ನಾವು.. ಕನ್ನಡಿಗರು ಹೇಗೆ ಪುನೀತ್ ರಾಜ್ ಕುಮಾರ್ ಅವರನ್ನ ಪವರ್ ಸ್ಟಾರ್ ಎಂದು ಕರೆಯುತ್ತೇವೆಯೋ.. ಹಾಗೆಯೇ ತೆಲುಗಿನಲ್ಲಿ ಪವರ್ ಸ್ಟಾರ್ ಎಂದು ಕರೆಸಿಕೊಳ್ಳೋ ಹೀರೋ ಪವನ್ ಕಲ್ಯಾಣ್. ಪವನ್ ಕಲ್ಯಾಣ್, ಕೇವಲ ನಟರಷ್ಟೇ ಅಲ್ಲ, ನಿರ್ದೇಶಕರೂ ಹೌದು. ಮಾರ್ಷಲ್ ಆರ್ಟ್ಸ್ ಪ್ರವೀಣ. ಪವನ್ ಅನ್ನೋದು ಸಿನಿಮಾ ನಟನಾಗುವುದಕ್ಕೂ ಮುಂಚೆ ಮಾರ್ಷಲ್ ಆರ್ಟ್ಸ್ ಪ್ರದರ್ಶನ ಮಾಡಿದ್ದಕ್ಕೆ ಸಿಕ್ಕ ಬಿರುದು. ವೊರಿಜಿನಲ್ ಹೆಸರು ಕಲ್ಯಾಣ್ ಎಂದಷ್ಟೇ. ಕರಾಟೆ ಬ್ಲಾಕ್ ಬೆಲ್ಟ್ ಪಡೆದಿರುವ ಪವನ್ ಕಲ್ಯಾಣ್ ಆತ್ಮರಕ್ಷಣೆ ಕಲಿಸುವ ಶಾಲೆ ನಡೆಸುತ್ತಿದ್ಧಾರೆ. ಅಂತಹ ಪವನ್ ಕಲ್ಯಾಣ್ ಈಗ ಆಂಧ್ರಪ್ರದೇಶದ ಗೇಮ್ ಚೇಂಜರ್.
ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಅವರಿಗೆ ಇರುವ ಶಕ್ತಿಯೇ ಬೇರೆ. ಅವರ ಆವರೇಜ್ ಸಿನಿಮಾ ಕೂಡಾ ಭರ್ಜರಿ ಲಾಭ ಮಾಡುತ್ತೆ. ಚಿರಂಜೀವಿ ಅವರ ಸಹೋದರರಾಗಿರುವ ಪವನ್ ಕಲ್ಯಾಣ್ ಅವರನ್ನ ಪವರ್ ಸ್ಟಾರ್ ಎಂದೇ ಜನ ಪ್ರೀತಿಯಿಂದ ಕರೀತಾರೆ. ಅಂತಹ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ರಾಜಕೀಯದ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದಾರೆ.
ಜನಸೇನಾ ಪಾರ್ಟಿ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ‘ಪವರ್ ಸ್ಟಾರ್’ ಪವನ್ ಕಲ್ಯಾಣ್‌ಗೆ ಈ ಬಾರಿ ಗೆಲುವು ಸಿಕ್ಕಿದೆ. ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಶಾಸಕರಾಗಿ ಆಯ್ಕೆ ಆಗಿದ್ದಾರಷ್ಟೇ ಅಲ್ಲ, ಅವರ ಪಕ್ಷದ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ್ದ ಎಲ್ಲ 21 ಕ್ಷೇತ್ರಗಳಲ್ಲೂ ಗೆದ್ದಿದ್ಧಾರೆ.
ಹಾಗೆ ಗೆದ್ದಿದ್ದೇ ತಡ, ಪವನ್ ಕಲ್ಯಾಣ್ ಜಗನ್ʻಗೆ ಸಿನಿಮಾ ಶೈಲಿಯಲ್ಲೇ ಹೊಡೆದಿರುವ ನಿನ್ನನ್ನು, ನಿನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ವಾಮನನಂತೆ ತುಳಿಯದೇ ಹೋದರೆ, ಸರ್ವನಾಶ ಮಾಡದೇ ಹೋದರೆ.. ನನ್ನ ಹೆಸರು ಪವನ್ ಕಲ್ಯಾಣ್ ಅಲ್ಲ, ಬಾಯ್ ಬಾಯ್ ಜಗನ್ ಎಂಬ ಭಾಷಣಗಳು ವೈರಲ್ ಆಗುತ್ತಿವೆ.
2014 ರಲ್ಲಿಯೇ ಶುರುವಾದ ಜನಸೇನಾ ಗೆದ್ದಿರಲಿಲ್ಲ. 2019ರ ಆಂಧ್ರಪ್ರದೇಶ ವಿಧಾಸನಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ ಕಳಪೆ ಸಾಧನೆ ಮಾಡಿತ್ತು. 137 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಜನಸೇನಾ ಪಾರ್ಟಿಯು ಗೆಲುವು ಪಡೆದುಕೊಂಡಿದ್ದು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ. ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಭೀಮಾವರಂ & ಗಾಜುವಾಕಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿಯೂ ಸೋಲುಂಡಿದ್ದರು. ಚಲಾವಣೆಯಾದ ಒಟ್ಟಾರೆ ಮತಗಳಲ್ಲಿ ಜನಸೇನಾ ಪಾರ್ಟಿಗೆ ಸಿಕ್ಕಿದ್ದು 5.53% ಮತಗಳು ಮಾತ್ರ.
ಆದರೆ, ಈ ಬಾರಿ ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದ ಪವನ್ ಕಲ್ಯಾಣ್, ಭರ್ಜರಿ ಕಂಬ್ಯಾಕ್ ಮಾಡಿದ್ಧಾರೆ. ಎದುರಾಳಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ʻಆರ್ ಕಾಂಗ್ರೆಸ್ ಅಕ್ಷರಶಃ ದೂಳೀಪಟವಾಗಿದೆ. 175 ಸದಸ್ಯ ಬಲದ ಅಸೆಂಬ್ಲಿಯಲ್ಲಿ ವೈಎಸ್ʻಆರ್ʻಪಿ ಗೆದ್ದಿರುವುದು ಕೇವಲ 11 ಕ್ಷೇತ್ರಗಳಲ್ಲಿ. ಕಳೆದ ಬಾರಿ ಜಗನ್ ಅವರ ಪಕ್ಷ 151 ಕ್ಷೇತ್ರಗಳಲ್ಲಿ ಗೆದ್ದಿತ್ತು.
ಚಂದ್ರಬಾಬು ನಾಯ್ಡು ಅವರನ್ನು ಸಿಎಂ ಆಗಿದ್ದ ಜಗನ್ ಜೈಲಿಗೆ ಹಾಕಿದಾಗ, ಪವನ್ ಕಲ್ಯಾಣ್ ಅವರೇ ಟಿಡಿಪಿ ಹಾಗೂ ಜನಸೇನಾದ ಮುನ್ನೆಲೆಗೆ ನಿಂತು ಹೋರಾಟ ನಡೆಸಿದ್ದರು. ತಮ್ಮನ ಸಾಧನೆಗೆ ಚಿರಂಜೀವಿ ಕೂಡಾ ಖುಷಿಯಾಗಿದ್ಧಾರೆ. ಚಿರಂಜೀವಿ ಅವರು ತಮ್ಮ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ ವಿಲೀನ ಮಾಡಿದಾಗ ಹುಟ್ಟಿಕೊಂಡ ಪಕ್ಷವೇ ಜನಸೇನಾ. ಅಣ್ಣನ ವಿರುದ್ಧವೇ ನಿಂತರೂ.. ಪವನ್ ಕಲ್ಯಾಣ್, ಅಣ್ಣನ ರಾಜಕೀಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಬಾಂಧವ್ಯ ಚೆನ್ನಾಗಿಯೇ ಇತ್ತು. ಚಿರಂಜೀವಿ, ಪವನ್ ಕಲ್ಯಾಣ್ ಅವರನ್ನು ಪವನ್ ಎನ್ನುವುದಿಲ್ಲ. ವೊರಿಜಿನಲ್ ಹೆಸರು ಕಲ್ಯಾಣ್ ಎಂದೇ ಕರೆಯತ್ತಾರೆ..
ನನ್ನ ಪ್ರೀತಿಯ ಕಲ್ಯಾಣ್ ಬಾಬು (ಪವನ್ ಕಲ್ಯಾಣ್), ಆಂಧ್ರಪ್ರದೇಶದ ಜನರ ಬೃಹತ್ ಮತ್ತು ಅದ್ಭುತ ಜನಾದೇಶದಿಂದ ನಾನು ರೋಮಾಂಚನಗೊಂಡಿದ್ದೇನೆ. ನೀನು ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್. ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಲ್ಲಬೇಕು! ಆಂಧ್ರಪ್ರದೇಶದ ಜನರ ಬಗ್ಗೆ ನಿನಗಿರುವ ಆಳವಾದ ಕಾಳಜಿ, ನಿನ್ನ ದೂರದೃಷ್ಟಿ, ರಾಜ್ಯದ ಅಭಿವೃದ್ಧಿಯ ಬಗ್ಗೆ ನೀನು ಹೊಂದಿರುವ ಬಯಕೆ, ನಿನ್ನ ತ್ಯಾಗ, ನಿನ್ನ ರಾಜಕೀಯ ತಂತ್ರಗಳು ಈ ಅದ್ಭುತ ಫಲಿತಾಂಶದಲ್ಲಿ ಪ್ರಭಾವ ಬೀರಿವೆ. ನಾನು ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ, ನಿನಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ಧಾರೆ ಚಿರಂಜೀವಿ.
ಚಿರಂಜೀವಿ ಕೂಡಾ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಪ್ರಜಾರಾಜ್ಯಂ ಅದ್ಧೂರಿಯಾಗಿ ಆರಂಭಗೊಂಡಿದ್ದರೂ, ಗೆಲುವು ಸಾಧಿಸಲು ವಿಫಲವಾಗಿತ್ತು. ಆನಂತರ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದ ಚಿರಂಜೀವಿ, ಕೇಂದ್ರದಲ್ಲಿ ಸಚಿವರಾಗಿದ್ದರು. ಆಮೇಲೆ, ರಾಜಕೀಯಕ್ಕೆ ಗುಡ್ ಬೈ ಹೇಳಿ ಈಗ ಚಿತ್ರರಂಗದಲ್ಲೇ ಮುಂದುವರೆಯುತ್ತಿದ್ಧಾರೆ.



