ದೀಪಾವಳಿ ಹಬ್ಬಕ್ಕೆ ( Deepavali Festival) ದೇಶದಾದ್ಯಂತ ಪಟಾಕಿ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಪಟಾಕಿ ಸಿಡಿಸುವುದೇ ಬ್ಯಾನ್ ಎಂದು ಹಲವರು ಆಕ್ರೋಶಗೊಂಡಿದ್ದೂ ಆಯ್ತು. ಆದರೆ ಕೆಲವೇ ಕ್ಷಣದಲ್ಲಿ ಸುಪ್ರೀಂಕೋರ್ಟ್ ಆದೇಶದ ಸಂಪೂರ್ಣ ಪ್ರತಿ ಬಂದ ಮೇಲೆ ಸ್ಪಷ್ಟನೆಯೂ ಸಿಕ್ಕಿತು. ಆ ಪ್ರಕಾರ ದೇಶಾದ್ಯಂತ ಪಟಾಕಿ ನಿಷೇಧ (fireworks ban) ನಿಜ. ಆದರೆ ಹಸಿರು ಪಟಾಕಿಗಳಿಗೆ ಅಲ್ಲ. ಈ ಹಿಂದೆ 2018ರಲ್ಲಿ ಬೇರಿಯಂ ರಾಸಾಯನಿಕ ನಿಷೇಧಿಸಿ ಹಸಿರು ಪಟಾಕಿಗೆ ಅನುಮತಿಸಿದ್ದ ಹಾಗೂ ಪಟಾಕಿ ಹಾರಿಸಲು ವಿಧಿಸಲಾಗಿದ್ದ ಸಮಯ ನಿರ್ಬಂಧದ ತನ್ನ ಆದೇಶವು ರಾಜಧಾನಿ ದೆಹಲಿಗೆ (Delhi) ಮಾತ್ರವಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಸ್ಪಷ್ಟಪಡಿಸಿದೆ.
2018ರಲ್ಲಿ ಹೊರಡಿಸಿದ್ದ ಪಟಾಕಿ ನಿಷೇಧ ಆದೇಶವನ್ನೂ ರಾಜಸ್ಥಾನದಲ್ಲೂ ಅನುಷ್ಠಾನಗೊಳಿಸುವಂತೆ ಕೋರಿ ಅಲ್ಲಿನ ಅರ್ಜಿದಾರರೊಬ್ಬರು ರಾಜಸ್ಥಾನ ಕೋರ್ಟ್ (Rajasthan court) ಮೊರೆ ಹೋಗಿದ್ದರು. ಆಗ ಸುಪ್ರೀಂಕೋರ್ಟ್ ಆದೇಶ ದೆಹಲಿಗೆ ಸೀಮಿತವಾಗಿದೆ ಎಂದು ರಾಜಸ್ಥಾನ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ಸ್ಪಷ್ಟನೆ ನೀಡುವಂತೆ ರಾಜಸ್ಥಾನದ ಅದೇ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, ಹಿಂದಿನ ಆದೇಶವನ್ನು ರಾಜಸ್ಥಾನ ರಾಜ್ಯವು ಗಮನಿಸಬೇಕು ಮತ್ತು ಅದು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಒಂದೊಂದು ರಾಜ್ಯಕ್ಕೆ ಒಂದು ನಿಯಮ ಮಾಡಲಾಗದು. ವಿಶೇಷವಾಗಿ ಹಬ್ಬದ ಸಮಯದಲ್ಲಿ ವಾಯು ಮಾಲಿನ್ಯವನ್ನು (air pollution) ಕಡಿಮೆ ಮಾಡಲು ರಾಜ್ಯಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರನ್ನು ಜಾಗೃತಗೊಳಿಸುವುದು ಮುಖ್ಯವಾಗಿದೆ. ವಾಯುಮಾಲಿನ್ಯ ತಡೆ ಕೇವಲ ಸುಪ್ರೀಂಕೋರ್ಟ್ ಕೆಲಸವಲ್ಲ ಎಂದು ಹೇಳಿದೆ.
ಏನೆಲ್ಲ ನಿಷೇಧ ಜಾರಿಯಲ್ಲಿದೆ..?
ಹೆಚ್ಚು ಬಣ್ಣ ಬರುವಂತೆ ಮಾಡುವ ಬೇರಿಯಂ ಮತ್ತು ಕೆಲವು ನಿಷೇಧಿತ ರಾಸಾಯನಿಕಗಳನ್ನು ಪಟಾಕಿಯಲ್ಲಿ ಬಳಸುವಂತಿಲ್ಲ
ವಾಯುಮಾಲಿನ್ಯ, ಶಬ್ದಮಾಲಿನ್ಯ, ಘನತ್ಯಾಜ್ಯ ಉತ್ಪತ್ತಿ ಮಾಡುವ ಪಟಾಕಿಗಳ ಉತ್ಪಾದನೆ, ಮಾರಾಟ, ಬಳಕೆ ನಿಷಿದ್ಧ
ಕಡಿಮೆ ರಾಸಾಯನಿಕ ಇರುವ, ಕಡಿಮೆ ಬೆಳಕು/ ಶಬ್ದ/ ಹೊಗೆ ಹೊರಸೂಸುವ ಹಸಿರು ಪಟಾಕಿ ಬಳಕೆ ಮಾಡಬಹುದು
ಹಬ್ಬಗಳಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾದಿನ ರಾತ್ರಿ 11:55 ರಿಂದ ಮತ್ತು 12:30ರ ನಡುವೆ ಪಟಾಕಿ ಸಿಡಿಸಬಹುದು
ನಾವು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುತ್ತಿಲ್ಲ. ಪಟಾಕಿಗಳು ಪರಿಸರದ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿಮಗೆ ಅರ್ಥಮಾಡಿಕೊಳ್ಳಲು ಹೇಳುತ್ತಿದ್ದೇವೆ. ಪಟಾಕಿ ಸಿಡಿಸಬೇಡಿ ಎಂದು ನಾವು ನೇರವಾಗಿ ಹೇಳಲು ಸಾಧ್ಯವಿಲ್ಲ. ಅದರ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.



