ಬೇರೆ ದೇಶಗಳಲ್ಲಿನ ಕ್ರಿಕೆಟ್ ಸ್ಟೈಲ್ ಬೇರೆ. ಭಾರತದ ಕ್ರಿಕೆಟ್ ಸ್ಟೈಲ್ ಬೇರೆ. ಇಲ್ಲಿ ಆಟಗಾರರು, ಕೇವಲ ಆಟಗಾರರಷ್ಟೇ ಅಲ್ಲ, ಸ್ಟಾರ್‌ಗಳೂ ಹೌದು. ಅದನ್ನು ತೊಡೆದು ಹಾಕುತ್ತೇನೆ ಎಂದು ಬಂದವರೆಲ್ಲ ಸೋತು ಸುಣ್ಣವಾಗಿದ್ದಾರೆ. ಹಾಗೆ ನೋಡಿದರೆ ಉದ್ದೇಶ ಸರಿ ಇದ್ದರೆ ಗೆಲ್ಲಬಹುದೇನೋ.. ಆದರೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಹೋದರೆ ಸೋಲು ಕಟ್ಟಿಟ್ಟ ಬುತ್ತಿ. ಗೌತಮ್ ಗಂಭೀರ್ ವಿಷಯದಲ್ಲಿ ಆಗಿರುವುದೂ ಇದೇ. ರೋಹಿತ್-ಕೊಹ್ಲಿ ಇಬ್ಬರೂ ಗೌತಮ್ ಗಂಭೀರ್ ಬಂದ ಮೇಲೆ ಸ್ಟಾರ್ ಆದ ಆಟಗಾರರಲ್ಲ. ಆದರೆ, ಗಂಭೀರ್ ಕೋಚ್ ಆಗಿ ಎಂಟ್ರಿ ಕೊಟ್ಟ ಮೇಲೆ ಇಬ್ಬರ ಟೆಸ್ಟ್ ಕ್ರಿಕೆಟ್ ಜೀವನವನ್ನು ಚಿವುಟಿದ್ದು ಮಾತ್ರ ಗಂಭೀರ್. ಅದು ಈಗ ದೊಡ್ಡದಾಗಿ, ವಿಷವಾಗಿ ತಂಡವನ್ನೇ ಸುಡುತ್ತಿದೆ. ಹೇಗೆಂದರೆ..
ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ರೋಹಿತ್ ಸತತ 3ನೇ ಅರ್ಧ ಶತಕ ಸಿಡಿಸಿದರು. ಇತ್ತೀಚೆಗೆ ಭಾರತ ಆಡಿದ ಬಹುತೇಕ ಏಕದಿನ ಪಂದ್ಯಗಳಲ್ಲಿ ಪಂದ್ಯ ಗೆಲ್ಲಿಸಿರುವುದೇ ಈ ಇಬ್ಬರು. ಆಸ್ಟ್ರೇಲಿಯಾದಲ್ಲಿ ಪಂದ್ಯ ಶ್ರೇಷ್ಟ, ಸರಣಿ ಶ್ರೇಷ್ಟ ಎರಡನ್ನೂ ಪಡೆದಿದ್ದು ರೋಹಿತ್. ರಾಂಚಿಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿರಾಟ್. ಚಾಂಪಿಯನ್ಸ್ ಟ್ರೋಫಿಯಲ್ಲೂ ಅಷ್ಟೇ, ಇಬ್ಬರೇ ಹೆಚ್ಚು ಅವಾರ್ಡ್ ಗೆದ್ದುಕೊಂಡಿದ್ದು. ಈಗ ಆಗಿರುವುದೇನೆಂದರೆ.. ಇಬ್ಬರೂ ಗೌತಮ್ ಗಂಭೀರ್ ಜೊತೆ ಮಾತನಾಡ್ತಿಲ್ಲ.
ನೆಟ್ಸ್‌ನಲ್ಲಿ, ಡ್ರೆಸ್ಸಿಂಗ್ ರೂಂನಲ್ಲಿ ಇಬ್ಬರೂ ಗಂಭೀರ್ ಜೊತೆ ಠೂ ಬಿಟ್ಟಿದ್ದಾರಂತೆ. ಇದ್ದುದರಲ್ಲಿ ರೋಹಿತ್ ಶರ್ಮಾ ಜಗಳವನ್ನಾದರೂ ಆಡ್ತಿದ್ದಾರೆ. ಆದರೆ, ಕೊಹ್ಲಿ ಕ್ಯಾರೇ ಅಂತಿಲ್ಲ. ಗಂಭೀರ್ ಎದುರಿಗೆ ಬಂದರೆ ಫೋನ್ ಹಿಡ್ಕೊಂಡು ರೀಲ್ಸ್ ನೋಡ್ತಾ ಸೈಡಿಗೆ ಹೋಗ್ತಾರಂತೆ. ಆದರೆ, ಇದೇ ವಿರಾಟ್ ಮತ್ತು ರೋಹಿತ್ ಇಬ್ಬರೂ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ.. ಅವರೊಂದಿಗೆ ಪುಟ್ಟ ಮಕ್ಕಳಂತೆ ಇರುತ್ತಿದ್ದರು. ಗೇಲಿ ಮಾಡುತ್ತಾ, ತರಲೆ, ತಮಾಷೆ ಮಾಡುತ್ತಾ.. ಆಟದಲ್ಲಿ ಸೀರಿಯಸ್ ಆಗಿಯೇ ಇದ್ದವರು. ಆದರೆ, ಗಂಭೀರ್ ಬಂದ ಮೇಲೆ ಇದ್ದಕ್ಕಿದ್ದಂತೆ ಗೇಮ್ ಚೇಂಜ್ ಆಗಿದೆ.
ರಾಹುಲ್ ದ್ರಾವಿಡ್ ಅವರೇ ಹೇಳಿರುವಂತೆ ತಂಡವನ್ನು ಕಟ್ಟಿದ್ದು ರೋಹಿತ್. ಸಾಥ್ ಕೊಟ್ಟಿದ್ದಷ್ಟೇ ನನ್ನ ಕೆಲಸ. ತಂಡ ಹೀಗಿದ್ದರೆ ಚೆನ್ನ ಎಂದು ಹೇಳುತ್ತಿದ್ದೆ. ಜಾರಿಗೆ ತಂದಿದ್ದು ರೋಹಿತ್ ಶರ್ಮಾ. ವಿರಾಟ್ ಕೂಡಾ ಅದನ್ನು ಫಾಲೋ ಮಾಡಿದರು. ನನ್ನ ಸಲಹೆಗಳನ್ನು ಯಾವತ್ತೂ ಇಗ್ನೋರ್ ಮಾಡಲಿಲ್ಲ ಎಂದೆಲ್ಲ ಹೊಗಳಿದ್ದರು. ಅದು ಗಂಭೀರ್ ಕೋಚ್ ಆಗುತ್ತಿದ್ದಂತೆ ಬದಲಾಗಿದೆ.
ಗಂಭೀರ್ ಬಂದ ಮೇಲೆ ಒಳ್ಳೆಯ ಆಟವಾಡುತ್ತಿದ್ದವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್.. ಹೀಗೆ ಬ್ಯಾಟ್ಸ್‌ಮನ್ನುಗಳ ಪಟ್ಟಿ ಬೆಳೆದರೆ, ಬೌಲರುಗಳಲ್ಲಿ ಬೂಮ್ರಾ ಕೂಡಾ ಸೈಡ್ ಲೈನ್ ಆಗುತ್ತಿದ್ದಾರೆ. ಹೀಗೇಕೆ ಎಂದರೆ ಆಟ ದೊಡ್ಡದು. ಸ್ಟಾರ್ ಗಿರಿ ಅಲ್ಲ ಎನ್ನುವ ವಾದ ಗಂಭೀರ್ ಅವರದ್ದು. ಆಟದಿಂದಲೇ ಸ್ಟಾರ್ ಆದರೆ ಏನು ಸಮಸ್ಯೆ ಎನ್ನುವ ಪ್ರಶ್ನೆಗೆ ಗಂಭೀರ್ ಉತ್ತರ ಸ್ಟಾರ್ ಆಟಗಾರರೇ ಇರಬಾರದು ಎನ್ನುವುದು.
ಈ ಸಣ್ಣತನವೇ ವಿರಾಟ್-ರೋಹಿತ್ ಇಬ್ಬರೂ ಟೆಸ್ಟ್ ಆಡುವ ಉತ್ಸಾಹ ಇದ್ದರೂ, ನಿವೃತ್ತಿ ಘೋಷಿಸುವಂತಾಗಿದೆ. ಈಗ 2027ರ ಏಕದಿನ ವಿಶ್ವಕಪ್. ಆ ವಿಶ್ವಕಪ್ ಟೀಂನಲ್ಲಿ ಇರಬೇಕು ಎನ್ನುವುದು ವಿರಾಟ್, ರೋಹಿತ್ ಹಠ. ಏನಾದರೂ ಮಾಡಿ ತಪ್ಪಿಸಬೇಕು ಎನ್ನುವುದು ಗಂಭೀರ್ ಹಠ. ಹೀಗಾಗಿಯೇ ಪ್ರಾಬ್ಲಂ ಶುರುವಾಗಿದೆ.
ಟೆಸ್ಟ್ ತಂಡ ಹಳ್ಳ ಹಿಡಿದಿರುವ ರೀತಿಯನ್ನು ನೋಡಿ, ಬಿಸಿಸಿಐ ಅಗರ್ಕರ್ ಮತ್ತು ಗಂಭೀರ್ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡ್ತಾ ಇದೆ.



