸಿಕ್ಕಿದೆ.
ಆಸ್ತಿ 89 ಕೋಟಿ.. ಸಾಲ ಎಷ್ಟಿದೆ..?
ಪತಿ ಪತ್ನಿ ಇಬ್ಬರ ಆಸ್ತಿಯ ಒಟ್ಟಾರೆ ಲೆಕ್ಕದ ಪ್ರಕಾರ 89.04 ಕೋಟಿ. ಗೀತಾ ಶಿವರಾಜ್‌ಕುಮಾರ್ ಬಳಿ 40.04 ಕೋಟಿ ರೂ. ಆಸ್ತಿ ಇದ್ದು ಪತಿ ಶಿವರಾಜ್‌ಕುಮಾರ್ ಬಳಿ 49 ಕೋಟಿ ರೂ. ಆಸ್ತಿ ಇದೆ. ಕಳೆದ ಆರ್ಥಿಕ ವರ್ಷದಲ್ಲಿ ಗೀತಾ ಶಿವರಾಜ್‌ಕುಮಾರ್ 2 ಕೋಟಿಗೂ ಹೆಚ್ಚು ಗಳಿಸಿದ್ದರೆ ಶಿವಣ್ಣ ಹೆಚ್ಚೂ ಕಡಿಮೆ ಒಂದೂವರೆ ಕೋಟಿ ಆದಾಯ ಗಳಿಸಿದ್ದಾರೆ.
ಶಿವಣ್ಣ ಹತ್ತಿರ 22 ಲಕ್ಷ ಹಾಗೂ ಗೀತಾ ಅವರ ಹತ್ತಿರ 3 ಲಕ್ಷ ಕ್ಯಾಷ್ ಇದೆ. ಶಿವಣ್ಣ ಬಳಿ ಇರುವ ಭೂಮಿ 18 ಕೋಟಿ ರೂ. ಮೌಲ್ಯದ್ದಾದರೆ, ಗೀತಾ ಅವರ ಬಳಿ ಇರುವ ಭೂಮಿಯ ಮೌಲ್ಯ 5.54 ಕೋಟಿ. ಕನಕಪುರದಲ್ಲಿ ಐದೂವರೆ ಎಕರೆ ಕೃಷಿ ಭೂಮಿ ಇದೆ. ಅದರ ಮೌಲ್ಯ 3 ಕೋಟಿ.
ಗೀತಾ ಹೆಸರಿನಲ್ಲಿ ಕನಕಪುರ ಬಳಿ 05 ಎಕರೆ 05 ಗುಂಟೆ ಕೃಷಿ ಭೂಮಿ ಇದ್ದು, ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಕೋರಮಂಗಲ ಬಳಿ 03 ಎಕರೆ 26 ಗುಂಟೆ ಜಮೀನಿದೆ. ಕಮರ್ಷಿಯಲ್ ಬಿಲ್ಡಿಂಗ್ ಕೂಡಾ ಇದೆ. ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ ಕೂಡಾ ಇದೆ.
54 ಕೋಟಿಯ ಬಂಗಲೆ..!
ಮನೆಯ ಮೌಲ್ಯವೇ 54 ಕೋಟಿ ಇದೆ. ಮಾನ್ಯತಾ ಟೆಕ್ ಪಾರ್ಕ್ʻನಲ್ಲಿ 1.48 ಎಕರೆ ಪ್ರದೇಶದಲ್ಲಿ ಕಟ್ಟಲಾಗಿರುವ ಬಂಗಲೆಯ ಮೌಲ್ಯ 54 ಕೋಟಿ ರೂ. ಎಂದು ನಮೂದಿಸಲಾಗಿದೆ. ಭೂಮಿ, ಆಸ್ತಿಗಳೆಲ್ಲ ಪುಟ್ಟಸ್ವಾಮಿ ಹೆಸರಿನಲ್ಲೇ ಇದೆ. ಪುಟ್ಟಸ್ವಾಮಿ, ಶಿವಣ್ಣನವರ ದಾಖಲೆಗಳ ಹೆಸರು. ಶಿವ ರಾಜ್ ಕುಮಾರ್ ಎನ್ನುವುದು ಅವರ ಸಿನಿಮಾ ಹೆಸರು.
ಹನ್ನೊಂದೂವರೆ ಕೆಜಿ ಚಿನ್ನ.. ವಜ್ರ..!
ಗೀತಾ ಅವರ ಬಳಿ 11.54 ಕೆಜಿ ಚಿನ್ನ ಹಾಗೂ ವಜ್ರಾಭರಣಗಳಿವೆ. ಜೊತೆಗೆ 30 ಕೆಜಿ ಬೆಳ್ಳಿ ಇದ್ದು ಇದರ ಮೌಲ್ಯ 3.5 ಕೋಟಿ ರೂ. ಇದೆ.
ಗೀತಾ ಅವರ ಬಳಿ 1.07 ಕೋಟಿ ರೂ. ಮೌಲ್ಯದ ಟೊಯೋಟಾ ಹೈಬ್ರಿಡ್, ಶಿವಣ್ಣನ ಬಳಿ ಟೊಯೋಟಾ ಫಾರ್ಚೂನರ್, ಮಾರುತಿ ಎರ್ಟಿಗಾ ಮತ್ತು ವೋಲ್ವೋ ಎಸ್90 ಕಾರುಗಳಿವೆ. ಇವುಗಳ ಮೌಲ್ಯ 87.70 ಲಕ್ಷ ರೂ.
ಸಾಲದ ವಿಚಾರಕ್ಕೆ ಬಂದರೆ ಶಿವಣ್ಣನಿಗೆ 17 ಕೋಟಿ ರೂಪಾಯಿ ಸಾಲ/ಅಡ್ವಾನ್ಸ್ ಇದೆ. ಇದರಲ್ಲಿ ಸಾಲ 3 ಕೋಟಿ ರೂಪಾಯಿ, ಅಡ್ವಾನ್ಸ್ 13.6 ಕೋಟಿ ರೂಪಾಯಿ. ಗೀತಾ ಅವರದ್ದು 7 ಕೋಟಿ ರೂಪಾಯಿ ಸಾಲ ಇದೆ. ಸಿನಿ ಮುತ್ತು ಸರ್ವಿಸ್ಗೆ 1.64 ಕೋಟಿ ರೂಪಾಯಿ, ಗೀತಾ ಪಿಕ್ಚರ್ಸ್ಗೆ 6 ಕೋಟಿ ರೂಪಾಯಿ, ಧ್ರುವಕುಮಾರ್ಗೆ 2.30 ಕೋಟಿ ರೂಪಾಯಿ ಹಾಗೂ ಇತರರಿಗೆ 2.13 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಶಿವಣ್ಣ.
ಗೀತಾ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 57.40 ಕೋಟಿ ರೂ. ಸಾಲ ಹೊಂದಿದ್ದರೆ, ಪತಿ ಶಿವಣ್ಣ ಅವರ ಹತ್ತಿರ 6 ಕೋಟಿ ಸಾಲ ಪಡೆದಿದ್ದಾರೆ. ಇತರೆ ಸಾಲಗಳು 57.55 ಲಕ್ಷ ಇದೆ.
ಕೋಟಕ್ ಬ್ಯಾಂಕ್‌ನಲ್ಲಿ ಶಿವಣ್ಣಗೆ 3.94 ಕೋಟಿ ರೂ. ಸಾಲ ಇದೆ. ಕೆಲ ಸಿನಿಮಾಗಳು ಮತ್ತು ಜಾಹೀರಾತುಗಳಿಗಾಗಿ 13.06 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ. ಉದ್ಯಮ ಹಾಗೂ ಮನೆ ಸ್ವತ್ತು ತಮ್ಮ ಆದಾಯದ ಮೂಲ.



