ಒಂದು ಧರ್ಮಕ್ಕೆ, ಭಕ್ತರಿಗೆ ನೋವಾಗುವಂತೆ ಸಿನಿಮಾ ಮಾಡೋದು. ಯಾರೂ ಪ್ರಶ್ನಿಸಲಿಲ್ಲ ಎಂದರೆ ಓಕೆ.. ಅಕಸ್ಮಾತ್ ಪ್ರಶ್ನಿಸಿದರೂ.. ಸಿನಿಮಾದ ಪರ ಒಂದಷ್ಟು ಮಂದಿ ನಿಂತರೆ ಅದೂ ಓಕೆ.. ಕ್ಷಮೆ ಕೇಳಬೇಕು ಅನ್ನಿಸೋದು ಶಾಕ್ ಕೊಟ್ಟಾಗ ಮಾತ್ರ.. ಈಗ ಅನ್ನಪೂರ್ಣಿ ಚಿತ್ರಕ್ಕಾಗಿದ್ದೂ ಇದೇ.
ಅನ್ನಪೂರ್ಣಿ ರಿಲೀಸ್ ಆದಾಗ ಸಿನಿಮಾ ಫ್ಲಾಪ್ ಆಗಿತ್ತು. ಜನರೂ ನೋಡಿರಲಿಲ್ಲ. ಜನ ಸಿನಿಮಾ ನೋಡಿದ್ದೇ ಒಟಿಟಿಗೆ ಬಂದ ಮೇಲೆ. ಒಟಿಟಿಗೆ ಬಂದಾಗಲೂ ಶಾಕ್ ಕೊಡುವವರೆಗೆ ಅದು ಚಿತ್ರತಂಡಕ್ಕೆ ಯಾವ ಹಂತದಲ್ಲೂ ನೋವಾಗಿರಲಿಲ್ಲ. ವಿರೋಧ ಎದುರಾಗಿ, ಕೇಸು ಬಿದ್ದು..ಕೋರ್ಟ್ ಮೆಟ್ಟಿಲು ಹತ್ತಿದ ಮೇಲೆ.. ನೆಟ್ʻಫ್ಲಿಕ್ಸ್‌ನವರು ತೆಗೆದು ಹಾಕಿ, ನಿರ್ಮಾಣ ಮಾಡಿದ್ದ ಝೀಸ್ಟುಡಿಯೋಸ್ʻನವರು ಕ್ಷಮೆ ಕೇಳಿದ ಮೇಲೆ ನಯನತಾರಗೆ ಅರ್ಥವಾಗಿದೆ.
ಪಾಸಿಟಿವ್ ಸಂದೇಶವನ್ನು ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಏನೋ ತಪ್ಪಾಗಿದೆ. ಅಜಾಗರೂಕತೆಯಿಂದ ನೋವನ್ನು ಉಂಟುಮಾಡಿರಬಹುದು. ಈ ಹಿಂದೆ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ, ಸೆನ್ಸಾರ್‌ನಿಂದ ಪ್ರಮಾಣ ಪತ್ರವನ್ನು ಪಡೆದ ಸಿನಿಮಾ ಅನ್ನಪೂರ್ಣಿಯನ್ನು ಔಖಿಖಿ ಪ್ಲಾಟ್‌ಫಾರ್ಮ್‌ನಿಂದ ತೆಗೆದು ಹಾಕುತ್ತಾರೆ ಎಂಬುದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನಾನಾಗಲಿ, ನನ್ನ ತಂಡವಾಗಲಿ, ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ದೈವಭಕ್ತೆ. ದೇವರನ್ನು ನಂಬುತ್ತೇನೆ. ಆಗಾಗ್ಗೆ ದೇವಸ್ಥಾನಗಳಿಗೂ ಹೋಗುತ್ತೇನೆ. ದೇವರನ್ನು ನಂಬುವ ಹಲವರ ಭಾವನೆಗಳಿಗೆ ನೋವಾಗಿದೆ.ಅವರೆಲ್ಲರಿಗೂ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ನ್ನಪೂರ್ಣಿ’ ಸಿನಿಮಾದ ಹಿಂದಿನ ಉದ್ದೇಶವು ಸುಧಾರಣೆ ಮಾಡುವುದಾಗಿತ್ತೇ ವಿನಃ, ನೋವನ್ನು ನೀಡುವುದಲ್ಲ. ಕಳೆದ ಎರಡು ದಶಕಗಳ ಸಿನಿಮಾ ಜರ್ನಿಯನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡು ಬಂದಿದ್ದೇನೆ… ಹೀಗೊಂದು ಪೋಸ್ಟ್ ಬರೆದು ಕ್ಷಮೆ ಕೇಳಿದ್ದಾರೆ ನಯನತಾರ.
ನಯನತಾರ. ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್. ಇತ್ತೀಚೆಗೆ ಅವರ ಅನ್ನಪೂರ್ಣಿ ಸಿನಿಮಾ ರಿಲೀಸ್ ಆಗಿತ್ತು. ಸೂಪರ್ ಫ್ಲಾಪ್ ಲಿಸ್ಟಿಗೆ ಸೇರಿದ್ದ ಸಿನಿಮಾ ಒಟಿಟಿಗೆ ಬಂದಾಗಲಷ್ಟೇ ಚಿತ್ರದಲ್ಲಿನ ಕೆಲವು ದೃಶ್ಯಗಳು ಗಮನಕ್ಕೆ ಬಂದಿದ್ದವು.
ನಾಯಕಿ ಬ್ರಾಹ್ಮಣ ಕುಟುಂಬದ ಹುಡುಗಿ. ಶೆಫ್ ಆಗುವ ಕನಸು ಹೊತ್ತ ಹುಡುಗಿ. ನಾನ್ ವೆಜ್ ಅಡುಗೆ ಕಲಿಯದೇ ಇದ್ದರೆ ಶೆಫ್ ಆಗುವುದು ಸಾಧ್ಯವೇ ಇಲ್ಲ ಎಂದು ನಂಬಿಸಿ, ಆಕೆಯ ಕೈಲಿ ನಮಾಜ್ ಮಾಡಿಸಿ ಬಿರಿಯಾನಿ ಮಾಡಿಸುವ ದೃಶ್ಯಗಳಿದ್ದವು. ಹೀರೋ ಮುಸ್ಲಿಂ. ಶ್ರೀರಾಮನೇ ಬೇಟೆಯಾಡುತ್ತಿದ್ದ. ಮಾಂಸ ತಿಂದರೆ ತಪ್ಪೇನಿಲ್ಲ ಎನ್ನುವ ವಾದ ಮಂಡಿಸಿ, ನಾಯಕಿಯನ್ನು ಮನಃಪರಿವರ್ತನೆ ಮಾಡುವ ಸೀನ್ ಇದ್ದವು. ಇವೆಲ್ಲವೂ ಅನ್ನಪೂರ್ಣಿಯನ್ನು ವಿವಾದಕ್ಕೆ ಸಿಲುಕಿಸಿ, ಕೇಸ್ ದಾಖಲಾಗಿ ಕೊನೆಗೆ ನೆಟ್ʻಫ್ಲಿಕ್ಸ್, ಝೀ ಸ್ಟುಡಿಯೋಸ್ ಕ್ಷಮೆ ಯಾಚಿಸಿ ಒಟಿಟಿಯಿಂದ ಹಿಂದೆಗೆದುಕೊಂಡಿದ್ದರು. ಇದೀಗ ನಯನತಾರ ಕ್ಷಮೆ ಯಾಚಿಸುವುದರೊಂದಿಗೆ ವಿವಾದ ಇನ್ನೂ ಒಂದು ಹಂತದ ತಾರ್ಕಿಕ ಹಂತಕ್ಕೆ ಬಂದಿದೆ.
ಆದರೆ ಈ ಕ್ಷಮೆಯನ್ನು ಸಿನಿಮಾ ನೋಡಿದ ಮೇಲೆ ಕೇಳಿದ್ದರೆ ಅಥವಾ ವಿವಾದ ಎದುರಾದ ತಕ್ಷಣ ಕೇಳಿದ್ದರೆ ಅರ್ಥ ಇರುತ್ತಿತ್ತು. ಆದರೆ ಈಗ ಸಿನಿಮಾ ಹೊಗೆ ಹಾಕ್ಕೊಂಡ್ ಮೇಲೆ ಕೇಳಿದ್ಧಾರೆ. ಶಾಕ್ ಟ್ರೀಟ್ ಮೆಂಟ್ ಕೊಡದೇ ಇದ್ರೆ ಯಾರಿಗೂ ಅರ್ಥ ಆಗಲ್ವಾ..?



