ತಂದೆ, ತಾಯಿಯ ಆಸೆ ನೂರಾರಿರುತ್ತವೆ. ಅವುಗಳನ್ನು ಈಡೇರಿಸುವ ಸಲುವಾಗಿ ಮಕ್ಕಳ ಮೇಲೆ ಹೊರೆ ಹೊರಿಸುತ್ತಾರೆ. ಅದು ಹೊರೆಯೋ.. ಆಸೆಯೋ.. ಏನೇ ಆಗಲಿ.. ಕೆಲವರು ತಂದೆ ತಾಯಿಯರ ಕನಸು ನನಸು ಮಾಡ್ತಾರೆ. ಕೆಲವರಿಂದ ಆಗುವುದಿಲ್ಲ. ಇದೀಗ ಶಮಿಕಾ ಕುಮಾರಸ್ವಾಮಿ ಕುರಿತು ತಂದೆ ಕಟ್ಟಿದ್ದ ಕನಸನ್ನು ತಾಯಿ ರಾಧಿಕಾ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರ ಮಗಳು ಶಮಿಕಾಗೆ ಇನ್ನೂ ಚಿಕ್ಕ ವಯಸ್ಸು. ಆದರೆ, ಅವಳನ್ನು ಟೆನ್ನಿಸ್ ಕಲಿಯಲು ಸೇರಿಸಿದ್ದಾರಂತೆ ರಾಧಿಕಾ. ಅದಕ್ಕೆ ಕಾರಣ, ಶಮಿಕಾ ಅವರ ತಂದೆ ಕುಮಾರಸ್ವಾಮಿ. ಕುಮಾರಸ್ವಾಮಿ ಅವರಿಗೆ ತಮ್ಮ ಮಗಳು ಟೆನ್ನಿಸ್ ಪ್ಲೇಯರ್ ಆಗಬೇಕು ಅನ್ನೋ ಆಸೆ ಇದೆಯಂತೆ. ಹಾಗಂತ ನಟನೆಯಲ್ಲಿ ಇಂಟ್ರೆಸ್ಟ್ ಇಲ್ಲವಾ ಎಂದರೆ, ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರದ ಕಥೆ ಹೇಳ್ತಾರೆ.
ಅವರಿಗೆ ನಟನೆ ಇಷ್ಟ ಇರಲಿಲ್ಲ. ನಾನು ನಟಿಸುವುದೂ ಕೂಡಾ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನಾನು ಚಿತ್ರರಂಗದಿಂದ ಅಂತರ ಕಾಯ್ದುಕೊಂಡೆ ಎನ್ನುವ ರಾಧಿಕಾ ಕುಮಾರಸ್ವಾಮಿ, ಈಗ ಭೈರಾದೇವಿ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಆ ‘ಭೈರಾದೇವಿ’ ಸಿನಿಮಾದ ಒಂದ ಪಾತ್ರಕ್ಕೆ ಶಮಿಕಾ ಅವರನ್ನು ಕೇಳಿದ್ದರಂತೆ ನಿರ್ದೇಶಕರು. ಹಿಂದೆ ಮುಂದೆ ಯೋಚಿಸದೆ ರಾಧಿಕಾ ಕುಮಾರಸ್ವಾಮಿ ಕೂಡಾ ಎಸ್ ಅಂದ್ರಂತೆ. ಆನಂತರ ಶಮಿಕಾರಿಂದ ಡೈಲಾಗ್ ಹೇಳಿಸಲಾಯ್ತು, ಅಳುವ ಸೀನ್ ಮಾಡಿಸಲಾಯ್ತು. ಪಾತ್ರದೊಳಗೆ ಇನ್‌ವಾಲ್ವ್ ಆದ ಶಮಿಕಾ ಆಕ್ಟಿಂಗ್ ಕೂಡಾ ಚೆನ್ನಾಗಿಯೇ ಬಂತು. ಅದನ್ನ ಕಂಡು ‘’ನನ್ನನ್ನೇ ಮೀರಿಸ್ತಾಳಲ್ಲಾ..’’ ಅಂತ ಮಗಳ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೆಮ್ಮೆ ಪಟ್ಟಿದ್ದರಂತೆ. ಆದರೆ ಯಾವಾಗ ಶಮಿಕಾ ನಟಿಸುವ ಎಕ್ಸೈಟ್ʻಮೆಂಟಿನಲ್ಲಿ ನಿದ್ರೆ ಮಾಡಲಿಲ್ಲವೋ.. ರಾತ್ರಿಯೆಲ್ಲ ನನಗೆ ಟ್ಯಾನ್ ಆಗಿದೆ, ಬೆಳ್ಳಗಾಗಬೇಕು, ಆಕ್ಟಿಂಗ್ ಹೇಳಿಕೊಡಿ ಎಂದು ಕನವರಿಸತೊಡಗಿದಳೋ.. ಆಗ ರಾಧಿಕಾ ಭಯ ಬಿದ್ದರಂತೆ.
ಈ ವಯಸ್ಸಿನಲ್ಲಿ ನಟನೆಗೆ ಬಂದು ಬಿಟ್ಟರೆ, ಓದಿನಲ್ಲಿ ಆಸಕ್ತಿ ಹೋಗಬಹುದು ಎಂದು ನಿರ್ಧಾರ ಮಾಡಿ, ನಿರ್ದೇಶಕರಿಗೆ ಬೇಡ ಎಂದು ಹೇಳಿಬಿಟ್ಟರಂತೆ. ಅಲ್ಲದೆ ಮಗಳು ಟೆನ್ನಿಸ್ ಪ್ಲೇಯರ್ ಆಗುವ ಕನಸು ಅಪ್ಪನದ್ದು. ಅಪ್ಪನ ಆಸೆಯಂತೆಯೇ ಶಮಿಕಾರನ್ನು ಟೆನ್ನಿಸ್ ಆಟಗಾರ್ತಿಯಾಗಿ ಮಾಡುವ ಕನಸು ಹೊತ್ತಿದ್ದಾರಂತೆ ರಾಧಿಕಾ ಕುಮಾರಸ್ವಾಮಿ. ಟೆನ್ನಿಸ್ ತರಬೇತಿಯನ್ನೂ ಕೊಡಿಸ್ತಿದ್ದಾರಂತೆ.
ರಾಧಿಕಾ ಕುಮಾರಸ್ವಾಮಿ 40ರ ಹರೆಯದ ಹೊಸ್ತಿಲಲ್ಲಿದ್ದಾರೆ. ಅವರಿಗೀಗ 39 ವರ್ಷ ವಯಸ್ಸು. ಶಮಿಕಾ ಕುಮಾರಸ್ವಾಮಿಯೂ ಶಾಲೆಗೆ ಹೋಗ್ತಿದ್ದಾರೆ. ಆದರೆ ನಟನೆಯಿಂದ ಮಗಳನ್ನು ದೂರ ಇಟ್ಟಿರುವ ರಾಧಿಕಾ, ತಂದೆಯ ಆಸೆಯಂತೆ ಮಗಳನ್ನು ಕ್ರೀಡಾಪಟುವಾಗಿ ರೂಪಿಸುವ ಹಾದಿಯಲ್ಲಿದ್ದಾರೆ.
ಇದರ ಜೊತೆಯಲ್ಲೇ ಭೈರಾದೇವಿ ಚಿತ್ರದ ಪ್ರಚಾರವನ್ನೂ ಆರಂಭಿಸಿರುವ ರಾಧಿಕಾ ಪ್ರಚಾರ ಕಾರ್ಯದಲ್ಲಿ ರಾಧಿಕಾ ಅವರು ತೊಡಗಿಕೊಂಡಿದ್ದಾರೆ. ಅವರ ನಿವಾಸದ ಬಳಿ ‘ಭೈರಾದೇವಿ’ ಸಿನಿಮಾಗೆ ಟ್ಯಾಬ್ಲೊ ಮತ್ತು ಆಟೋ ಪ್ರಚಾರ ಆರಂಭಿಸಿದ್ದಾರೆ. ಸ್ವತಃ ಆಟೋ ಡ್ರೈವ್ ಮಾಡಿದ್ದಾರೆ.
ವಿವಿಧ ಟಿವಿ ಚಾನೆಲ್ಲುಗಳಿಗೆ ಸಂದರ್ಶನ ಕೊಡ್ತಿದ್ದಾರೆ. ಆ ಹಲವು ಸಂದರ್ಶನಗಳಲ್ಲಿ ರಾಧಿಕಾ ಕುಮಾರಸ್ವಾಮಿ, ಮಗಳು ಶಮಿಕಾ ಅವರ ಬಗ್ಗೆ ತಂದೆ ಕಂಡಿದ್ದ ಕನಸನ್ನು ಹೇಳಿಕೊಂಡಿದ್ದಾರೆ.



