ಐಎಎಸ್ ಮತ್ತು ಐಪಿಎಸ್ ನಡುವೆ ವಾರ್. ಸೋಷಿಯಲ್ ಮೀಡಿಯಾ ವಾರ್. ವಾಗ್ಯುದ್ಧ. ಒಬ್ಬರು ಐಎಎಸ್ ರೋಹಿಣಿ ಸಿಂಧೂರಿ. ಮತ್ತೊಬ್ಬರು ಐಪಿಎಸ್ ಡಿ.ರೂಪಾ. ಇವರಿಬ್ಬರ ನಡುವೆ ನಡೆಯುತ್ತಿರುವ ಹೋರಾಟ.. ಸುಪ್ರೀಂಕೋರ್ಟಿಗೂ ತಲೆ ಬಿಸಿ ತಂದಿದೆ.
ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವ್ಯಾಜ್ಯ ಬಗೆಹರಿಸಲು ಸಂಧಾನ ಸಾಧ್ಯತೆ ಬಗ್ಗೆ ಗಮನ ಹರಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ಕೊಟ್ಟಿದೆ.
ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ರೂಪಾ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ಮತ್ತು ಪಂಕಜ್ ಮಿತ್ತಲ್ ಅವರ ನೇತೃತ್ವದ ವಿಭಾಗೀಯ ಪೀಠ ಇಬ್ಬರಿಗೂ ಬುದ್ದಿವಾದ ಹೇಳಿದೆ.
ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದೀರಿ. ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದೀರಿ. ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಎರಡೂ ಕಡೆಯವರು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.
2023 ರ ಡಿ.15 ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್ ಮಾಧ್ಯಮಗಳಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡದಂತೆ ಇಬ್ಬರಿಗೂ ನಿರ್ದೇಶಿಸಿತ್ತು. ಅಲ್ಲದೆ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆ ಸಲಹೆ ನೀಡಿತ್ತು.
ಪ್ರಕರಣದ ಇತಿಹಾಸವೇನು?
ಐಎಎಸ್ ಆಫೀಸರ್ ರೋಹಿಣಿ ಅವರ ವಿರುದ್ಧ ಐಪಿಎಸ್ ಅಧಿಕಾರ ಡಿ.ರೂಪಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 2023ರ ಡಿಸೆಂಬರ್‌ನಲ್ಲಿ ದಾಖಲಾದ ಮೊಕದ್ದಮೆ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟುಗಳವರೆಗೂ ಹೋಗಿ ಬಂದಿದೆ. ರೋಹಿಣಿ ಸಿಂಧೂರಿ ಅವರಿಗೆ ಸಂಬಂಧಿಸಿದ ಎಲ್ಲ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಅಳಿಸಿದ್ದೇನೆ ಎಂದು ಡಿ ರೂಪಾ ಹೇಳಿಕೆ ನೀಡಿದ ಹಿನ್ನೆಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ.. ಪರಿಹಾರಕ್ಕೆ ಒತ್ತಾಯಿಸಿದ್ದ ರೋಹಿಣಿ ಸಿಂಧೂರಿ.. ಸಾರ್ವಜನಿಕವಾಗಿ ತಮಗಾದ ಅವಮಾನಕ್ಕೆ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಹೊರತಾಗಿಯೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಡಿ ನಡುವೆ ಭಿನ್ನಾಭಿಪ್ರಾಯಗಳು ಬಗೆಹರಿದಿಲ್ಲ. ಈ ಹಿನ್ನೆಲೆ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಹೇಳಿದ್ದು, ಈಗ ಮಾತುಕತೆಯ ಮೂಲಕವೇ ವಿವಾದ ಇತ್ಯರ್ಥ ಮಾಡಿಕೊಳ್ಳಿ ಎಂದು ಇಬ್ಬರಿಗೂ ಮೌಖಿಕವಾಗಿ ಸೂಚನೆ ನೀಡಿದೆ.



