ಗಣೇಶ್.. ಎಲ್ಲಿಗೇ ಹೋಗಲಿ.. ಅವರ ಜೊತೆ ಅಭಿಮಾನಿಗಳು ಹೆಜ್ಜೆ ಹಾಕೋದು ಈ ಹಾಡಿಗೆ.
ಜೇನ ದನಿಯೋಳೆ
ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ
ಇಳಿದೋಳೆ ಜೀವ ಝಲ್ ಎಂದಿದೆ
ಅಲ್ಲಿ ನೋಡಿ.. ದ್ವಾಪರ.. ಇಲ್ಲಿ ನೋಡಿ ದ್ವಾಪರ.. ಯಾವ ರೀಲ್ಸ್ ನೋಡಿದರೂ.. ದ್ವಾಪರ.. ದ್ವಾಪರ.. ದ್ವಾಪರ..
ಕೃಷ್ಣಂ ಪ್ರಣಯ ಸಖಿಯ ಈ ಹಾಡು ಗುಂಗು ಹತ್ತಿಸಿಬಿಟ್ಟಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಗತ್ಯವಾಗಿದ್ದ ಹಿಟ್ ಚಿತ್ರ ಕೃಷ್ಣಂ ಪ್ರಣಯ ಸಖಿಯಿಂದ ಸಿಕ್ಕಿದೆ. ಚಿತ್ರದ ನಾಯಕ ನಟಿ ಮಾಳವಿಕಾ ನಾಯರ್ ಕೂಡ ಇದನ್ನ ಹಾಡಿದ್ದಾರೆ. ರಂಗಾಯಣ ರಘು ಡ್ಯಾನ್ಸ್ ಮಾಡಿದ್ದಾರೆ. ಈ ಚಿತ್ರದ ಈ ಹಾಡು ಹುಟ್ಟಿದ್ದು ಹೇಗೆ..?
ಅರ್ಜುನ್ ಜನ್ಯ ಅವರ ಪ್ರಕಾರ ʻಚಿತ್ರದ ಕಥೆ ಮತ್ತು ಹಾಡಿನ ಸಮಯವನ್ನು ನಿರ್ದೇಶಕ ಶ್ರೀನಿವಾಸ ರಾಜು ಅವರು ಹೇಳಿದರು. ನಾಯಕ ನಟ ಗಣೇಶ್ ಮೊದಲ ಬಾರಿ ನಾಯಕಿಯನ್ನ ನೋಡ್ತಾರೆ. ಆಗ ಅವರ ಮನದಲ್ಲಿ ಪ್ರೀತಿ ಹುಟ್ಟುತ್ತದೆ. ಡಿವೈನ್ ಫೀಲ್ ಕೂಡ ಬರುತ್ತದೆ. ಖುಷಿಗೆ ಪಾರವೇ ಇರೋದಿಲ್ಲ. ಆತನಿಗೆ ದೇವತೆಯನ್ನು ಕಂಡ ಫೀಲಿಂಗ್ ಬರುತ್ತದೆ. ಅಂತಹ ಖುಷಿ, ಎಕ್ಸೈಟ್ಮೆಂಟ್ ಮತ್ತು ಡಿವೈನ್ ಫೀಲ್ ಇರುವ ಹಾಡನ್ನ ಕಂಪೋಸ್ ಮಾಡಿ ಎಂದರು.
ಹೀಗಾಗಿಯೇ ಹಾಡನ್ನು ಕಂಪೋಸ್ ಮಾಡೋವಾಗ ಡಿವೈನ್ ಫೀಲ್‌ಗೆ ಸೂಫಿ ಸಂಗೀತ ಹಾಗೂ ಖವ್ವಾಲಿ ಹೀಗೆ ಎರಡನ್ನೂ ಬಳಸಿದ್ದೇನೆ. ನಾಯಕನ ಡಿವೈನ್ ಫೀಲ್‌ಗೆ ಸೂಫಿ ಸಂಗೀತ ಮತ್ತು ಖುಷಿಗೆ ಸ್ಪೀಡ್ ಟ್ಯೂನ್ ಎರಡನ್ನೂ ಕೊಟ್ಟಿದ್ದೇನೆʼ ಎಂದು ಹೇಳಿಕೊಂದ್ದಾರೆ.
ಮ್ಯೂಸಿಕ್ ಕೇಳಿದ ಚಿತ್ರ ಗೀತೆಯ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಕೇವಲ ಟ್ಯೂನಿಗೆ ಏನು ಬೇಕೋ ಹಾಗೆ ಪದಗಳನ್ನ ಜೋಡಿಸಿದ್ರಂತೆ. ಅವರು ನಾಯಕಿಯನ್ನ ನೋಡಲೇ ಇಲ್ಲ. ಆದರೆ, ಹಾಡು ನೋಡಿದವರೆಲ್ಲ ಇದು ನಾಯಕಿಯನ್ನು ನೋಡಿಯೇ ಬರೆದಿದ್ದಾರೆ ಎಂಬ ಫೀಲ್ ಬರುವಂತೆ ಚೆಂದದ ಸಾಹಿತ್ಯ ಕೊಟ್ಟಿದ್ದಾರೆ ಎನ್ನುತ್ತಾರೆ ಅರ್ಜುನ್ ಜನ್ಯ.
ದ್ಪಾಪರ ಹಾಡನ್ನ ರೆಡಿ ಮಾಡಿದ್ಮೇಲೆ ಗಾಯಕರ ಆಯ್ಕೆ ವಿಷಯ ಬಂತು. ಆಗ ಸರಿಗಮಪ ಖ್ಯಾತಿಯ ಜಸ್ಕರನ್ ಸಿಂಗ್ ಅವರಿಂದಲೇ ಹಾಡಿಸೋದಾಗಿ ಹೇಳಿದೆ. ಟೀಮ್‌ನಲ್ಲಿ ಒಂದು ಭಯವೂ ಇತ್ತು. ಹೊಸಬ ಬೇರೆ. ಹೇಗೋ ಏನೋ..? ಅನ್ನೋ ಭಯವಿತ್ತು. ಆದರೆ, ನನಗೆ ವಿಶ್ವಾಸ ಇತ್ತು. ಗೆದ್ದರೂ ನನಗೆ…ಸೋತರೂ ನನಗೆ ಅಂದುಕೊಂಡು ರಿಸ್ಕ್ ತಗೊಂಡೆ.
ಈಗ ಹಾಡು ಸೂಪರ್ ಹಿಟ್ ಆಗಿದೆ ಎನ್ನುವ ಅರ್ಜುನ್ ಜನ್ಯ, ಜಸ್ಕರನ್ ಅವರಿಂದಲೇ ಹಾಡಿಸಿದ್ದು ಏಕೆ ಅನ್ನೋದನ್ನೂ ಹೇಳ್ತಾರೆ.
ದ್ಪಾಪರ ಹಾಡಿನಲ್ಲಿ ಸೂಫಿ ಫೀಲ್ ಕೂಡ ಇದೆ. ಜಸ್ಕರನ್ ಸಿಂಗ್ ಮೂಲತಃ ಉತ್ತರ ಭಾರತದವರು. ಹೀಗಾಗಿ ಅವರನ್ನೇ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ. ಜಸ್ಕರನ್ ಇಡೀ ಹಾಡನ್ನು ಎರಡುಮೂರು ಗಂಟೆಗಳಲ್ಲಿ ಹಾಡಿ ಮುಗಿಸಿಕೊಟ್ರು ಎನ್ನುವ ಅರ್ಜುನ್ ಜನ್ಯ ಅವರಿಗೆ ಹಾಡು ಹಿಟ್ ಆಗಿರುವುದು ಖುಷಿಯನ್ನೇನೋ ಕೊಟ್ಟಿದೆ. ಆದರೆ, ಈ ಮಟ್ಟಿಗೆ ಹಿಟ್ ಆಗುತ್ತೆ ಎನ್ನುವ ನಿರೀಕ್ಷೆ ಅವರಿಗೂ ಇರಲಿಲ್ಲವಂತೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ೨ನೇ ವಾರಕ್ಕೆ ಕಾಲಿಟ್ಟಿದೆ. ಭರ್ಜರಿ ಹಿಟ್ ಆಗುತ್ತಿದೆ.



