ಸಿಎಂ ಆಗಿರುವ ಸಿದ್ಧರಾಮಯ್ಯ ವಿರುದ್ಧ ಪ್ರಭಾವ ಬೀರಿ 14 ಸೈಟು ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದು ಹಗರಣ ಅಲ್ಲ, ತಮ್ಮ ಪತ್ನಿಯ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಕ್ಕೆ ಸರ್ಕಾರ ಕೊಟ್ಟಿರುವ ಪರಿಹಾರ ಎನ್ನುತ್ತಿದ್ದಾರೆ ಸಿದ್ಧರಾಮಯ್ಯ. ಸಿದ್ಧರಾಮಯ್ಯ ವಿರುದ್ಧ ತನಿಖೆಗೂ ಆದೇಶ ಬಂದಿದೆ. ರಾಜ್ಯಪಾಲರು ಮತ್ತು ಸಿದ್ಧರಾಮಯ್ಯ ವಿರುದ್ಧ ಕಾನೂನು ಸಮರದಲ್ಲಿ ಮೊದಲ ಗೆಲುವು ದಕ್ಕಿರುವುದು ಸಿದ್ಧರಾಮಯ್ಯ ವಿರೋಧಿ ಪಡೆಗೆ.
ಆದರೆ ಇಲ್ಲಿ ವಿಭಿನ್ನವಾಗಿ ನಿಂತಿರುವುದು ಹೈಕಮಾಂಡ್. ಹೀಗಾಗಿ ಪದೇ ಪದೇ ಯಡಿಯೂರಪ್ಪ ಪ್ರಕರಣ ನೆನಪಾಗುತ್ತಿದೆ. ಸಿದ್ಧರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಕೂಗು ಹಾಕಿದಾಗ ಕೌಂಟರ್ ಕೊಟ್ಟಿದ್ದು ಕೇವಲ ಸಿದ್ಧರಾಮಯ್ಯ ಅಲ್ಲ. ಅವರ ಸಂಪುಟದ ಉಳಿದ ಎಲ್ಲ ಸಚಿವರೂ ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ಧರಾಮಯ್ಯ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ ಎನ್ನುತ್ತಿದ್ದಾರೆ.
ಆದರೆ ಯಡಿಯೂರಪ್ಪ ಪ್ರಕರಣದಲ್ಲಿ ಹೀಗಾಗಿರಲಿಲ್ಲ. ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದು ಪ್ರಕರಣ ದಾಖಲಾಗುತ್ತಿದ್ದಂತೆಯೇ, ಹೈಕಮಾಂಡ್ ಯಡಿಯೂರಪ್ಪನವರ ರಾಜೀನಾಮೆ ಕೇಳಿತ್ತು. ರಾಜೀನಾಮೆ ಕೇಳಿದ್ದವರಲ್ಲಿ ಈಗ ಸಿಎಂ ಆಗಿರುವ ಸಿದ್ಧರಾಮಯ್ಯ ಅವರೂ ಕೂಡಾ ಇದ್ದರು. ಬಿಜೆಪಿ ಹೈಕಮಾಂಡಿನಲ್ಲಿ ಆಗ ಪ್ರಬಲರಾಗಿದ್ದವರು ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್, ರಾಜ್ ನಾಥ್ ಸಿಂಗ್ ಮೊದಲಾದವರು. ಅಡ್ವಾಣಿ ಅವರಂತೂ ತಕ್ಷಣ ರಾಜೀನಾಮೆ ಕೊಡಿ ಎಂದಿದ್ದರಂತೆ.
ಅಡ್ವಾಣಿ ವಿಷಯ ಬೇರೆ, ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ (ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಪಡೆದಿದ್ದ ಆರೋಪ) ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಳಂಕ ಮುಕ್ತರಾಗುವವರೆಗೆ ಸಂಸತ್ತಿಗೆ ಕಾಲಿಟ್ಟಿರಲಿಲ್ಲ. ಆರೋಪಗಳಲ್ಲಿ ಹುರುಳಿಲ್ಲ ಎಂದಾದ ಮೇಲೆ, ವರದಿ ಬಂದ ಮೇಲೆ ಮತ್ತೆ ಚುನಾವಣೆಗೆ ನಿಂತು ಗೆದ್ದು ಬಂದಿದ್ದರು. ಹೀಗಾಗಿ ತಮ್ಮ ಹಾದಿಯಲ್ಲೇ ತಮ್ಮ ಪಕ್ಷದ ಮುಖ್ಯಮಂತ್ರಿಯಾದವರೂ ನಡೆಯಬೇಕು ಎಂದು ಆಸೆ ಪಟ್ಟಿದ್ದರಲ್ಲಿ ತಪ್ಪೂ ಇರಲಿಲ್ಲ.
ಆದರೆ ಇಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರೆಲ್ಲ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎನ್ನುತ್ತಿದ್ದಾರೆ.
ಸಿದ್ಧರಾಮಯ್ಯ ವಿರುದ್ಧ ಬಿಜೆಪಿಯಲ್ಲಿ ಖುದ್ದು ಮೋದಿಯೇ ವಾಗ್ದಾಳಿ ನಡೆಸುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಿದ್ಧರಾಮಯ್ಯ ಬೆನ್ನಿಗೆ ನಿಂತಿದೆ.
ಮುಡಾ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಬೇರೂರಿದೆ ಎಂದು ಆರೋಪಿಸಿದ್ದಾರೆ. ಹೀಗಿದ್ದರೂ, ರಾಹುಲ್ ಗಾಂಧಿ ಮಾತ್ರ ಸಿದ್ಧರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಬಹಿರಂಗವಾಗಿ ಸಿದ್ಧರಾಮಯ್ಯ ಅವರ ಜೊತೆಗೆ ನಿಂತಿದ್ದಾರೆ.
ಆದರೆ ಬಿಜೆಪಿಯಲ್ಲಿ ಹಾಗೆ ಆಗಿರಲಿಲ್ಲ. ಯಡಿಯೂರಪ್ಪ ವಿರುದ್ಧ ಆರೋಪಗಳು ಬಂದಾಗ ಬಿಜೆಪಿಯಲ್ಲಿದ್ದವರೇ ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಿದ್ದರು. ಆ ಹಾದಿಯಲ್ಲಿ ಈಶ್ವರಪ್ಪನವರೂ ಇದ್ದರು. ಆರ್ ಎಸ್ ಎಸ್ ನಾಯಕರೂ ಯಡಿಯೂರಪ್ಪ ವಿರುದ್ಧ ಇದ್ದರು.
ಒಟ್ಟಿನಲ್ಲಿ ಆಗ ಯಡಿಯೂರಪ್ಪ ಅವರಿಗೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಅವರಿಗೆ ಪಕ್ಷದ ಒಳಗೆ ಮತ್ತು ಸರ್ಕಾರದಲ್ಲಿ ಜೊತೆಯಲ್ಲಿದ್ದವರಿಂದ ಸಿದ್ಧರಾಮಯ್ಯ ಅವರಿಗೆ ಸಿಕ್ಕಂತಹ ಬೆಂಬಲ ಸಿಕ್ಕಿರಲಿಲ್ಲ. ಆದರೆ, ಸಿದ್ಧರಾಮಯ್ಯ ಅವರಿಗೆ ಹಾಗಲ್ಲ, ಎಲ್ಲ ರೀತಿಯಲ್ಲೂ ಬಹಿರಂಗ ಬೆಂಬಲ ಎದ್ದು ಕಾಣುತ್ತಿದೆ. ಒಳಗಿನ ಮಾತು ಬೇರೆ. ಬಹಿರಂಗವಾಗಿ ಕಾಂಗ್ರೆಸ್ಸಿನ ಒಬ್ಬನೇ ಒಬ್ಬ ನಾಯಕ ಕೂಡಾ ಸಿದ್ಧರಾಮಯ್ಯ ತಪ್ಪು ಮಾಡಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡುತ್ತಿಲ್ಲ.



