ಈಗಿನ್ನೂ ಮಳೆಗಾಲ ನಡೆಯುತ್ತಿದೆ. ಎಷ್ಟೋ ಕಡೆ ನಾಟಿ ಮಾಡುವ ಕೆಲಸಗಳಿನ್ನೂ ಚಾಲ್ತಿಯಲ್ಲಿವೆ. ಆದರೆ, ಕರ್ನಾಟಕದಲ್ಲಿ ಬಹುತೇಕ ಕಡೆ ಕೆಲಸಕ್ಕೆ ಕೂಲಿಗಳು ಸಿಗುತ್ತಿಲ್ಲ. ಇದು ವಿಚಿತ್ರವಾದರೂ ಸತ್ಯ. ಇತ್ತೀಚೆಗೆ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದ್ದು, ಭತ್ತ ನಾಟಿ ಮಾಡಲು ಸ್ಥಳೀಯರೇ ಸಿಗುತ್ತಿಲ್ಲ. ಇದಕ್ಕಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಕಾರ್ಮಿಕರು ಲಗ್ಗೆ ಇಟ್ಟಿದ್ದಾರೆ. ಭತ್ತ ನಾಟಿ ಮಾಡುವುದು ಆಗಸ್ಟ್ ಅಂತ್ಯದ ಹೊತ್ತಿಗೆ ಸಂಪೂರ್ಣವಾಗಿ ಮುಗಿಯಬೇಕಿತ್ತು. ಆದರೆ, ಕಾರ್ಮಿಕರ ಕೊರತೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಆರಂಭ ಆಗಿದೆ. ಭತ್ತ ಬೆಳೆಯುವ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಕೊಪ್ಪಳ, ಬೆಳಗಾವಿ, ಮಂಡ್ಯ ಸೇರಿದಂತೆ ಎಲ್ಲ ಕಡೆಯೂ ಇದೇ ಸಮಸ್ಯೆ.
ಜಮೀನುಗಳಲ್ಲಿ ನಾಟಿ ಮಾಡಲು ಸರಿಯಾದ ಸಮಯಕ್ಕೆ ರೈತರಿಗೆ ಕೂಲಿ ಕಾರ್ಮಿಕರು ಸಿಗದೆ ಇರುವುದೇ ದೊಡ್ಡ ತಲೆಬಿಸಿಯಾಗಿದೆ. ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ರೈತರು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ್, ಅಸ್ಸಾಂ, ಮಧ್ಯ ಪ್ರದೇಶ ರಾಜ್ಯದ ಕಾರ್ಮಿಕರ ಮೊರೆ ಹೋಗಿದ್ದಾರೆ. ಒಂದೊಂದು ಜಿಲ್ಲೆಯಲ್ಲಿ ತಲಾ 50/50ರ ಗುಂಪಿನಂತೆ ನಾಲ್ಕು ನಾಲ್ಕು ಗುಂಪು ಮಾಡಿಕೊಂಡು ಬಂದು ಕೂಲಿ ಮಾಡುತ್ತಿದ್ದಾರೆ.
ಇದು ಹೊಸ ಸಮಸ್ಯೆ ಏನಲ್ಲ. ಮಲೆನಾಡಿನ ಕಡೆ ಹೋದರೆ, ಅಲ್ಲಿ ಕಾಫಿ ತೋಟ, ರಬ್ಬರ್ ತೋಟ, ಅಡಿಕೆ, ತೆಂಗಿನ ತೋಟಗಳಲ್ಲಿ ಕೂಲಿ ಮಾಡುವವರು ಸಿಗುತ್ತಿಲ್ಲ. ಅಲ್ಲಿಯೂ ಕೂಡಾ ಹೊರ ರಾಜ್ಯಗಳವರದ್ದೇ ಕಾರುಬಾರು ನಡೆಯುತ್ತಿದೆ.
ಬೆಳಿಗ್ಗೆ 6 ರಿಂದ ಸಂಜೆ 6ರ ತನಕ ಬರೋಬ್ಬರಿ 6 ರಿಂದ 7 ಎಕರೆ ನಾಟಿ ಮಾಡುತ್ತೇವೆ. ಓರ್ವ ಏಜೆಂಟ್ ನಮ್ಮನ್ನು ಕರೆತಂದಿದ್ದಾರೆ. ಗ್ಯಾಸ್, ರೂಮ್, ಊಟ ಎಲ್ಲಾ ಕೊಟ್ಟಿದ್ದಾರೆ. ಏಜೆಂಟ್ ನಮಗೆ ಹಣವನ್ನು ಶೇಖರಿಸಿ ಕೊಡುತ್ತಾರೆ. ನಾವು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶದಿಂದ ಬಂದಿದ್ದೇವೆ. ಒಂದು ದಿನಕ್ಕೆ 1000 ರೂಪಾಯಿ ನಮಗೆ ಸಿಕ್ಕೆ ಸಿಗುತ್ತದೆ ಅಂತಾರೆ ಕೂಲಿ ಕಾರ್ಮಿಕರು. ಅಂದರೆ, ದಿನಕ್ಕೆ ಒಂದು ಸಾವಿರ ರೂಪಾಯಿ. 14 ಜನರ ಊಟ, ಕೊಠಡಿ ಎಲ್ಲವನ್ನೂ ಕೊಟ್ಟು ಒಂದು ಸಾವಿರ ರೂಪಾಯಿ ಕೂಲಿ ಕೊಡ್ತಾರೆ.
ಇಲ್ಲಿನವರು ಜಾಸ್ತಿ ಕೂಲಿ ಕೇಳ್ತಾರೆ. ಭತ್ತ ನಾಟಿ ಮಾಡುವುದಕ್ಕೆ ಒಬ್ಬರಿಗೆ ದಿನಕ್ಕೆ 300-400 ರೂ. ಕೂಲಿ ಕೇಳ್ತಾರೆ. ಅಷ್ಟು ಕೊಟ್ಟರೂ ಕೂಡಾ ದಿನವಿಡೀ ಕೆಲಸ ಮಾಡುವುದಿಲ್ಲ. ಮಧ್ಯೆ ಮಧ್ಯೆ ಊಟ, ತಿಂಡಿ, ಟೀ/ಕಾಫಿ, ಬೀಡಿ, ಮಲಮೂತ್ರ ವಿಸರ್ಜನೆ ಎಂದು ಅರ್ಧದಿನ ಕಳೆದು ಬಿಡುತ್ತಾರೆ. ಆದರೆ ಇವರು ಹಾಗಲ್ಲ. ತೆ ಬಿಹಾರಿ ಕಾರ್ಮಿಕರ ನಾಟಿ, ಪಟ್ಟಿ ಇರಿಸಿ ಗೆರೆ ಹೊಡೆದಷ್ಟು ನೀಟಾಗಿರುತ್ತದೆ. ಸ್ಥಳೀಯ ಕಾರ್ಮಿಕರು ಸಸಿಗಳ ಬೇರುಗಳಲ್ಲಿನ ಮಣ್ಣಿನ ಸಮೇತ ಗದ್ದೆಯಲ್ಲಿ ಊರುತ್ತಾರೆ. ಬಿಹಾರಿಗಳು ಸಸಿಗಳನ್ನು ಕಾಲಿಗೆ ಹೊಡೆದುಕೊಂಡು ಬೇರಲ್ಲಿನ ಮಣ್ಣನ್ನೆಲ್ಲ ಕೊಡವಿ ನಾಟಿ ಮಾಡುತ್ತಾರೆ. ಇದು ಭತ್ತದ ಸಸಿಗಳ ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಸಾಲುಗಳು ನೀಟಾಗುವ ಜತೆಗೆ ಪ್ರತಿ ಸಾಲಿನ ನಡುವೆ ನಿರ್ದಿಷ್ಟ ಅಂತರ ಇರುವ ಹಿನ್ನಲೆ ಗಾಳಿ-ಬೆಳಕು ಸುಗಮವಾಗಿರುತ್ತದೆ ಎಂದೆಲ್ಲ ವಿವರಿಸುತ್ತಾರೆ.
ಅಷ್ಟೇ ಅಲ್ಲ, ಸ್ಥಳೀಯ ಕಾರ್ಮಿಕರು ಒಂದು ದಿನಕ್ಕೆ 4-5 ಎಕರೆ ನಾಟಿ ಮಾಡಿದರೆ, ಉತ್ತರ ಭಾರತದ ಕಾರ್ಮಿಕರು ಡಬಲ್ ಮಾಡ್ತಾರೆ. ಅಂದರೆ ದಿನಕ್ಕೆ 8 ರಿಂದ 10 ಎಕರೆ ಭತ್ತ ನಾಟಿ ಮಾಡುತ್ತಾರೆ. ಸ್ಥಳೀಯರಿಗಾದರೆ ಎಕರೆ ಭತ್ತ ನಾಟಿ ಮಾಡುವುದಕ್ಕೆ ೪೫೦೦ ರೂ. ಕೊಡಬೇಕು. ಉತ್ತರ ಭಾರತದವರಿಗಾದರೆ ೩೫೦೦ ರೂ. ಕೊಡುತ್ತೇವೆ ಅಂತಾರೆ.
ಒಟ್ಟಿನಲ್ಲಿ ಭೂಮಿ ಇದೆ. ಕೃಷಿ ಇದೆ. ನೀರಾವರಿಯೂ ಇದೆ ಎಂದರೆ.. ಅಲ್ಲಿ ಕೂಲಿ ಕಾರ್ಮಿಕರು ಸಿಕ್ಕಲ್ಲ. ಕೃಷಿ ಕೆಲಸ ಮಾಡುವುದಕ್ಕೂ ಡಿಮ್ಯಾಂಡ್ ಶುರುವಾಗಿದೆ.



