ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇನೋ ಅಧಿಕಾರಕ್ಕೆ ಬಂದೂ ಆಗಿದೆ. ಶಕ್ತಿ (Shakthi Scheme) ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ, ಗೃಹಜ್ಯೋತಿ (Gruha Jyothi) ಮೂಲಕ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ (Anna Bhagya Scheme) ಯೋಜನೆ ಮೂಲಕ ಪ್ರತಿ ಬಿಪಿಎಲ್ (BPL Card ) ಕುಟುಂಬದವರಿಗೂ ತಲಾ 10 ಕೆಜಿ ಅಕ್ಕಿ ಹಾಗೂ ಗೃಹಲಕ್ಷ್ಮಿ (Gruha Lakshmi) ಮೂಲಕ ಪ್ರತಿ ಗೃಹಿಣಿಗೂ ತಲಾ 2000 ರೂ. ಮಾಸಿಕ ಉಚಿತವಾಗಿ ನೀಡುವ ಯೋಜನೆ ಜಾರಿಗೆ ತಂದಿದೆ. ಈ ಗ್ಯಾರಂಟಿ ಘೋಷಣೆ ಮಾಡಿಯೇ ಅಧಿಕಾರಕ್ಕೆ ಬಂದಿತ್ತು ಕಾಂಗ್ರೆಸ್. ಆದರೆ ಈ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (Pradhani Narendra Modi) ಬಡವರು, ದುರ್ಬಲ ವರ್ಗದವರಿಗೇ ಇದರ ಹಾನಿ ಹೆಚ್ಚು ಎಂದಿದ್ದಾರೆ.
ಬೇಜವಾಬ್ದಾರಿತನದ ಹಣಕಾಸು ನೀತಿಗಳು (Financial Discipline) ಹಾಗೂ ಜನಪ್ರಿಯ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ರಾಜಕೀಯ ಲಾಭವನ್ನು ತಂದುಕೊಡಬಲ್ಲವು. ಆದರೆ ಇಂಥ ಕೊಡುಗೆಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಉಚಿತ ಯೋಜನೆಗಳ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ಇಂಥ ಪರಿಣಾಮಗಳಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು ಹಾಗೂ ದುರ್ಬಲ ವರ್ಗದವರೇ ಆಗಿರುತ್ತಾರೆ ಎಂದು ಹೇಳಿದ್ದಾರೆ (PM Narendra Modi) ಪ್ರಧಾನಿ ನರೇಂದ್ರ ಮೋದಿ.
ಸಾಲದ ಬಿಕ್ಕಟ್ಟಿಗೆ ಸಿಲುಕಿರುವ ಅಥವಾ ಬಿಕ್ಕಟ್ಟು ಅನುಭವಿಸುತ್ತಿರುವ ದೇಶಗಳು ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿವೆ. ಇಂತಹ ದೇಶಗಳನ್ನು ಗಮನಿಸಿದ ಹಲವು ದೇಶಗಳು ಅಂತಹ ಬಿಕ್ಕಟ್ಟು ತಡೆಯುವ ವಿಚಾರದಲ್ಲಿ ಎಚ್ಚರಿಕೆ ವಹಿಸಿವೆ. ಸಾಲದ ಬಿಕ್ಕಟ್ಟು ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಅತ್ಯಂತ ಕಳವಳಕಾರಿ ವಿಚಾರ, ಈ ಕಾರಣಕ್ಕಾಗಿಯೇ ನಾವು ಕೂಡಾ ವಿತ್ತೀಯ ಶಿಸ್ತು ಹೊಂದಿರಬೇಕು ಎಂದಿರುವ ಮೋದಿ, ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆ ಪ್ರಜ್ಞೆ ಹೊಂದಿರಬೇಕು. ಬೇಜವಾಬ್ದಾರಿಯುತ ಹಣಕಾಸು ನೀತಿಗಳು ಮತ್ತು ಜನಪ್ರಿಯತೆಯು ಅಲ್ಪಾವಧಿಯಲ್ಲಿ ಉತ್ತಮ ರಾಜಕೀಯ ಫಲಿತಾಂಶಗಳನ್ನು ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಬೆಲೆ ತೆರಬೇಕಾಗುತ್ತದೆ ಎಂದು ನಾನು ‘ಜನಪ್ರಿಯ ಕಾರ್ಯಕ್ರಮ ಆಧರಿತ ರಾಜಕೀಯದ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ತಿಳಿಹೇಳಿದ್ದೇನೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗಷ್ಟೆ ಮೋದಿ (PM Narendra Modi) ಅವರು ಕರ್ನಾಟಕದ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳ ಬಗ್ಗೆ ಕೆಲವು ರಾಜಕೀಯ ರ್ಯಾಲಿಗಳಲ್ಲಿ ಹರಿಹಾಯ್ದಿದ್ದರು. ‘ಪುಕ್ಕಟೆ ಸ್ಕೀಂಗಳಿಗೆ ಹೆಚ್ಚು ಹಣ ನೀಡುತ್ತಿರುವ ಕಾರಣ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ನೀಡಲು ಆಗುತ್ತಿಲ್ಲ’ ಎಂದಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಉದಾಹರಿಸಿ ವಾಗ್ದಾಳಿ ನಡೆಸಿದ್ದರು.
ಆರ್ಥಿಕ ತಜ್ಞರ ಪ್ರಕಾರ ಇದು ನಿಜವೂ ಹೌದು. ಏಕೆಂದರೆ ಕೊನೆಗೆ ಆರ್ಥಿಕ ಸಂಕಷ್ಟ ಎದುರಾದಾಗ ಕೊನೆಗೆ ಬಲಿಯಾಗುವುದು, ಹರಕೆಯ ಕುರಿಗಳಾಗುವುದು ಬಡವರು, ದುರ್ಬಲರು ಹಾಗೂ ಮಧ್ಯಮ ವರ್ಗದವರೇ ಹೊರತು, ಶ್ರೀಮಂತರಲ್ಲ. ಉದಾಹರಣೆಗೆ ಈಗ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ನೇಪಾಳ.. ಯಾವುದೇ ದೇಶ ತೆಗೆದುಕೊಂಡರೂ ನರಕ ಅನುಭವಿಸುತ್ತಿರುವುದು ಬಡವರು, ದುರ್ಬಲರು ಹಾಗೂ ಮಧ್ಯಮ ವರ್ಗದ ಜನರಷ್ಟೇ. ಶ್ರೀಮಂತರು ಹೇಗೋ ಬದುಕಿ ಬಿಡುತ್ತಾರೆ. ಅತ್ತ ಸರ್ಕಾರವನ್ನೇ ನಂಬಿಕೊಂಡು ಬದುಕುತ್ತಿರುವ ಜನ ಬೀದಿಗೆ ಬೀಳುತ್ತಾರೆ.



