ರಾಜ್ಯದಲ್ಲಿ ಈ ಬಾರಿ ಸುಭಿಕ್ಷ ಮಳೆಯಾಗುತ್ತಿದೆ. ಬರೋಬ್ಬರಿ 3 ವರ್ಷಗಳ ನಂತರ ಕನ್ನಂಬಾಡಿ ಜಲಾಶಯ ತುಂಬಿದೆ. ಕನ್ನಂಬಾಡಿ ಅಷ್ಟೇ ಅಲ್ಲ, ಜೊತೆ ಜೊತೆಗೇ ಮೈಸೂರು ಕರ್ನಾಟಕ ಭಾಗದ ದೊಡ್ಡ ಜಲಾಶಯಗಳಾದ ಕಬಿನಿ, ಹಾರಂಗಿ ಹಾಗೂ ಹೇಮಾವತಿ ಡ್ಯಾಂಗಳೂ ಭರ್ತಿಯಾಗಿವೆ. ಇನ್ನು ತುಂಗಭದ್ರ, ಆಲಮಟ್ಟಿ, ಬಸವಸಾಗರ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದನ್ನೇ ಪ್ರಶ್ನೆ ಮಾಡಿದ್ಧಾರೆ ಸಿದ್ದರಾಮಯ್ಯ.
ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಒಳ್ಳೆ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿವೆ. ಪ್ರಕೃತಿ ನಮ್ಮ ಪರವಾಗಿದೆ, ಆದುದರಿಂದ ರಾಜ್ಯದಲ್ಲಿ ಮಳೆ ಚೆನ್ನಾಗಿ ಬೀಳುತ್ತಿದೆ. ನನ್ನ ಕಾಲ ಗುಣದಿಂದಲೇ ಉತ್ತಮ ಮಳೆ ಆಗುತ್ತಿದೆ ಎಂದು ನಾನು ಹೇಳುವುದಿಲ್ಲ. ಇಂತಹ ಮೌಢ್ಯಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಸಿದ್ದರಾಮಯ್ಯ ಅವರ ಕಾಲ ಗುಣದಿಂದ ರಾಜ್ಯದಲ್ಲಿ ಮಳೆ ಆಗಲ್ಲ ಎನ್ನುವವರಿಗೆ ಈ ಮೂಲಕವೇ ಪ್ರಶ್ನೆ ಮಾಡಿದ್ಧಾರೆ ಸಿಎಂ ಸಿದ್ದರಾಮಯ್ಯ.
ಉತ್ತಮವಾದ ಮಳೆಯಾಗಿರುವುದರಿಂದ ಬಿತ್ತನೆ ಕೆಲಸವೂ ಚೆನ್ನಾಗಿ ನಡೆದಿದೆ, ಉತ್ತಮವಾದ ಬೆಳೆಯೂ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಹಾಗಾಗಿ, ರಾಜ್ಯದಲ್ಲಿ ಉತ್ತಮ ಮಳೆಬೆಳೆ, ಶಾಂತಿ ನೆಲೆಸಿದೆ. ಪ್ರಕೃತಿಯು ನಾಡಿನ ಜನತೆಯ ಪರವಾಗಿದೆ ಎಂದಿದ್ದಾರೆ ಸಿದ್ದರಾಮಯ್ಯ.
ಬಹಳಷ್ಟು ಜನ ಮೌಢ್ಯವನ್ನು ನಂಬುವವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಮಳೆಯಾಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ರಾಜ್ಯದೆಲ್ಲಡೆ ಸಾಕಷ್ಟು ಮಳೆಯಾಗುತ್ತಿದೆ, ಅಂತವರು ಈಗೇನು ಹೇಳುತ್ತಾರೆ. ನನ್ನ ಕಾಲ್ಗುಣದಿಂದ ಮಳೆ ಬಂದಿದೆ ಎಂದು ಹೇಳಲು ಸಾಧ್ಯವೇ ” ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ ಸಿದ್ದರಾಮಯ್ಯ.
ಅಂದಹಾಗೆ ಕೆಆರ್ʻಎಸ್ 3 ವರ್ಷಗಳ ನಂತರ ಭರ್ತಿಯಾಗಿದ್ದರೆ, ಹಾಸನದ ಗೊರೂರು ಹೇಮಾವತಿ ಜಲಾಶಯ ಎರಡು ವರ್ಷಗಳ ನಂತರ ಭರ್ತಿಯಾಗಿದೆ. ಕೊಡಗು ಜಿಲ್ಲೆಯ ಹಾರಂಗಿ, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಗಳೂ ಭರ್ತಿಯಾಗಿರುವುದು ಸುದೀರ್ಘ ವರ್ಷಗಳ ನಂತರ. ಹೀಗಾಗಿ ಎಲ್ಲ ಜಲಾಶಯಗಳೂ ಕಾಲುವೆಗಳಿಗೆ ನೀರು ಹರಿಸುತ್ತಿವೆ. ಅಲ್ಲದೆ ತಳ ಸೇರಿದ್ದ ಬಾವಿಗಳಿಗೆ ಜೀವ ಬಂದಿದೆ.
ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಾವೇರಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗಲಿಲ್ಲ. ಈ ವರ್ಷ ಮುಂಗಾರು ಆರಂಭದಿಂದಲೂ ಕಾವೇರಿ ನದಿ ಕಣಿವೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಕಳೆದ 3 – 4 ವಾರಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿತ್ತು.
ರಾಜ್ಯದ ಅತಿ ದೊಡ್ಡ ಜಲಾಶಯ ಲಿಂಗನಮಕ್ಕಿಗೂ ಕೂಡಾ ಭಾರಿ ಪ್ರಮಾಣದಲ್ಲಿ ಒಳ ಹರಿವು ಇದೆ. ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ರಾಜ್ಯದ ಎರಡನೆ ಅತಿದೊಡ್ಡ ಜಲಾಶಯ ಬಹುತೇಕ ಭರ್ತಿಯಾಗಿದೆ. 105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 98 ಟಿಎಂಸಿ ನೀರು ತುಂಬಿದೆ. 1633 ಅಡಿ ಇರುವ ಜಲಾಶಯ 1631.28 ತುಂಬಿದೆ. 87 ಸಾವಿರ ಕ್ಯೂಸೆಕ್ ಒಳಹರಿವು ಇದೆ.
ಹಾಗೆ ನೋಡಿದರೆ ವಾಸ್ತವದಲ್ಲಿ ಕೆಆರ್ʻಎಸ್ ʻದೊಡ್ಡ ಅಣೆಕಟ್ಟೆʼ ಏನಲ್ಲ. ಪುಟ್ಟದಾದ ಡ್ಯಾಂ. ನೀರಿನ ಸಂಗ್ರಹ ಸಾಮರ್ಥ್ಯವೂ ಕೂಡಾ ಬೇರೆ ಬೇರೆ ಜಲಾಶಯಗಳಿಗೆ ಹೋಲಿಸಿದರೆ ಕಡಿಮೆಯೇ. ಆದರೆ.. ತಮಿಳುನಾಡಿನೊಂದಿಗೆ ಕ್ಯಾತೆ ಹಿನ್ನೆಲೆಯಲ್ಲಿ ಕನ್ನಂಬಾಡಿ ಅಣೆಕಟ್ಟೆಗೆ ದೊಡ್ಡ ಸುದ್ದಿಯಲ್ಲಿರುತ್ತದೆ.



