ಪಾಕಿಸ್ತಾನ್ ಜಿಂದಾಬಾದ್.. ಇದು ನಾಸಿರ್ ಹುಸೇನ್ ಆಯ್ಕೆಯಾದ ವೇಳೆ ಕೇಳಿಬಂದ ಘೋಷಣೆ. ಈಗ ಪಾಕ್ ಪರ ಘೋಷಣೆ ಕೂಗಿದ್ದು ಸತ್ಯ ಎಂದಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಇಷ್ಟಕ್ಕೂ ಎಫ್.ಎಸ್.ಎಲ್. ವರದಿ ಪ್ರಕಾರ.. ಎಂದು ಹೇಳಲಾಗಿದೆಯೇ ಹೊರತು, ಕೂಗಿದ್ದು ಸತ್ಯ ಎಂದು ಹೇಳಿಲ್ಲ ಎಂಬ ವಿಚಿತ್ರ ವಾದವೂ ಕೇಳಿ ಬರ್ತಾ ಇದೆ. ಆದರೆ, ಆ ರೀತಿಯ ಘೋಷಣೆ ಕೂಗಿಯೇ ಇಲ್ಲ ಎಂದ ಮೇಲೆ ಅರೆಸ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇರಲಿಲ್ಲ ಎಂಬುದು ಲಾಜಿಕ್ಕು. ಒಟ್ಟಿನಲ್ಲಿ ಅರೆಸ್ಟ್ ಆಗಿರುವ ಮೂವರೂ ಕೂಡಾ ಕಾಂಗ್ರೆಸ್ ಕಾರ್ಯಕರ್ತರು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿ, ದೆಹಲಿ ಕಿಶನ್‌ಗಂಜ್‌ನ ಮೊಹಮ್ಮದ್ ಇಲ್ತಾಜ್ ಹಾಗೂ ಶಿವಾಜಿನಗರದ ಜಯಮಹಲ್‌ನ ಮುನಾವರ್ ಅಹ್ಮದ್ ಅರೆಸ್ಟ್ ಆದವರು.
ಮೊಹಮ್ಮದ್ ಶಫಿ ನಾಶಿಪುಡಿ ಮೆಣಸಿನ ಕಾಯಿ ವ್ಯಾಪಾರಿ. ಕೋಟ್ಯಂತರ ರೂಪಾಯಿ ವ್ಯವಹಾರವಿದೆ. ಕೋಟ್ಯಧಿಪತಿ.
ಇನ್ನು ಮೊಹಮ್ಮದ್ ಇಲ್ತಾಜ್, ದೆಹಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ.
ಇನ್ನು ಮುನಾವರ್ ಅಹ್ಮದ್ ಕೂಡಾ ಕಾಂಗ್ರೆಸ್ ಕಾರ್ಯಕರ್ತ. ಉನ್ನತ ಹುದ್ದೆಯಲ್ಲೇನೂ ಇಲ್ಲ.
ಆತುರಗೆಟ್ಟು ಮರ್ಯಾದೆ ಕಳೆದುಕೊಂಡ ನಾಯಕರು..!
ವಿಧಾನಸಭಾ ಅಧಿವೇಶನದ ಸಮಯದಲ್ಲೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ನಾಸಿರ್ ಹುಸೇನ್ ಗೆಲುವಿನ ಸಂಭ್ರಮದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೇಳಿ ಬಂದಿತ್ತು. ನಾಸಿರ್ ಹುಸೇನ್ ರಿಯಾಕ್ಷನ್ ಕೇಳಿದವರಿಗೆ ಏಕವಚನದಲ್ಲಿ ಬೈದು ಟೀಕೆಗೆ ಗುರಿಯಾಗಿದ್ದರು.
ಇನ್ನು ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಅಷ್ಟೇ ಏಕೆ ಡಿಸಿಎಂ ಶಿವಕುಮಾರ್ ಅವರೂ ಕೂಡಾ ಅಂತಹ ಘಟನೆಯೇ ನಡೆದಿಲ್ಲ. ನಾನು ಹತ್ತಾರು ಸಲ ಕೇಳಿದ್ದೇನೆ. ಅವರು ನಾಸಿರ್ ಹುಸೇನ್ ಜಿಂದಾಬಾದ್ ಎಂದು ಕೂಗಿದ್ಧಾರೆ. ಅಷ್ಟೆ. ಎಲ್ಲವನ್ನೂ ಮಾಧ್ಯಮಗಳು ಸೃಷ್ಟಿ ಮಾಡುತ್ತಿವೆ. ಮೀಡಿಯಾಗಳೇ ಸುಳ್ಳು ಹೇಳ್ತಿವೆ. ಟಿವಿ ಚಾನೆಲ್ಲುಗಳು ಸುದ್ದಿಯನ್ನು ತಿರುಚುತ್ತಿವೆ ಎಂದೆಲ್ಲ ಮಾತನಾಡಿದ್ದರು. ಈಗ ಅವರು ಮುಖ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಇದೆ. ವಿಧಾನಸಭಾ ಚುನಾವಣೆಯನ್ನು ಹೀನಾಯವಾಗಿ ಸೋತಿದ್ದ ಬಿಜೆಪಿ ಮತ್ತು ಜೆಡಿಎಸ್ʻಗಳಿಗೆ ಕಾಂಗ್ರೆಸ್ಸಿಗರು ಸ್ವತಃ ಬ್ರಹ್ಮಾಸ್ತ್ರವೊಂದನ್ನು ಎತ್ತಿ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾದರಿಯಾಗಲಿ :
ಇದೇ ವಿಷಯದ ಬಗ್ಗೆ ಸಿಎಂ ಆಗಿರುವ ಸಿದ್ದರಾಮಯ್ಯ ಕೂಡಾ ಮಾತನಾಡಿದರು. ಆದರೆ, ಎಲ್ಲಿಯೂ ಸಂಯಮ ಕಳೆದುಕೊಳ್ಳಲಿಲ್ಲ. ಪೊಲೀಸ್ ವಿಚಾರಣೆ ನಡೆಯುತ್ತಿದೆ. ಎಫ್ಫೆಸ್ಸೆಲ್ ವರದಿ ಬರಬೇಕಿದೆ. ಕೂಗಿದ್ದು ದೃಢಪಟ್ಟಿದ್ದರೆ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಷ್ಟೇ ಹೇಳ್ತಿದ್ದರು. ವಿವಾದಾತ್ಮಕ ವಿಷಯಗಳಲ್ಲಿ ಮುತ್ಸದ್ಧಿ ನಾಯಕ ಹೇಗಿರಬೇಕು ಅನ್ನೋದಕ್ಕೆ ಮಾದರಿಯಾಗಿ ನಡೆದುಕೊಂಡವರು ಸಿದ್ದರಾಮಯ್ಯ. ಸೋಷಿಯಲ್ ಮೀಡಿಯಾ ಮತ್ತು ಬಿಜೆಪಿಯವರ ಕೆಣಕುವ ಮಾತುಗಳಿಗೆ ಸಂಯಮ ಕಳೆದುಕೊಳ್ಳಲಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದಕ್ಕೆ ಮಾದರಿಯಾಗಿ ನಡೆದುಕೊಂಡರು.
ಹಾಗೆ ನೋಡಿದರೆ ಡಿಸಿಎಂ ಆಗಿರುವ ಶಿವಕುಮಾರ್ ಅವರಿಗೆ ಕೂಡಾ ರಾಜಕೀಯವಾಗಿ ಅನುಭವವಾಗಿದೆ. ಹಿರಿತನವಿದೆ. ಇನ್ನು ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರ ಸಂಯಮದ ಸಾಸಿವೆ ಕಾಳಿನಷ್ಟಾದರೂ ಸಂಯಮ ತೆಗೆದುಕೊಳ್ಳಬಹುದಿತ್ತು. ಎಲ್ಲದಕ್ಕೂ ರಿಯಾಕ್ಟ್ ಮಾಡುವ, ಎಲ್ಲವನ್ನೂ ತಿಳಿದವರಂತೆ ಆಡುವ, ತನಗೆ ಗೊತ್ತಿರುವುದು ಮಾತ್ರ ಸತ್ಯ, ಉಳಿದವರೆಲ್ಲರೂ ದಡ್ಡರು ಎಂಬಂತೆ ವರ್ತಿಸುವ ಹುಚ್ಚಾಟಗಳಿಂದಾಗಿ ಈಗ ಟ್ರೋಲ್ ಆಗುವ ಸರದಿ ಕಾಂಗ್ರೆಸ್ಸಿನ ಕೆಲವು ಮಂತ್ರಿಗಳು ಹಾಗೂ ಹಿಂಬಾಲಕರದ್ದು.



