ಗೋಲ್ಡನ್ ಸ್ಟಾರ್ ಗಣೇಶ್ ರೊಮ್ಯಾಂಟಿಕ್ ಆಗಿ ಹಾಡಿ ಕುಣೀತಿದ್ದರೆ.. ಅಭಿಮಾನಿಗಳು.. ಡಿಸೈನ್ ಡಿಸೈನಾಗಿ ರೀಲ್ಸ್ ಮಾಡ್ತಿದ್ದಾರೆ. ಪ್ರೊಡ್ಯೂಸರು ಖುಷಿಯಾಗಿದ್ದಾರೆ. ಹಾಕಿದ ಬಂಡವಾಳದ ಜೊತೆಗೆ ಲಾಭ ಬಂದ ಖುಷಿ ಅವರದ್ದು. ಚಿತ್ರರಂಗವೂ ಖುಷಿಯಾಗಿದೆ.. ಅಂತೂ.. ಇಂತೂ.. ಸಿನಿಮಾಗಳು ಗೆಲ್ತಿದ್ದಾವಲ್ಲ.. ಎಂಬ ಸಂಭ್ರಮ ಇಂಡಸ್ಟ್ರಿಯವರದ್ದು. ಆದರೆ..ಕೃಷ್ಣಂ ಪ್ರಣಯ ಸಖಿಯ ಹಾಡಿಗೂ.. ಗುಂಡಿ ಬಿದ್ದ ರಸ್ತೆಗಳಿಗೂ ಏನು ಸಂಬಂಧ..? ಏಕೆಂದರೆ.. ಸರ್ಕಾರವನ್ನು ಬಯ್ದು ಉಗಿದು ಉಪ್ಪಿನಕಾಯಿ ಹಾಕೋರಿಗೂ.. ಹಾಡು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.
ಬೆಂಗಳೂರಿನ ರಸ್ತೆ ಗುಂಡಿಗಳಿಗೂ.. ದ್ವಾಪರ ಹಾಡಿಗೂ ಏನ್ ಸಂಬಂಧ..?
ಬೆಂಗಳೂರಿನಲ್ಲೀಗ ಎಲ್ಲಿ ನೋಡಿದರೂ.. ರಸ್ತೆಗಳಲ್ಲಿ ಗುಂಡಿಗಳೇ ಕಾಣುತ್ತಿವೆ. ಗುಂಡಿಗಳೇ ರಸ್ತೆಗಳಾಗಿವೆ. ಜನ ಸರ್ಕಾರಕ್ಕೆ ಬೈತಿದ್ದಾರೆ. ಸಚಿವ ಕೃಷ್ಣ ಭೈರೇಗೌಡ ಅಂತಹವರೇ ಏನೂ ಮಾಡಲಿಕ್ಕಾಗದೆ, ಬಹಿರಂಗವಾಗಿಯೇ ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಉದ್ಯಮಿಗಳು ಸರ್ಕಾರವನ್ನು ಟೀಕೆ ಮಾಡ್ತಿದ್ದಾರೆ. ಆದರೆ.. ಈ ಜನಾಕ್ರೋಶ.. ಹಾಡಾಗಿ ರೂಪುಗೊಂಡಿದೆ. ದ್ವಾಪರ ಹಾಡಿನ ಟ್ಯೂನಿನಲ್ಲೇ ಓದಿಕೊಳ್ಳಿ..
ಹಾಡಿರುವುದು ಹೀಗೆ..
ರೋಡಲೀ ಸಾಗುತಾ.. ಹೊಂಡವ ದಾಟುತಾ..
ಜೀವವೇ ಬಾಯಿಗೆ ಬಂದಂತಿದೆ..
ಹಾಡಲಿ ಹಾಡುತಾ..
ಈ ರಸ್ತೆಯ ಬಗ್ಗೆ ಹೇಳಲು..
ನಾಚಿಕೆ ಆಗಿದೆ.. ನಿಮಗಿಲ್ಲವೇ..
ಅಯ್ಯೋ.. ಅಯ್ಯೋ.. ನಮಗ್ಯಾರ್ ಗತಿ..
ಹೇಳ್ಳೋರ್ ಕೇಳ್ಳೋರ್ ಇಲ್ಲ ಈ ಸರ್ತೀ
ಅಯ್ಯೋ…. ಉಂದು ಎಂಚಿ ಸಾವುಯೇ
ನೀರ ಹೊಳೆಯಂತೆ..
ರಸ್ತೆಯೂ ಮಧ್ಯೆ
ಹೊಂಡವೇ ತುಂಬಿದೆ..
ಕುಂಟು ಸಾಕಾಗಿ..
ಹೊಂಡ ತಪ್ಪಿಸಲು
ಜೀವ ಝಲ್ಲೆಂದಿದೆ..
ಬೇರೆ ದಾರೀನು ಇಲ್ಲ ನಮಗಿನ್ನು..
ಹೊಂಡವೇ ಉಳಿದಿದೆ..
ನಾವು ಹಾಕಿದ್ದ ವೋಟಿನ ಬೆಲೆಯೂ..
ಈಗ ಗೊತ್ತಾಗಿದೆ..
ಹಾಡಿನ ಸಾಹಿತ್ಯ ಇದು. ಟ್ಯೂನು ಕೃಷ್ಣಂ ಪ್ರಣಯ ಸಖಿ ಚಿತ್ರದ ವೈರಲ್ ಆಗಿರುವ ದ್ವಾಪರದ ಹಾಡು. ಅಂದ ಹಾಗೆ ಈ ಹಾಡನ್ನು ಬರೆದು ಹಾಡಿದವರು ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕುರ್ಕಾಲು ಜಯನಗರ ನಿವಾಸಿಯಾಗಿರುವ ಮದನ್ ಮಣಿಪಾಲ. ಇವರು ಮೂಲತಃ ಒಬ್ಬ ಹಾಡುಗಾರ. ಆದರೆ ಈ ರಸ್ತೆಗಳನ್ನು ನೋಡಿ ಹಾಡೊಂದು ಹಾಗೇ ಹುಟ್ಟಿಕೊಂಡು ಈಗ ಜಾಲತಾಣಗಳಲ್ಲಿ, ಈಗ ವೈರಲ್ ಕೂಡಾ ಆಗಿದೆ.
ಇವರು ಈ ಹಾಡು ಕಟ್ಟಿದ್ದಕ್ಕೆ ಕಾರಣ, ಕರಾವಳಿಯ ರಸ್ತೆಗಳ ಹೊಂಡಗಳು. ಗುಂಡಿಗಳು. ಆದರೆ, ಈ ಹಾಡನ್ನ ಬೆಂಗಳೂರು ಜನ ಬೆಂಗಳೂರು ರಸ್ತೆಗಳಿಗೂ ಅಪ್ಲೈ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಖ್ಯಾತ ಉದ್ಯಮಿಗಳೂ ಈ ಹಾಡನ್ನು ಟ್ವೀಟ್ ಮಾಡ್ತಿದ್ದಾರೆ.
ದ್ವಾಪರದ ಹಾಡಿಗೆ ಉಡುಪಿಯವರು ಹೊಂಡ ಗುಂಡಿಗಳ ಸಾಹಿತ್ಯ ಬರೆದರು. ಇಷ್ಟ ಪಟ್ಟವರು.. ಈಗ ಅದನ್ನೇ ರೀಲ್ಸ್ ಮಾಡ್ತಿದ್ದಾರೆ. ಯಾವ ಏರಿಯಾದ ರಸ್ತೆ ಗುಂಡಿಗಳನ್ನೂ ಹಾಕಿದರೂ.. ಹಾಡು ಅರ್ಥ ಕಳೆದುಕೊಳ್ಳಲ್ಲ. ಅಜ್ಜ ಅಜ್ಜಿ ಟೂವ್ಹೀಲರ್‌ನಲ್ಲಿ ಕಷ್ಟಪಟ್ಟು ಹೋಗ್ತಿದ್ದನ್ನು ನೋಡಿ ಈ ಹಾಡು ಬರೆದೆ ಎಂದು ಹೇಳಿಕೊಳ್ತಾರೆ ಮದನ್ ಮಣಿಪಾಲ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರೋ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಜನಪ್ರಿಯ ಹಾಡಿದು.
“ದ್ವಾಪರಾ ದಾಟುತಾ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ….’ ಹಾಡು ಎಷ್ಟರಮಟ್ಟಿಗೆ ವೈರಲ್ ಆಗಿದೆ ಎಂದರೆ.. ಯಾವುದೇ ಸೋಷಿಯಲ್ ಮೀಡಿಯಾ ನೋಡಿದರೂ.. ಇದೇ ಹಾಡು ಕಿವಿಗೆ ಬೀಳುತ್ತಿದೆ.
ಜೇನ ದನಿಯೋಳೆ.. ಮೀನ ಕಣ್ಣೋಳೆ..
ಸೊಬಗೆ ಮೈತುಂಬಿದೆ..
ಹಂಸ ನಡೆಯೋಳೆ.. ಎದೆಗೆ ಇಳಿದೋಳೆ..
ಜೀವ ಝಲ್ ಎಂದಿದೆ..
ಸಿನಿಮಾದಲ್ಲಿ ಈ ಹಾಡು ಬರೆದಿರೋದು ಡಾ.ವಿ. ನಾಗೇಂದ್ರ ಪ್ರಸಾದ್. ಜಸ್ಕಿರಣ್ ಸಿಂಗ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗಣೇಶ್ ಹಾಗೂ ಮಾಳವಿಕ ನಾಯರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಥಿಯೇಟರುಗಳಲ್ಲಿ ಕೃಷ್ಣಂ ಪ್ರಣಯ ಸಖಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರೆ.. ಇತ್ತ ಹಾಡುಗಳು ವಿಭಿನ್ನ ರೀತಿಯಲ್ಲಿ ವೈರಲ್ ಆಗುತ್ತಿವೆ.
ಇತ್ತೀಚೆಗೆ ಈ ರೀತಿ ಹಾಡುಗಳು.. ಹಾಡಿನ ಸಾಹಿತ್ಯ.. ಜನರ ಆಕ್ರೋಶದ ಅಭಿವ್ಯಕ್ತಿಗೆ ಬಳಕೆಯಾಗಿದ್ದು ಅಪರೂಪ. ಒಂದಂತೂ ಸತ್ಯ.. ಜನ ಮೊದಲು ಆಕ್ರೋಶಗೊಳ್ಳುತ್ತಾರೆ. ಸರ್ಕಾರ ಕೇಳಿಸಿಕೊಳ್ಳುವುದಿಲ್ಲ. ಏನು ಮಾಡಿದರೂ.. ಇವರ ಕಿವಿಗೆ ತಾಕೋದಿಲ್ಲ ಎಂದಾಗ ಲೇವಡಿ ಮಾಡಲು ಶುರು ಮಾಡುತ್ತಾರೆ. ಕಾಮಿಡಿ ಮಾಡ್ತಾರೆ. ಅದು ಶಾಶ್ವತವಾಗಿ ಜನರ ಮನಸ್ಸಲ್ಲಿ ಬೇರೂರುತ್ತದೆ. ಇದು ಸರ್ಕಾರದವರ ಅರಿವಿಗೂ ಬರಬೇಕು.



