ನಟಿ ನಯನತಾರಾ ಅವರ ಅಭಿನಯದ ಅನ್ನಪೂರ್ಣಿ ಇತ್ತೀಚೆಗೆ ರಿಲೀಸ್ ಆಗಿತ್ತು. ಡಿಸೆಂಬರ್ 1ಕ್ಕೆ ರಿಲೀಸ್ ಆದ ಚಿತ್ರ ಥಿಯೇಟರುಗಳಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಆದರೆ ಒಟಿಟಿಯಲ್ಲಿ ಹಿಂದೂ ವಿರೋಧಿ ಕಾರಣಕ್ಕೆ ಸುದ್ದಿಯಾಗುತ್ತಿದೆ. ಅನ್ನಪೂರ್ಣಿ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ದೂರು ದಾಖಲು ಮಾಡಿದ್ದು, ನಟಿ ನಯನತಾರಾ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿನಿಮಾದಲ್ಲಿ ಲವ್ ಜಿಹಾದ್ʻನ್ನು ಪ್ರೋತ್ಸಾಹಿಸುವ ಹಾಗೂ ಶ್ರೀರಾಮನನ್ನು ಅವಹೇಳನ ಮಾಡುವ ದೃಶ್ಯಗಳಿವೆ ಎನ್ನುವುದು ದೂರುದಾರರ ಆರೋಪ. ಶ್ರೀರಾಮಚಂದ್ರನೂ ಮಾಂಸಾಹಾರಿ, ಮಾಂಸ ತಿನ್ನುವುದು ತಪ್ಪಲ್ಲ ಎಂದು ನಯನತಾರಾಗೆ ಹೇಳುವ ಸೀನ್ ಸೇರಿದಂತೆ ಹಲವು ದೃಶ್ಯಗಳ ಬಗ್ಗೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ನಯನತಾರಾ ಅವರ 75ನೇ ಸಿನಿಮಾ ಎನ್ನುವುದು ವಿಶೇಷ.
ಅನ್ನಪೂರ್ಣಿ ಚಿತ್ರದ ಕಥೆ ಏನು?
ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಪ್ರಸಾದ ತಯಾರಿಸುವ ಬ್ರಾಹ್ಮಣ ಕುಟುಂಬದ ಹೆಣ್ಣುಮಗಳು ಅನ್ನಪೂರ್ಣಿ. ಚಿಕ್ಕಂದಿನಿಂದಲೂ ಅಡುಗೆಯತ್ತ ಆಸಕ್ತಿ ಹೊಂದಿರುವ ಹುಡುಗಿಗೆ ತಿನ್ನುವ ಪದಾರ್ಥದ ರುಚಿಯನ್ನು ಕರಾರುವಾಕ್ಕಾಗಿ ಹೇಳುವ ವಿಶೇಷ ಗುಣ ಇರುತ್ತದೆ. ವೃತ್ತಿಪರ ಶೆಫ್ ಆಗಬೇಕು ಎಂದು ಹೊರಡುವ ಆಕೆ ಮಾಂಸದ ಅಡುಗೆ ಮಾಡುವ, ಅವುಗಳ ರುಚಿ ನೋಡುವ ಕೆಲಸ ಮಾಡುತ್ತಾಳೆ. ಸ್ಟಾರ್ ಹೋಟೆಲ್ಲೊಂದರಲ್ಲಿ ಶೆಫ್ ಕೂಡಾ ಆಗುತ್ತಾಳೆ. ಆಕೆಗೆ ಸಹಾಯ ಮಾಡುವುದು ಮುಸ್ಲಿಂ ಸ್ನೇಹಿತ.
ಆದರೆ ಸಿನಿಮಾದಲ್ಲಿ ಬಿರಿಯಾನಿ ಮಾಡುವ ಮುಂಚೆ ನಮಾಜ್ ಮಾಡುವ (ಸಿನಿಮಾದಲ್ಲಿ ಹಿಂದೂ ಹುಡುಗಿ ನಮಾಜ್ ಮಾಡಿ ಬಿರಿಯಾನಿ ಮಾಡುವುದು ಕಲಿಯುವ ದೃಶ್ಯವಿದೆ), ಬಿರಿಯಾನಿ ಮಾಡುತ್ತಲೇ ಹಿಂದೂ ಸಂಪ್ರದಾಯಗಳನ್ನು ಅವಮಾನಿಸುವ ದೃಶ್ಯಗಳೂ ಹೇರಳವಾಗಿವೆ. ಅನಗತ್ಯವಾಗಿ ಧರ್ಮವನ್ನು ಟೀಕಿಸುವ ವಿಚಾರವನ್ನು ಎಳೆದು ತರುವ ನಿರ್ದೇಶಕ, ಅಂತಿಮವಾಗಿ ನೀಡುವ ಸಂದೇಶವೇ ಬೇರೆ. ಚಿತ್ರದಲ್ಲಿ ಶ್ರೀರಾಮನೂ ಮಾಂಸಾಹಾರಿಯಾಗಿರುವ ಕಾರಣ ಎಲ್ಲರೂ ಮಾಂಸ ತಿನ್ನಬಹುದು ಎನ್ನುವ ಸಮರ್ಥನೆಯಿದೆ. ಇದೀಗ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.



