ತೀರಾ ಇತ್ತೀಚೆಗೆ ಹಾಸನದಲ್ಲಿ ಶಿಕ್ಷಕಿಯೊಬ್ಬಳನ್ನು ಅಪಹರಿಸಿ ಮದುವೆಗೆ ಪ್ರಯತ್ನ ಮಾಡಲಾಗಿತ್ತು. ಮದುವೆಗೆ ಒಪ್ಪದ, ಪ್ರೀತಿಸಲು ನಿರಾಕರಿಸುವ ಹೆಣ್ಣು ಮಕ್ಕಳನ್ನು ಅಪಹರಿಸುವ, ಪೀಡಿಸುವ ಕೆಟ್ಟ ಚಾಳಿ ಹಲವರಲ್ಲಿದೆ. ಅಂತಹ ಘಟನೆಗಳು ವರದಿಯಾಗುತ್ತಲೂ ಇರುತ್ತವೆ. ಆದರೆ ಇದು ಅಪರೂಪ. ಹುಡುನನ್ನು ಕಿಡ್ನಾಪ್ ಮಾಡಿಸಿ ಮದುವೆ ಮಾಡಿಸುವುದು. ಆದರೆ ಇಂತಹ ಮದುವೆಗಳು ಬಿಹಾರದಲ್ಲಿ ಮಾಮೂಲು. ಅಂತಹ ಮದುವೆಗಳಿಗೆ ಪಕ್ಡೋವಾ ವಿವಾಹ್ ಅನ್ನೋ ಹೆಸರೂ ಇದೆ.
ಗೌತಮ್ ಕುಮಾರ್ ಎಂಬ ಶಿಕ್ಷಕ ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿಕೊಂಡಿದ್ದು, ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು. ಈ ವೇಳೆ ಮೂರ್ನಾಲ್ಕು ಮಂದಿ ಶಾಲೆ ಬಂದು ಬಲವಂತವಾಗಿ ಗೌತಮ್ ಅವರನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ಧಾರೆ. ಹೀಗೆ ಮದುವೆ ಮಾಡಿಸಿರುವುದು ಬೇರಾರೂ ಅಲ್ಲ, ಹುಡುಗಿಯ ಅಪ್ಪ.
ಪೊಲೀಸರ ಪ್ರಕಾರ, ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್. ಅಪಹರಣ ನಂತರ ಗೌತಮ್ ಅವರನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕೂ ಮೊದಲು ಗೌತಮ್ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಜತೆಗೆ ತನ್ನ ಮಗನಿಗೆ ಅನ್ಯಾಯ ಮಾಡಿದ್ದಾರೆ ಎಂದು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ರಾಜೇಶ್ ರೈ ವ್ಯಕ್ತಿ ಕಾರಣ ಎಂದು ಗೌತಮ್ ಕುಮಾರ್ ಮನೆಯವರು ಆರೋಪಿಸಿದ್ದಾರೆ. ತನ್ನ ಮಗನನ್ನು ಬಲವಂತವಾಗಿ ಅಪಹರಿಸಿ, ರಾಜೇಶ್ ರೈ ತನ್ನ ಮಗಳು ಚಾಂದಿನಿಯೊಂದಿಗೆ ವಿವಾಹ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆಯೇ ನಮ್ಮ ಮನೆಗೆ ಬಂದು ಅವರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ನನ್ನ ಮಗನಿಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಇಂತಹ ಪ್ರಕರಣಗಳು ಮಾಮೂಲು. ಅವುಗಳನ್ನ ಪಕ್ಡೋವಾ ವಿವಾಹ್ ಅಂತಾರೆ. ಅಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಹುಡುಗರ ಕಿಡ್ನಾಪ್ ಆಗುತ್ತದೆ. ಪಕ್ಡೋವಾ ವಿವಾಹ್ ಎಂದರೆ ಹೆಸರೇ ಹೇಳುವಂತೆ ಹಿಡಿದು ಮದುವೆ ಮಾಡಿಸುವುದು ಅಂತ ಅರ್ಥ. 1870ರಿಂದಲೂ ಇದು ರೂಢಿಯಲ್ಲಿದೆ. ಜಮೀನ್ದಾರರು, ಶ್ರೀಮಂತರು ತಮ್ಮ ಆಸ್ತಿ ಉಳಿಸಿಕೊಳ್ಳೋಕೆ ಇಂತಹ ಪಕ್ಡೋವಾ ವಿವಾಹ್ ಮಾಡ್ತಾರೆ. ಇನ್ನು ಸರ್ಕಾರಿ ಉದ್ಯೋಗದಲ್ಲಿರುವ ಯುವಕರನ್ನು ಹುಡುಕಿ ಕಿಡ್ನಾಪ್ ಮಾಡಿ ಮದುವೆ ಮಾಡಿಕೋಳ್ತಾರೆ. ಇಂತಹ ಹುಡುಗರನ್ನು ಹುಡುಕುವ ಗ್ಯಾಂಗುಗಳೇ ಇದ್ದು, 5 ಸಾವಿರದಿಂದ 50 ಸಾವಿರದವರೆಗೂ ದುಡ್ಡೂ ಕೊಡ್ತಾರೆ. ಇಂತಹುದೇ ಒಂದು ಮದುವೆ ಈಗ ನಡೆದಿದೆ. ಇತ್ತೀಚೆಗೆ ಇಂತಹ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಅತ್ರಂಗಿರೇ ಅನ್ನೋ ಸಿನಿಮಾ ಕೂಡಾ ಬಂದಿತ್ತು. ಅಕ್ಷಯ್ ಕುಮಾರ್, ಧನುಷ್, ಸಾರಾ ಅಲಿ ಖಾನ್, ಡಿಂಪಲ್ ಹಯಾತಿ ನಟಿಸಿದ್ದರು. ಜಬರಿಯಾ ಜೋಡಿ ಅನ್ನೋ ಸಿನಿಮಾ, ಭಾಗ್ಯವಿಧಾತ ಅನ್ನೋ ಧಾರಾವಾಹಿಯೂ ಬಂದಿತ್ತು.



