ದಂಡುಪಾಳ್ಯ ಡೈರೆಕ್ಟರ್ ಗಣೇಶ್ ಸಿನಿಮಾ ಮಾಡ್ತಾರೆ ಎಂದಾಗ ಸ್ಯಾಂಡಲ್ʻವುಡ್ ಅಚ್ಚರಿಯಿಂದ ಬೆರಗಾಗಿ ನೋಡಿತ್ತು. ಏಕೆಂದರೆ ಶ್ರೀನಿವಾಸ ರಾಜು ರಗಡ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ.
ಏಕೆಂದರೆ ಶ್ರೀನಿವಾಸ್ ರಾಜು ಅವರ ನನ್ನವನು, ಶಿವಂ, ಶಿವಂ, ಬ್ರಹ್ಮ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ.. ಎಲ್ಲ ಚಿತ್ರಗಳಲ್ಲೂ ರಕ್ತ, ಹಿಂಸೆ ಇದ್ದದ್ದೇ. ದೆವ್ವವೂ ಕೂಡಾ ಇವೆ. ಅಂತಹ ಶ್ರೀನಿವಾಸ ರಾಜು, ಹಿಂಸೆಯ ಪರಮಾವಧಿ ತೋರಿಸಿದ್ದು ದಂಡುಪಾಳ್ಯ ಸರಣಿಯಲ್ಲಿ.
ಇನ್ನು ಗಣೇಶ್ ಅವರಾದರೋ.. ಮುಖ ನೋಡಿದರೇನೇ ಪ್ರೀತಿಸಬೇಕು ಎನ್ನಿಸುವ ರೊಮ್ಯಾಂಟಿಕ್ ಹೀರೋ. ಗೋಲ್ಡನ್ ಸ್ಟಾರ್ ಬಿರುದು ಕೊಟ್ಟಿರೋ ಅಭಿಮಾನಿಗಳು ಅವರಿಂದ ಇಷ್ಟ ಪಡುವುದೂ ಅಂತಹ ಚಿತ್ರಗಳನ್ನೇ. ಇವರಿಬ್ಬರೂ ಸೇರಿ ಮಾಡಿರುವ ಸಿನಿಮಾ ಕೃಷ್ಣಂ ಪ್ರಣಯಂ ಸಖಿ. ಇದೀಗ ಆ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.
‘ಕೃಷ್ಣಂ ಪ್ರಣಯ ಸಖಿ’ ಇದು ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನ ಮೊದಲ ಸಿನಿಮಾ. ‘ಬಾನದಾರಿಯಲಿ’ ಶೂಟಿಂಗ್ ವೇಳೆನೇ ಈ ಸಿನಿಮಾ ಅನೌನ್ಸ್ ಆಗಿತ್ತು. ಅಲ್ಲಿಂದ ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.
ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಚಿತ್ರೀಕರಣ ನಡೆದಿದೆ. ಸದ್ಯಕ್ಕೀಗ ಈ ಸಿನಿಮಾ ಡಬ್ಬಿಂಗ್ ನಡೆಯುತ್ತಿದ್ದು, ಅದೂ ಕೂಡ ಮುಕ್ತಾಯ ಹಂತ ತಲುಪಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಲಿದೆ.
ಗಣೇಶ್ ಅವರ ಇಮೇಜಿಗೆ ತಕ್ಕಂತೆ ಚಿತ್ರದಲ್ಲಿ ಐದು ಹಾಡುಗಳಿವೆ. ಅರ್ಜುನ್ ಜನ್ಯ ಮ್ಯೂಸಿಕ್ಕು. ನಾಯಕಿಯಾಗಿರೋದು ಮಾಳವಿಕ ನಾಯರ್. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮೊದಲಾದವರು ನಟಿಸಿರೋ ಚಿತ್ರಕ್ಕೆ ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಪಕರಾಗಿದ್ದಾರೆ.
ಇದುವರೆಗೂ ರಕ್ತ ಸಿಕ್ತ ಸಿನಿಮಾಗಳನ್ನೇ ಮಾಡಿರುವ ನಿರ್ದೇಶಕ ಶ್ರೀನಿವಾಸ ರಾಜು, ಟೈಟಲ್ ಮೂಲಕವೇ ಇದು ಗಣೇಶ್ ಅವರ ಜಾನರ್ ಸಿನಿಮಾ ಎಂದಿದ್ದಾರೆ. ಗಣೇಶ್ ಅವರಿಗಿಂತ ಹೆಚ್ಚು ನಿರೀಕ್ಷೆ ಶ್ರೀನಿವಾಸ ರಾಜು ಅವರ ಮೇಲಿದೆ. ಏಕೆಂದರೆ ಕತ್ತಲಲೋಕದ ಕಥೆಗಳನ್ನೇ ಹೇಳುತ್ತಿದ್ದ ಶ್ರೀನಿವಾಸ ರಾಜು, ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕಥೆ ಹೇಳ್ತಿದ್ದಾರೆ.



