ಯಾವುದೇ ಎಲೆಕ್ಷನ್ ನಡೆದರೂ ಅಲ್ಲಿ ಅಸಮಾಧಾನ, ಆಕ್ರೋಶಗಳು ಸ್ಫೋಟವಾಗುತ್ತವೆ. ಟಿಕೆಟ್ ಸಿಕ್ಕವರು ಖುಷಿಯಿಂದ ಕುಣಿದಾಡುತ್ತಿದ್ದರೆ, ಟಿಕೆಟ್ ವಂಚಿತರು ಆಕ್ರೋಶಗೊಳ್ಳುತ್ತಲೇ ಇರುತ್ತಾರೆ. ಟಿಕೆಟ್ ಸಿಕ್ಕವರಿಗೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದರೆ.. ಸಿದ್ದವರು ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ ಎನ್ನುತ್ತಾರೆ. ಈಗ ಸಹಜವಾಗಿಯೇ ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಬಂಡಾಯ, ಆಕ್ರೋಶ, ಸಿಟ್ಟುಗಳು ಜೋರಾಗಿಯೇ ಇವೆ.
ಬಿಜೆಪಿ ಕಳೆದ ಬಾರಿ 25 ಸೀಟು ಗೆದ್ದಿತ್ತು. ಈ ಬಾರಿ ಮೋದಿ ಅಲೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದೇವೆ ಎಂಬ ಕನಸಿನಲ್ಲಿ ಆಕ್ರೋಶ ಹೊರಬೀಳುತ್ತಿದ್ದರೆ, ಕಾಂಗ್ರೆಸ್ಸಿನಲ್ಲಿ ಗ್ಯಾರಂಟಿ ಪವರ್ʻನಿಂದಾಗಿ ಗೆಲ್ಲುತ್ತೇವೆ ಎಂಬ ಉತ್ಸಾಹ ಚಿಮ್ಮುತ್ತಿದೆ. ಹೀಗಾಗಿಯೇ ಎರಡೂ ಪಕ್ಷಗಳಲ್ಲಿ ಒಳೇಟಿನ ಭೀತಿ ಕಾಡುತ್ತಿದೆ.
ಮೊದಲು ಕಾಂಗ್ರೆಸ್ ವಿಚಾರಕ್ಕೆ ಬರೋದಾದ್ರೆ..
ಬೆಳಗಾವಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಬೀದರ್, ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರಗಳಲ್ಲಿ ಬಂಡಾಯ ಹೆಚ್ಚಾಗಿದೆ. ಒಂದೊಂದು ಕಡೆಯೂ ಒಂದೊಂದು ಕಾರಣ.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶವೇಕೆ..?
ಬೆಳಗಾವಿಯಲ್ಲಿ ಎಲ್ಲ ಕಡೆಯೂ ಸಂದಿರುವುದು ಕುಟುಂಗಳೇ. ಹೆಬ್ಬಾಳ್ಕರ್, ಜಾರಕಿಹೊಳಿ ಹಾಗೂ ಖಂಡ್ರೆ ಕುಟುಂಬಕ್ಕೆ ಮಣೆ ಹಾಕಲಾಗಿದೆ. ಅದರಲ್ಲೂ ಹೆಬ್ಬಾಳ್ಕರ್ ಅವರ ಕುಟುಂಬದಲ್ಲಿ ಈಗ ಸ್ಪರ್ಧಿಸಿರುವ ಮೃಣಾಲ್, 3ನೇ ಕುಡಿ. ಕಳೆದ ಒಂದೂ..ಒಂದೂವರೆ ವರ್ಷದಲ್ಲಿ ಒಂದೇ ಕುಟುಂಬದ 3ನೇ ಕುಡಿ ಎಂಟ್ರಿ ಕೊಡುತ್ತಿದೆ. ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಅವರ ಸಹೋದರ ಶಾಸಕರಾಗಿದ್ದು, ಈಗ ಅವರ ಮಗ ಎಂಪಿ ಸ್ಪರ್ಧಿಯಾಗುತ್ತಿರುವುದು ಆಕ್ರೋಶದ ಮೂಲ.
ತುಮಕೂರಿನಲ್ಲಿ ಮುದ್ದ ಹನುಮೇಗೌಡರು ಕಾಂಗ್ರೆಸ್ಸಿಗೆ ವಾಪಸ್ ಬಂದಿರುವುದು ಒಂದು ಕಡೆ ಜಿಲ್ಲೆಯ ಕಾಂಗ್ರೆಸ್ಸಿನ ನಾಯಕರೊಬ್ಬರ ಕಣ್ಣು ಕೆಂಪಾಗಿಸಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರೊಬ್ಬರ ಕಣ್ಣು ರಂಗಾಗಿದೆ. ಇದು ಸೋಮಣ್ಣ ಅವರಿಗೆ ವರವೋ ಶಾಪವೋ ಗೊತ್ತಾಗುತ್ತಿಲ್ಲ.
ಕೋಲಾರವಂತೂ ಇಡೀ ರಾಜ್ಯದ ತುಂಬಾ ಗೊತ್ತಾಗಿರುವ ವಿವಾದಿತ ಕ್ಷೇತ್ರ. ಖುದ್ದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಟ್ಟಿದ್ಧಾರೆ. ಚಿಕ್ಕಬಳ್ಳಾಪುರದ ಸ್ಥಿತಿಯೂ ಭಿನ್ನವೇನಲ್ಲ. ಕೋಲಾರದ ಪಕ್ಕದಲ್ಲೇ ಇದೆ. ಬಾಗಲಕೋಟೆಯ ವೀಣಾ ಕಾಶಪ್ಪನವರ್ ವಿಷಯವೂ ಅಷ್ಟೇ.
ಬೆಂಗಳೂರು ಗ್ರಾಮಾಂತರದ ಭಿನ್ನಮತವೇ ವಿಭಿನ್ನ :
ಆದರೆ.. ಬೆಂಗಳೂರು ಗ್ರಾಮಾಂತರದ ಸ್ಥಿತಿ ಹಾಗಲ್ಲ. ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತಿರುವ ದೇವೇಗೌಡರ ಅಳಿಯ ಡಾ.ಮಂಜುನಾಥ್, ವೈದ್ಯರಾಗಿ ಚಿರಪರಿಚಿತರು. ಜಯದೇವ ಆಸ್ಪತ್ರೆ ಮುಖ್ಯಸ್ಥರಾಗಿದ್ದಾಗ ಮಂಜುನಾಥ್, ಯಾವುದೋ ಒಂದು ಪಕ್ಷದವರು ಎಂಬಂತೆ ನೋಡದೆ.. ಸೇವೆ ಮಾಡಿದ್ಧಾರೆ. ಹೀಗಾಗಿ ಕಾಂಗ್ರೆಸ್ಸಿನ ಕಟ್ಟರ್ ಕಾರ್ಯಕರ್ತರೂ ಕೂಡಾ ಮಂಜುನಾಥ್ ವಿರುದ್ಧ ಪ್ರಚಾರಕ್ಕೆ ಹಿಂದೇಟು ಹೊಡೆಯುತ್ತಿದ್ಧಾರೆ. ಇದು ಡಿಕೆ ಬ್ರದರ್ಸ್ʻಗೆ ಹೇಳಲಾರದ ಸಂಕಟ.
ಯಡಿಯೂರಪ್ಪ ಕೈ ಇಟ್ರೆ ಭಿನ್ನಮತ ಕೂಲ್ ಕೂಲ್ :
ಇನ್ನು ಬಿಜೆಪಿ ವಿಷಯಕ್ಕೆ ಬಂದರೆ.. ಅಲ್ಲಿಯೂ ಭಿನ್ಮಮತಗಳಿದ್ದವು. ಆದರೆ.. ಚಿಕ್ಕಬಳ್ಳಾಪುರ ಒಂದು ಬಿಟ್ಟರೆ.. ಬಹುತೇಕ ಎಲ್ಲವನ್ನೂ ಯಡಿಯೂರಪ್ಪ ಬಗೆಹರಿಸಿದ್ದಾರೆ. ದಾವಣಗೆರೆಯಲ್ಲಿ ರೇಣುಕಾಚಾರ್ಯ, ಚಿತ್ರದುರ್ಗದಲ್ಲಿ ಚಂದ್ರಪ್ಪ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಬೀದರ್.. ಅಷ್ಟೇಕೆ.. ಹಾಸನದಲ್ಲಿ ಪ್ರೀತಂ ಗೌಡರನ್ನೂ ಮನವೊಲಿಸಿದ್ಧಾರೆ. ಈಶ್ವರಪ್ಪ ವಿಚಾರದಲ್ಲಿ ಪ್ರಯತ್ನ ಪಟ್ಟಿಲ್ಲ ಎಂಬುದು ಬಿಟ್ಟರೆ.. ಎಲ್ಲ ಬಂಡಾಯವೂ ಶಾಂತವಾಗಿದೆ.



