ಕೊಲೆಯಾದ ರೇಣುಕಾಸ್ವಾಮಿ ಕೂಡಾ ದರ್ಶನ್ ಅಭಿಮಾನಿ. ಆದರೆ, ದರ್ಶನ್ ಅವರಂತೆ ಧರ್ಮಪತ್ನಿ ವಿಜಯಲಕ್ಷ್ಮಿ ಅವರನ್ನೂ ಹಾಗೂ ಗೆಳತಿ ಪವಿತ್ರಾ ಗೌಡರನ್ನೂ ಇಷ್ಟ ಪಡುತ್ತಿದ್ದವನಲ್ಲ. ಕೊಲೆಯಲ್ಲಿ ಭಾಗಿಯಾದವರು, ರೇಣುಕಾಸ್ವಾಮಿಯನ್ನು ಕರೆತಂದು ಶೆಡ್ಡಿನಲ್ಲಿ ಕೊಂದ ಆರೋಪ ಹೊತ್ತಿರುವವರು ಕೂಡ ದರ್ಶನ್ ಅಭಿಮಾನಿಗಳೇ. ಅವರು ಅದನ್ನೆಲ್ಲ ಮಾಡಿದ್ದು ದರ್ಶನ್ ಮೇಲಿನ ಅಭಿಮಾನದಿಂದ. ಆದರೆ, ಅಭಿಮಾನದ ಕೇಂದ್ರ ಬಿಂದುವಾಗಿರುವ ದರ್ಶನ್, ಕಾರಣಕರ್ತೆಯಾದ ಪವಿತ್ರಾ ಗೌಡ ಅವರದ್ದೂ ಜೈಲು ವಾಸವೇ.
ದರ್ಶನ್ ಅವರು ಜೈಲು ಸೇರಿದ್ದಾರೆ. 13 ವರ್ಷಗಳ ನಂತರ ಮತ್ತೆ ಜೈಲು ಸೇರಿದ್ದರೂ, ದರ್ಶನ್ ಅವರ ಮನಸ್ಥಿತಿ ಬದಲಾದಂತೆ ಇಲ್ಲ. ಕಳೆದ ಬಾರಿ ಒಂಟಿಯಾಗಿ ಜೈಲು ಸೇರಿದ್ದ ದರ್ಶನ್ ಅವರಿಗೆ ಈಗ ಸಾಥ್ ಕೊಡುವುದಕ್ಕೆ 16 ಜನರಿದ್ದಾರೆ. ಪವಿತ್ರಾ ಗೌಡ ಅವರು ಪ್ರತ್ಯೇಕ ವಿಭಾಗದ ಮಹಿಳಾ ಸೆಲ್. ಸ್ಟಾರ್ ಹೀರೋ ಆಗಿದ್ದ ದರ್ಶನ್ ಅವರೀಗ ಹಲವು ಕುಟುಂಬಗಳ ಕಣ್ಣೀರಿಗೆ ಯಜಮಾನ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರೋ ಡಿಗ್ಯಾಂಗ್‌ನ ಬಹುತೇಕ ಆರೋಪಿಗಳು ಬಡವರು. ಮೂವರಷ್ಟೇ ಸ್ವಲ್ಪ ಅನುಕೂಲಸ್ಥರು. ಆಟೋ ಡ್ರೈವರ್ಸ್, ಕೇಬಲ್ ಹಾಕುವವರು, ಕೂಲಿ ಮಾಡುವವರು, ಕ್ಯಾಬ್ ಡ್ರೈವರ್ಸ್.. ಹೀಗೆ.. ಅಂತಹ ಕುಟುಂಬದ ದುಡಿಯುವ ಮಕ್ಕಳೇ ಈಗ ದರ್ಶನ್ ಅವರ ಪರ್ಸನಲ್ ರೀಸನ್ನಿಗೆ ಸಹಾಯ ಮಾಡೋಕೆ ಹೋಗಿ, ದುಡ್ಡಿನ ಆಸೆಗೆ ಬಿದ್ದು ಜೈಲು ಸೇರಿದ್ದಾರೆ. ಮರ್ಡರ್ ಕೇಸು, ರಿಲೀಸ್ ಆಗುವುದು ಸುಲಭವಂತೂ ಇಲ್ಲ.
ಚಿತ್ರದುರ್ಗದ ಜಗದೀಶ್ ಕುಟುಂಬ : ಈತನಿಗೆ ತಾಯಿ, ಹೆಂಡತಿ ಮಕ್ಕಳು ಇದ್ದಾರೆ. ಸದ್ಯಕ್ಕೆ ತಾಯಿಗೆ ಮಾತ್ರೆ ಕೊಡಿಸುವುದಕ್ಕೂ ಆಗುತ್ತಿಲ್ಲ. ದಿನಕ್ಕೆ 500ರಿಂದ 800 ರೂ. ದುಡಿಯುತ್ತಿದ್ದ ಜಗದೀಶ್ ಆ ಹಣದಲ್ಲೇ ಕುಟುಂಬವನ್ನು ನಡೆಸುತ್ತಿದ್ದ. ಜಗದೀಶನ ತಾಯಿ ಈಗ ಮಾತ್ರೆನೂ ಬೇಡ, ಹಂಗೇ ಸತ್ರೂ ಪರವಾಗಿಲ್ಲ, ಮಗ ರಿಲೀಸ್ ಆಗಿ ಬರಲಿ ಎನ್ನುತ್ತಿದ್ದಾರೆ.
ಈ ಜಗದೀಶ ತನ್ನ ಆಟೋ ಹಿಂದೆ ನಟ ದರ್ಶನ್‌ನ ಫೋಟೋ ಹಾಕ್ಕೊಂಡಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಆ ಆಟೋ ಕೂಡ ಈಗ ಸೀಜ್ ಆಗಿದೆ. ದರ್ಶನ್‌ನಾಗಿ ಜೈಲಿಸೇರಿರೋ ಮಗನನ್ನು ನೋಡಿಕೊಂಡು ಧೈರ್ಯ ತುಂಬಿ ಬರೋಣ ಅಂದ್ರೂ ಈ ತಾಯಿಯ ಬಳಿ ದುಡ್ಡಿಲ್ಲವಂತೆ. ಇನ್ನು, ತನ್ನ ಮಗನ ಪರವಾಗಿ ಲಾಯರ್ ನೇಮಿಸೋ. ಮಗನನ್ನು ಬೇಲ್ ಮೇಲೆ ಬಿಡಿಸೋಕೆ ಖರ್ಚು ಮಾಡೋಕೆ ದುಡ್ಡು ಎಲ್ಲಿಂದ ಹುಟ್ಟಬೇಕು.
ಅನು ಕುಟುಂಬ : ಈತನೂ ಆಟೋ ಡ್ರೈವರ್ ಆಗಿದ್ದವನು. ಈತ ಅರೆಸ್ಟ್ ಆಗುತ್ತಿದ್ದಂತೆಯೇ ಅಪ್ಪ ಅದೇ ಆಘಾತದಲ್ಲಿ ಮೃತಪಟ್ಟರು. ಧೈರ್ಯ ನೀಡಬೇಕಿದ್ದ ಪತಿಯೂ ಇಲ್ಲ, ಕುಟುಂಬಕ್ಕೆ ಆಸರೆಯಾಗಿದ್ದ ಮಗ ಜೈಲಿನಲ್ಲಿ. ಪತಿಯ ಸಾವಿಗೆ ಪರೋಕ್ಷವಾಗಿ ಕಾರಣನಾದ ಮಗನನ್ನು ಪ್ರೀತಿಸಬೇಕೋ.. ದ್ವೇಷಿಸಬೇಕೋ ತಿಳಿಯದೆ ಒದ್ದಾಡುತ್ತಿರುವ ಕುಟುಂಬಕ್ಕೆ, ಆ ತಾಯಿಗೆ ನೆರೆಹೊರೆಯವರೇ ಸದ್ಯಕ್ಕೆ ಆಸರೆ. ಆದರೆ ಅವರಾದರೂ ಎಷ್ಟು ದಿನ ನೋಡಿಕೊಳ್ತಾರೆ..
ನಂದೀಶ್ ಕುಟುಂಬ : ಜೈಲು ಸೇರಿರೋ ಐದನೇ ಆರೋಪಿ ನಂದೀಶನ ಕುಟುಂಬ.ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿಯಾಗಿರೋ ನಂದೀಶನ ಕುಟುಂಬಸ್ಥರು ಕೂಲಿ ಮಾಡಿ ಬದುಕುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ 8 ವರ್ಷಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಕೇಬಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂದೀಶ ಈಗ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ ಜೊತೆ ಅರೆಸ್ಟ್ ಆಗಿದ್ದಾನೆ. ತಾಯಿ ಭಾಗ್ಯಮ್ಮನಿಗೆ ಅಸ್ತಮಾ. ದೂರದಲ್ಲಿದ್ದ ಅಕ್ಕನೇ ಬಂದು ತಾಯಿಯನ್ನು ನೋಡಿಕೊಳ್ತಿದ್ದಾರೆ.
ಇತ್ತ ಮಗನನ್ನು ನೋಡೋಕೆ ಹೋಗಲು ದುಡ್ಡಿಲ್ಲ. ಲಾಯರ್ ನೇಮಿಸೋದಕ್ಕೂ ದುಡ್ಡಿಲ್ಲದೆ ಪರದಾಡುತ್ತಿರೋ ನಂದೀಶನ ಕುಟುಂಬದ ಸ್ಥಿತಿ, ದುಷ್ಟರಿಗೂ ಬೇಡ ಎನ್ನುವಂತಾಗಿದೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಪರವಾಗಿ, ಪೊಲೀಸರು ಹಾಗೂ ನ್ಯೂಸ್ ಚಾನೆಲ್ಲುಗಳ ವಿರುದ್ಧ, ಇನ್ನಿತರ ನಟರ ವಿರುದ್ಧ ಕೆಟ್ಟದಾಗಿ ಕಮೆಂಟ್ ಹಾಕುತ್ತಿರುವ, ಕೊಲೆ, ಅತ್ಯಾಚಾರದ ಬೆದರಿಕೆ ಹಾಕುತ್ತಿರುವವರನ್ನೂ ಬೆನ್ನು ಹತ್ತಿದ್ದಾರೆ ಪೊಲೀಸರು. ಅಭಿಮಾನಿಗಳು ತಮ್ಮ ಅಭಿಮಾನವನ್ನು ಮಿತಿಯಲ್ಲಿಟ್ಟುಕೊಂಡಿರಲಿ.



