ಒಬ್ಬ ನಿರ್ದೇಶಕ ಒಂದು ಸಿನಿಮಾ ಯಶಸ್ಸು ಕಂಡರೆ ಬೆನ್ನಲ್ಲೇ ಮತ್ತೊಂದು ಸಿನಿಮಾ ಮಾಡ್ತಾರೆ. ಅದು ಕೇವಲ ನಿರ್ದೇಶಕರಿಗಷ್ಟೇ ಅಲ್ಲ, ಒಂದು ಯಶಸ್ವಿ ತಂಡದಲ್ಲಿದ್ದ ನಟ, ನಟಿ, ತಂತ್ರಜ್ಞರಿಗೂ ಅನ್ವಯಿಸುತ್ತದೆ. ಅದರೆ ʻಲವ್ ಇನ್ ಮಂಡ್ಯʼ ಎಂಬ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್ ಅರಸು ಅಂತಾರೆ, 10 ವರ್ಷಗಳ ನಂತರ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಆ ನಿರ್ದೇಶಕರಿಗೆ ಸಾಥ್ ಕೊಟ್ಟಿರುವುದು ಗೋಲ್ಡನ್ ಸ್ಟಾರ್ ಗಣೇಶ್.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೃತಾ ಅಯ್ಯರ್ (ಅಮೃತಾ ಅಯ್ಯಂಗಾರ್ ಅಲ್ಲ) ಜೋಡಿಯಾಗಿದ್ದಾರೆ. ಈ ಜೋಡಿಯನ್ನು ತೆರೆ ಮೇಲೆ ತರುವುದಕ್ಕೆ ಸಿದ್ಧವಾಗಿರೋದು ಅರಸು ಅಂತಾರೆ. ಅಮೃತಾ ಅಯ್ಯರ್, ತೆಲುಗಿನ ಹನುಮಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವರು. ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಆದರೆ ಮೂಲತಃ ಕನ್ನಡತಿ ಎನ್ನುವುದು ವಿಶೇಷ. ನಾನು ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ಮೊದಲ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಗಣೇಶ್ ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ ಅಮೃತಾ ಅಯ್ಯರ್.
ಇನ್ನು ಅರಸು ಅಂತಾರೆ ʻಲವ್ ಇನ್ ಮಂಡ್ಯʼ ಖ್ಯಾತಿಯ ನಿರ್ದೇಶಕ. ಲವ್ ಇನ್ ಮಂಡ್ಯ ಸಿನಿಮಾ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಅರಸು ಅಂತಾರೆ ಲವ್ ಇನ್ ಮಂಡ್ಯ ಸಿನಿಮಾ ಮಾಡಿದ್ದು 2014ರಲ್ಲಿ. ಬರೋಬ್ಬರಿ ಒಂದು ದಶಕದ ನಂತರ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.
ಲವ್ ಇನ್ ಮಂಡ್ಯ ಚಿತ್ರದ ಕರೆಂಟು ಹೋದ ಟೈಮಲ್ಲಿ.., ಒಪ್ಕೊಂಡ್ ಬಿಟ್ಲು ಕಣ್ಲಾ ಪ್ರೀತಿ ಮಾಡೋಕೆ…. ಹಾಡುಗಳು ಇವತ್ತಿಗೂ ಜನಪ್ರಿಯವಾಗಿವೆ.
ಗಣೇಶ್ ಜೊತೆಗಿನ ಹೊಸ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ರಾಮನವಮಿಯ ದಿನವೇ ಮುಹೂರ್ತವಾಗಿದೆ. ಗಣೇಶ್ ಸದ್ಯಕ್ಕೆ ಪಿನಾಕಾ ಮತ್ತು ಯುವರ್ಸ್ ಸಿನ್ಸಿಯರ್ಲಿ ರಾಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಯಲ್ಲೇ ಈ ಸಿನಿಮಾವೂ ಶುರು ಆಗುತ್ತಿದೆ. ಪಿನಾಕಾ, ಗಣೇಶ್ ಸಿನಿಜರ್ನಿಯ ಅತ್ಯಂತ ವಿಭಿನ್ನ ಚಿತ್ರವಾಗಲಿದ್ದರೆ, ಯುವರ್ ಸಿನ್ಸಿಯರ್ಲಿ ರಾಮ್ ಸಿನಿಮಾ ರಮೇಶ್ ಅರವಿಂದ್ ಜೊತೆ 2ನೇ ಸಿನಿಮಾ.
ಇನ್ನು ರವಿ ಭದ್ರಾವತಿ ನಿರ್ಮಾಣದ ಚಿತ್ರದಲ್ಲಿ ರಂಗಾಯಣ ರಘು, ಕಾಕ್ರೋಚ್ ಸುಧೀ, ರವಿಶಂಕರ್ ಗೌಡ ಮೊದಲಾದವರು ನಟಿಸುತ್ತಿದ್ದಾರೆ. ಅರಸು ಅಂತಾರೆ ಚಿತ್ರಕಥೆಗೆ ಮಹೇಶ್ ದೇವ್ ಡಿ ಎನ್ ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನ ಹಾಗೂ ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನವಿರಲಿದೆ.
ಅರಸು ಅಂತಾರೆ ಅವರು ನನಗೆ 2019 ರಲ್ಲಿ ಕಥೆ ಹೇಳಲು ಭೇಟಿ ಮಾಡಿದ್ದರು. ಆನಂತರ ಕೋವಿಡ್ ಮುಂತಾದ ಕಾರಣದಿಂದ ಆಗ ಕಥೆ ಕೇಳಲು ಆಗಿರಲಿಲ್ಲ. ಇತ್ತೀಚೆಗೆ ಅರಸು ಅವರು ಈ ಚಿತ್ರದ ಕಥೆ ಹೇಳಿದಾಗ ಕೇಳಿ ಬಹಳ ಇಷ್ಟವಾಯಿತು. ಮೂಲತಃ ಅವರು ಒಬ್ಬ ಬರಹಗಾರನಾಗಿರುವುದರಿಂದ ಕಥೆಯನ್ನು ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ. ಜನರಿಗೂ ಈ ಕಥೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಅರಸು ಅವರು ಹೇಳಿದ ಹಾಗೆ ಈ ಚಿತ್ರದಲ್ಲಿ ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡದಲ್ಲಿ ತುಂಬಾ ಒಳ್ಳೆಯ ಬರಹಗಾರರಿದ್ದಾರೆ. ಅವರೆಲ್ಲಾ ಸಿನಿಮಾ ಮಾಡಲು ಮುಂದೆ ಬರಬೇಕು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಖಂಡಿತ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದಿದ್ದಾರೆ ಗಣೇಶ್.



