ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಹಾಗೂ ಅವರ ಆಪ್ತ ಸುರೇಶ್ ಬಾಬು ಅವರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಐಎಸ್‌ಡಿ ಎಡಿಜಿಪಿ ಚಂದ್ರಶೇಖರ್ ಜೀವ ಬೆದರಿಕೆ ದೂರು ನೀಡಿದ್ದಾರೆ. ಕಳೆದ ತಿಂಗಳು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸಚಿವ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಹಾಗೂ ಅವರ ಆಪ್ತ ಸುರೇಶ್ ಬಾಬು ಸುಳ್ಳು ಆರೋಪ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಅನ್ನೋದು ಚಂದ್ರಶೇಖರ್ ಆರೋಪ. ಸಂಜಯನಗರ ಠಾಣೆಯಲ್ಲಿ ನೀಡಿದ್ದ ದೂರು ಆಗ ಗಂಭೀರ ಸ್ವರೂಪವಲ್ಲದ (ಎನ್‌ಸಿಆರ್) ಪ್ರಕರಣ ಎಂದು ದಾಖಲಾಗಿತ್ತು. ಈಗ ಎಫ್‌ಐಆರ್ ಆಗಿದೆ.
ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ಕೋರಿದ್ದ ಪೊಲೀಸರಿಗೆ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆ ಎಫ್‌ಐಆರ್ ಆಗಿದೆ. ಸೋಮವಾರ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ತನ್ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಸಚಿವ ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ಮಧ್ಯೆ ನಡೆದಿದ್ದ ‘ಹಂದಿ ಜಂಗೀ ಕುಸ್ತಿ’ ಈಗ ನೇರಾನೇರ ಕಾನೂನು ಸಮರಕ್ಕೆ ನಾಂದಿ ಹಾಡಿದೆ.
ಪ್ರಕರಣವೇನೋ ದಾಖಲಾಗಿದೆ. ತನಿಖೆಯೇನೋ ಶುರುವಾಗಿದೆ. ಆದರೆ ಪ್ರಕರಣದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ದೂರು ನೀಡಿರುವ ಚಂದ್ರಶೇಖರ್, ಅದಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯಾಧಾರಗಳನ್ನು ನೀಡದೇ ಇದ್ದರೆ ಕೇಸು ಬಿದ್ದು ಹೋಗಲಿದೆ ಎನ್ನುವುದು ಕಾನೂನು ತಜ್ಞರ ಮಾತು. ಸ್ವತಃ ಎಡಿಜಿಪಿ ಹುದ್ದೆಯಲ್ಲಿರುವ ವ್ಯಕ್ತಿ ಸಾಕ್ಷ್ಯಾಧಾರಗಳಿಲ್ಲದೆ ದೂರು ಕೊಟ್ಟರೆ ಅದು ಸ್ಟ್ರಾಂಗ್ ಆಗುವುದು ಕಷ್ಟ. ಎಡಿಜಿಪಿಯಂತಹ ಹುದ್ದೆಯಲ್ಲಿರುವ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ದಡ್ಡತನವನ್ನು ಯಾವ ರಾಜಕಾರಣಿಯೂ ಮಾಡುವುದಿಲ್ಲ ಎನ್ನುವುದು ಅನುಭವಸ್ಥ ರಾಜಕಾರಣಿಗಳ ಮಾತು. ಕುಮಾರಸ್ವಾಮಿ ಅವರು ಈಗಾಗಲೇ ಇದೊಂದು ಹಾಸ್ಯಾಸ್ಪದ ಎಂದು ಹೇಳಿಕೆ ಕೊಟ್ಟಿದ್ದಾರೆ.
ಏನಿದು ಎಡಿಜಿಪಿ ವರ್ಸಸ್ ಕುಮಾರಸ್ವಾಮಿ ಪ್ರಕರಣ..?
ಕೆಲ ದಿನಗಳ ಹಿಂದೆ ಅಕ್ರಮ ಗಣಿಗಾರಿಕೆ ತನಿಖೆ ವಿಚಾರವಾಗಿ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಎಚ್.ಡಿ.ಕುಮಾರಸ್ವಾಮಿ, ಹಿಮಾಚಲ ಪ್ರದೇಶದ ಕೇಡರ್ ಆಗಿದ್ದರೂ ನಕಲಿ ದಾಖಲೆ ಸಲ್ಲಿಸಿ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್‌ಐಟಿ ತಂಡದ ಸಹೋದ್ಯೋಗಿಗಳಿಗೆ ವೈಯಕ್ತಿಕ ಪತ್ರ ಬರೆದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ದಾರ್ಶನಿಕ ಬರ್ನಾಡ್ ಷಾ ಹೇಳಿಕೆ ಉಲ್ಲೇಖಿಸಿ ಹಂದಿ ಎನ್ನುವಂತೆ ಚಂದ್ರಶೇಖರ್ ಟೀಕಿಸಿದ್ದರು. ಈ ಹೇಳಿಕೆ ವಿರುದ್ಧ ಕೆರಳಿದ ಜೆಡಿಎಸ್ ನಾಯಕರು, ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಕೊಟ್ಟಿದ್ದರು. ಅಲ್ಲಿಂದ ಶುರವಾದ ಪ್ರಕರಣ ಈಗ ಎಡಿಜಿಪಿ ವರ್ಸಸ್ ಕುಮಾರಸ್ವಾಮಿ ವಿರುದ್ಧ ಹೋರಾಟ ಎಂಬ ಹಂತಕ್ಕೆ ತಲುಪಿದೆ.
ಕುಮಾರಸ್ವಾಮಿ ವಿರುದ್ಧ ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ನೀಡಿರುವ ಜೀವ ಬೆದರಿಕೆ ದೂರು ಪೊಲೀಸ್ ಇಲಾಖೆಯಲ್ಲಿದೆ. ಈಗ ಎಡಿಜಿಪಿ ಚಂದ್ರಶೇಖರ್ ನೀಡಿರುವ ದೂರನ್ನೂ ಸೇರಿಸಿ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ.



