ಅಂಬರೀಷ್ ಅವರಿಗೆ ಒಲವಿನ ಉಡುಗೊರೆ ಕೊಡಲೇನು..
ವಿಷ್ಣುವರ್ಧನ್ ಅವರಿಗೆ ಸೇವಂತಿಯೇ ಸೇವಂತಿಯೇ..
ಅನಂತನಾಗ್ ಅವರಿಗಾಗಿ ಕನ್ನಡ ಹೊನ್ನುಡಿ ದೇವಿಯನು..
ಶ್ರೀನಾಥ್ ಅವರಿಗೆ ಯಾವ ಹೂವು.. ಯಾರ ಮುಡಿಗೋ..
ಶಿವಣ್ಣ ಅವರಿಗೆ ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ..
ಮುರಳಿ ಅವರಿಗೆ ಸುತ್ತ ಮುತ್ತಲು ಸಂಜೆಗತ್ತಲು..
ಹೀಗೆ.. ಕನ್ನಡದ ಬಹುತೇಕ ಸ್ಟಾರ್ ನಟರಿಗೆಲ್ಲ ಒಂದಲ್ಲ ಒಂದು ಹಿಟ್ ಗೀತೆ ಬರೆದುಕೊಟ್ಟಿದ್ದ ಚಿತ್ರ ಸಾಹಿತಿ, ಪತ್ರಕರ್ತ ಶ್ಯಾಮ ಸುಂದರ ಕುಲಕರ್ಣಿ ನಿಧನರಾಗಿದ್ದಾರೆ. ವಿಶೇಷ ಅಂದರೆ ಖ್ಯಾತ ಚಿತ್ರ ಸಾಹಿತಿ ಶ್ಯಾಮಸುಂದರ ಕುಲಕರ್ಣಿ ಅವರ ನಿಧನ ಹೊರಜಗತ್ತಿಗೆ ಗೊತ್ತಾಗಿರುವುದು ಹೆಚ್ಚೂ ಕಡಿಮೆ 15 ದಿನಗಳ ನಂತರ. ಶ್ಯಾಮ ಸುಂದರ ಕುಲಕರ್ಣಿ ಅವರು ಅಕ್ಟೋಬರ್ 31 ರಂದು ನಿಧನ ಹೊಂದಿದ್ದಾರೆ.
ತಮ್ಮ ಸಾವು ಸುದ್ದಿ ಆಗಬಾರದೆಂದು ಅವರು ಬಯಸಿದ್ದರಂತೆ. ಹೀಗಾಗಿ ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿರಲಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಶ್ಯಾಮ ಸುಂದರ ಕುಲಕರ್ಣಿ, ಪತ್ರಕರ್ತರೂ ಆಗಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಶ್ಯಾಮಸುಂದರ ಕುಲಕರ್ಣಿ ಅವರು, ನಟಿ ಕಲ್ಪನಾ ಅವರಿಂದ ಅಂಕಣಗಳನ್ನು ಬರೆಸಿದ್ದರು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನೇರವಾಗಿ, ಪರೋಕ್ಷವಾಗಿ ಅವರು ಸಹಾಯ ಮಾಡಿದ್ದರು. ಡಾ ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಟ್ಟಿಗೆ ಆಪ್ತ ಸ್ನೇಹ ಹೊಂದಿದ್ದರು.
ಶ್ಯಾಮ ಸುಂದರ ಕುಲಕರ್ಣಿ ಬರೆದ ಕೆಲವು ಪ್ರಸಿದ್ಧ ಗೀತೆಗಳನ್ನು ನೋಡುವುದಾದರೆ..
ಮೂಡಣದಾ ರವಿ.. ಮೂಡಲಿ ಮಮತೆಯಲಿ.. (ಛಲಗಾರ)
ಒಲವಿನ ಉಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು.. (ಒಲವಿನ ಉಡುಗೊರೆ)
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. (ಒಂದು ಸಿನಿಮಾ ಕಥೆ)
ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ.. (ಶಿವ ಸೈನ್ಯ)
ಚೆಲುವಿನಲಿ ಸಾಟಿ ಇಲ್ಲ.. ಯಾವ ರತಿಯೂ.. (ಒಂದಾಗಿ ಬಾಳು)
ಅನುರಾಗದ ಆರಾಧನೆ.. (ಪ್ರೇಮ ಪರ್ವ)
ಸುತ್ತಮುತ್ತಲು ಸಂಜೆಗತ್ತಲು.. ಮೈಯ್ಯ ಮುತ್ತಲು.. (ಪರಾಜಿತ)
ಹೀರೋ ಹೀರೋ ಹೀರೋ ನಾನೇ ನಾನೇ ನಾನೇ.. (ಅಜೇಯ)
ನಿಮ್ಮ ಮಗುವು ನಗುತಿರುವ.. (ಗೌರಿ ಗಣೇಶ)
ನನ್ನ ಮರೆಯದಿರು.. ನನ್ನ ತೊರೆಯದಿರು.. (ಸುಖ ಸಂಸಾರಕ್ಕೆ ೧೨ ಸೂತ್ರಗಳು)
ಸೇವಂತಿಯೇ ಸೇವಂತಿಯೇ.. (ಸೂರ್ಯವಂಶ)
ನೀಲಿ ಬಾನಲಿ.. (ಭರತ್)
ಯಾವ ಹೂವು ಯಾರ ಮುಡಿಗೋ.. (ಬೆಸುಗೆ)
ಪ್ರೀತಿಸಿದೆ.. ಪ್ರೇಮಿಸಿದೆ.. (ಶಿಕಾರಿ)
ನಿನ್ನಂತ ಚೆಲುವೆಯನು ಬೇರೆಲ್ಲೂ ಕಾಣೆನು ನಾ (ಒಲವಿನ ಉಡುಗೊರೆ)
ಪ್ರೀತಿಯ ಮಾತನು.. (ಹೃದಯಗೀತೆ)



