ಹೆತ್ತವರಿಗೆ ಮುಕ್ತಿ ದೊರಕಿಸುವುದು ಗಂಡು ಮಕ್ಕಳು ಎನ್ನುವುದು ನಂಬಿಕೆ. ತಂದೆ ಅಥವಾ ತಾಯಿ ಮೃತಪಟ್ಟಾಗ ಮನೆಯ ಗಂಡು ಮಕ್ಕಳೇ ಅಂತ್ಯಕ್ರಿಯೆ ನಡೆಸುವ ಪದ್ಧತಿ ಇವತ್ತಿಗೂ ಇದೆ. ಜನ ಗಂಡು ಮಕ್ಕಳೇ ಬೇಕು ಎಂದು ಆಸೆ ಪಡುವಷ್ಟು ಪ್ರಬಲವಾಗಿರುವ ಈ ಸಂಪ್ರದಾಯ ಶತಶತಮಾನಗಳಿಂದ ಇದೆ. ಕೊನೆಗೆ ಕೊಳ್ಳಿ ಇಡೋಕ್ ಒಬ್ಬ ಗಂಡ್ ದಿಕ್ಕಿರ್ಲಿ ಎನ್ನುವವರು ಇವತ್ತಿಗೂ ಇದ್ದಾರೆ. ಎಷ್ಟೋ ಭ್ರೂಣ ಹತ್ಯೆಗಳ ಕಾರಣಗಳಲ್ಲಿ ಇದೂ ಒಂದು. ಅದೆಲ್ಲವನ್ನೂ ಮೀರಿದ್ದ ಕಾರಣಕ್ಕಾಗಿಯೇ ದಿವ್ಯಾ ಆಲೂರು ಅವರು ತಂದೆಯ ಅಂತ್ಯಕ್ರಿಯೆ ನಡೆಸಿದ್ದು ಸಂಚಲನ ಮೂಡಿಸ್ತಾ ಇದೆ.
ಆದರೆ ಗಂಡು ಮಕ್ಕಳು ಇಲ್ಲದಿದ್ದರೆ ಹೆಣ್ಣು ಮಕ್ಕಳು ಅಂತ್ಯಕ್ರಿಯೆ ನಡೆಸಿದ್ದು ಹೊಸದೇನಲ್ಲ. ದೊಡ್ಡ ಮಟ್ಟದಲ್ಲಿ ಹೇಳಬೇಕೆಂದರೆ.. ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ನೆರವೇರಿಸಿದ್ದು ಈಗ ಸಂಸದೆಯಾಗಿರುವ ಅವರ ಮಗಳು ಬಾನ್ಸುರಿ. ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಹಾಜರಾಗಿದ್ದರು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದೂ ಕೂಡಾ ಅವರ ಮಗಳೇ.
ಇಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ.. ಒಂದಂತೂ ನಿಜ. ಕೆಲವು ಅರ್ಥವಿಲ್ಲದ ಗೊಡ್ಡು ಸಂಪ್ರದಾಯಗಳು ದೂರವಾಗುತ್ತಿವೆ.
ದಿವ್ಯಾ ಆಲೂರು. ಗಾಯಕಿ. ನಿರೂಪಕಿ. ಮೋಟಿವೇಷನಲ್ ಸ್ಪೀಕರ್. ಜನಪದ ಗಾಯಕಿಯೂ ಹೌದು. ಈಕೆಯ ತಂದೆ ಆಲೂರು ನಾಗಪ್ಪ. ಮೃತಪಟ್ಟ ಆಲೂರು ನಾಗಪ್ಪನವರ ಅಂತ್ಯಕ್ರಿಯೆಯನ್ನು ಮಗಳು ದಿವ್ಯಾ ಆಲೂರು ಅವರೇ ಮಾಡಿದ್ದು ಸುದ್ದಿಯಾಗ್ತಾ ಇದೆ. ಇದು ಸುದ್ದಿಯಾಗಿದ್ದಕ್ಕೆ ಕಾರಣವೂ ಇದೆ.
ದಿವ್ಯಾ ಆಲೂರು ಕಿರುತೆರೆಯಲ್ಲಿ ಖ್ಯಾತ ನಿರೂಪಕಿ. ವಿಶೇಷವಾಗಿ ಧಾರ್ಮಿಕ ಹಾಗೂ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಹೆಸರು ಮಾಡಿದವರು. ಕಸ್ತೂರಿ ವಾಹಿನಿಯ ಅಂತರಂಗ ಕಾರ್ಯಕ್ರಮದಿಂದ ಶುರುವಾದ ಪಯಣ ದಿವ್ಯಾ ಆಲೂರು ಅವರನ್ನು ಎಲ್ಲಿಗೋ ಕರೆದುಕೊಂಡು ಹೋಗಿದೆ. ಅಂತರಂಗ (ಸಂದರ್ಶನ), ನೀವ್ ಕೇಳಿ ನಮ್ಮ ಹಾಡು (ಸಂಗೀತ ನಿರೂಪಣೆ), ಓಂಕಾರ, ನಮಸ್ತೆ ಶಂಕರ (ರವಿ ಶಂಕರ್ ಗುರೂಜಿ ಜೊತೆ), ಮಹರ್ಷಿವಾಣಿ (ಆನಂದ್ ಗುರೂಜಿ ಜೊತೆ), ಬೃಹತ್ ಬ್ರಹ್ಮಾಂಡ (ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ).. ಹೀಗೆ ಹಲವು ಜ್ಯೋತಿಷ್ಯ ಆಧಾರಿಸಿದ ಕಾರ್ಯಕ್ರಮಗಳಲ್ಲಿ ದಿವ್ಯಾ ಆಲೂರು ನಿರೂಪಕಿ. ಅಷ್ಟೇ ಅಲ್ಲ, ಸವಿತಾ ಶರ್ಮ ಗುರೂಜಿ, ಹಂಡ್ರಮನೆ ಗೋಪಾಲಕೃಷ್ಣ ಗುರೂಜಿ, ಮೇಲುಕೋಟೆ ಶ್ರೀನಿವಾಸ ಅಯ್ಯಂಗಾರ್, ರವಿಶಾಸ್ತ್ರಿ ಸೇರಿದಂತೆ ಹಲವು ಜ್ಯೋತಿಷಿಗಳು ಹಾಗೂ ಧರ್ಮ ಪ್ರವಚನಕಾರರ ಕಾರ್ಯಕ್ರಮಗಳ ನಿರೂಪಕಿ ದಿವ್ಯಾ ಆಲೂರು. ತುಂಬಾ ಹೆಸರು ತಂದುಕೊಟ್ಟಿದ್ದು ಬ್ರಹ್ಮಾಂಡ ಗುರೂಜಿಯ ಕಾರ್ಯಕ್ರಮ.
ಕಸ್ತೂರಿಯಿಂದ ಶುರುವಾದ ಪಯಣದಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ.. ಹೀಗೆ ಎಲ್ಲ ಟಿವಿ ವಾಹಿನಿಗಳಲ್ಲೂ 15 ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ದಿವ್ಯಾ ತಂದೆಯ ಅಂತ್ಯಕ್ರಿಯೆಯಲ್ಲಿ ಅಗ್ನಿ ಸ್ಪರ್ಶ ಕೊಟ್ಟು ಸುದ್ದಿಯಾಗಿದ್ದಾರೆ.
ದಿವ್ಯಾ ಅವರ ಅಕ್ಕ ನಳಿನಿ, ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. ಇದೀಗ ದಿವ್ಯಾ ತಂದೆಗೆ ಅಗ್ನಿ ಸ್ಪರ್ಶ ಮಾಡಿ ಸುದ್ದಿಯಾಗಿದ್ಧಾರೆ. ದಿವ್ಯಾ ಅವರ ಈ ನಡೆಗೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಅಂದಹಾಗೆ ತಂದೆ ಅಥವಾ ತಾಯಂದಿರ ಅಂತ್ಯಕ್ರಿಯೆಯನ್ನು ಗಂಡು ಮಕ್ಕಳೇ ಮಾಡಬೇಕು ಎನ್ನುವುದು ನಂಬಿಕೆಯಷ್ಟೇ. ಆ ನಂಬಿಕೆಯೇ ಸಂಪ್ರದಾಯವಾಗಿ ಬದಲಾಗಿದೆ. ಈ ಹಿಂದೆಯೂ ಹಲವರು ಇದೇ ರೀತಿ ತಂದೆಯ ಅಂತ್ಯಕ್ರಿಯೆ, ವಿಧಿ ವಿಧಾನ, ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ.. ಹೀಗೆ ಅಂತ್ಯಕ್ರಿಯೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಮುರಿದಿದ್ದಾರೆ.
ಅಂದಹಾಗೆ ವೇದಗಳ ಕಾಲದಲ್ಲಿ ಕೂಡಾ ಈ ಪದ್ಧತಿ ಇರಲಿಲ್ಲ. ಇತಿಹಾಸಕಾರರು ಹಾಗೂ ಧಾರ್ಮಿಕ ಪ್ರಜ್ಞಾವಂತರನ್ನು ಕೇಳಿದರೆ.. ಯುದ್ಧದಲ್ಲಿ ಸಾವು, ದಂಗೆ ಕೋರರಿಂದ ಹತ್ಯೆ, ರಜಾಕಾರರ ಹಾವಳಿ ಹೆಚ್ಚಾದ ನಂತರ ಈ ರೀತಿಯ ಪದ್ಧತಿ ಜಾರಿಗೆ ಬಂದಿರಬಹುದೇ ಹೊರತು, ಮೂಲ ವೇದಕಾಲದ ಇತಿಹಾಸದಲ್ಲಿಯೂ ಇಲ್ಲ. ಅಲ್ಲದೆ ಹಿಂದೂ ಧರ್ಮದಲ್ಲಿ ಇದೇ ರೀತಿ ಮಾಡಬೇಕು ಎಂಬ ಯಾವ ಕಟ್ಟಾಜ್ಞೆಗಳೂ ಇಲ್ಲ.



