ಒಬ್ಬೊಬ್ಬ ಶಾಸಕರ ಆಸ್ತಿಯೂ ಕೋಟಿ ಕೋಟಿಗಳ ಲೆಕ್ಕದಲ್ಲಿರುತ್ತೆ. ಒಬ್ಬ ಎಂಎಲ್‌ಎ ಆಸ್ತಿ, ಐದಾರು ಕೋಟಿಯಷ್ಟೇ ಆಸ್ತಿ ಇದ್ದರೆ ಆತ ಪಾಪ.. ಬಡವ ಕಣ್ರೀ.. ಎನ್ನುವ ಕಾಲ ಇದು. ಒಮ್ಮೆ ಗೆದ್ದು ಅಧಿಕಾರ ಸಿಕ್ಕರೆ ಸಾಕು, ಮಕ್ಕಳಿಗೆ.. ಮೊಮ್ಮಕ್ಕಳಿಗೆ.. ಮುಂದೆ ಹುಟ್ಟಬಹುದಾದ ಮಕ್ಕಳಿಗೂ ಆಸ್ತಿ ಮಾಡಿಡುವ ಸಂಪ್ರದಾಯ ರಾಜಕೀಯದಲ್ಲಿದೆ. ಅಂತಾದ್ದರಲ್ಲಿ ಒಬ್ಬ ಮಾಜಿ ಶಾಸಕರ ಮೊಮ್ಮಗ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ಧಾನೆ ಅಂದ್ರೆ.. ಹೌದು, ಇದು ಅಚ್ಚರಿಯಾದರೂ ಸತ್ಯ.
ಸರಗಳ್ಳತನ ಮಾಡಿ ಸಿಕ್ಕಿಬಿದ್ದಿರುವ ಆರೋಪಿ ಹೆಸರು ಅಭಿ. ಈತ ಮಾಜಿ ಶಾಸಕರ ಮೊಮ್ಮಗ. ತಾತನ ಹೆಸರು ಟಿ.ಜಿ. ತಿಮ್ಮೇಗೌಡ. ೨೦೧೫ರಲ್ಲಿ ನಿಧನವಾಗಿರುವ ಇವರು ೧೯೫೨ನೇ ರಾಜ್ಯದ ಪ್ರಪ್ರಥಮ ವಿಧಾನಸಭೆಯ ಸದಸ್ಯರಾಗಿದ್ದವರು. ತಿಪಟೂರು ಕ್ಷೇತ್ರದಿಂದ ಗೆದ್ದಿದ್ದವರು. ದೇಶದ ಸ್ವಾತಂತ್ರ್ಯಾ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನಸಭೆಯ ತಿಪಟೂರು ತಾಲ್ಲೂಕಿನ ಪ್ರಥಮ ಶಾಸಕರಾಗಿದ್ದರು. 1947ರಲ್ಲಿ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ 1952ರ ವರೆಗೂ ಸೇವೆ ಸಲ್ಲಿಸಿದ್ದರು. ನಂತರ 1952ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದರು. ಇನ್ನು ರಾಜ್ಯದ ವಿಧಾನಸಭೆಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ನಡೆದಿದ್ದ ಸಂಭ್ರಮ ಸಮಾರಂಭದಲ್ಲಿ ಮಾಜಿ ಶಾಸಕ ತಿಮ್ಮೇಗೌಡ ಅವರನ್ನೂ ಗೌರವಿಸಲಾಗಿತ್ತು. ಅಂದಿನ ಸನ್ಮಾನಿತರ ಪೈಕಿ ಜೀವಂತವಾಗಿದ್ದ ಮೂವರು ಮಾಜಿ ಶಾಸಕರಲ್ಲಿ ಇವರೂ ಒಬ್ಬರಾಗಿದ್ದರು. ಅವರ ಮೊಮ್ಮಗನೀಗ ಸರಗಳ್ಳತನದಲ್ಲಿ ಸಿಕ್ಕಿಬಿದ್ದಿದ್ದಾನೆ.
ಅಂದಹಾಗೆ ತಿಮ್ಮೇಗೌಡ ಅವರು ಊರಿಗೆ ಉಪಕಾರಿಯಾಗಿದ್ದರು. ತಮ್ಮ ನಂತರ ತಮ್ಮ ಮಕ್ಕಳು ರಾಜಕಾರಣಕ್ಕೆ ಬರಬಾರದು ಎಂದು ನಂಬಿದ್ದವರು ಹಾಗೂ ಅದರಂತೆಯೇ ನಡೆದವರು. ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಯಾವ ಆಸ್ತಿಯನ್ನೂ ಮಾಡಲಿಲ್ಲ. ಗಾಂಧೀಜಿಯವರ ಆದರ್ಶವನ್ನು ಜೀವನಪೂರ್ತಿ ಹೊದ್ದುಕೊಂಡೇ ಬದುಕಿದವರು.
ಇನ್ನು ಈಗ ಇವರ ಮೊಮ್ಮಗ ಅಭಿ ಸರಗಳ್ಳತನದಲ್ಲಿ ಸಿಕ್ಕಿಬಿದ್ದಿದ್ಧಾನೆ. ಬೆಂಗಳೂರಿನಲ್ಲಿ ಸರಗಳ್ಳತನ ಮಾಡ್ತಿದ್ದ ಮೂವರು ಆರೋಪಿಗಳ ಬಂಧನ ಮಾಡಲಾಗಿದ್ದು, ಇವರಲ್ಲಿ ತಿಮ್ಮೇಗೌಡರ ಮೊಮ್ಮಗ ಅಭಿಯೂ ಒಬ್ಬ. ಮತ್ತೊಬ್ಬ ಆರೋಪಿ ರಾಕೇಶ್, ದಾಸರಹಳ್ಳಿ ಎಂಎಲ್‌ಎ ಮುನಿರಾಜು ಅವರ ಬಳಿ ಡ್ರೈವರ್ ಆಗಿದ್ದ. ಮತ್ತೊಬ್ಬನ ಹೆಸರು ಸಲ್ಮಾನ್. ಬೆಂಗಳೂರಿನ 4 ವಿವಿಧ ಪೊಲೀಸ್ ಠಾಣೆಗಳ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸರಗಳ್ಳತನಕ್ಕೆ ಬೈಕ್ ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕೃತ್ಯ ಮಾಡುತ್ತಿದ್ದರು. ಆರೋಪಿಗಳ ಚಲನವಲನ ದೃಶ್ಯ ಏರಿಯಾದ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಈಗ ಸಿಸಿ ಕ್ಯಾಮಾರ ದೃಶ್ಯಾವಳಿ ಲಭ್ಯವಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಮಾಜಿ ಶಾಸಕರ ಕುಟುಂಬದ ಬಡತನದ ಬಗ್ಗೆ ಬಹಿರಂಗ ಆಗಿದೆ.



