ʻನಮ್ಮಣ್ಣ ಏನ್ ಮಾಡಿದ್ರೂ ಸೂಪರ್, ಅಷ್ಟಕ್ಕೂ ಯಾರ್ ಕೊಲೆನೂ ಮಾಡಿಲ್ವಲ್ಲ..’
ʻನಮ್ಮಣ್ಣ.. ನಮ್ಮಣ್ಣ.. ಜೈ ಜೈ..’
ʻತಪ್ಪು ಮಾಡಿದ್ದಕ್ಕೆ ನಮ್ಮಣ್ಣ ಶಿಕ್ಷೆ ಕೊಟ್ಟಿದ್ದಾರಷ್ಟೇ..’
ʻನಮ್ಮ ಬಾಸ್ ಸುಮ್ಮನೆ ಕೊಲೆ ಮಾಡಿರೋದಿಲ್ಲ. ಅದಕ್ಕೆ ಕಾರಣ ಇರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೇ. ನೀವು ನಮ್ ಬಾಸ್ ದು ಏನೂ ಕಿತ್ತುಕೊಳ್ಳೋಕೆ ಆಗಲ್ಲ..’
ʻನಮ್ಮ ಬಾಸ್ ಯಾರಿಗೂ ಕಮ್ಮಿ ಇಲ್ಲ. ಕೊಲೆಯ ಪ್ರಕರಣದಲ್ಲಿ ದೊರಕಿದ ನಮ್ಮ ಬಾಸ್ ಇಲ್ಲಿಯವರೆಗೂ ಯಾವ ಹೀರೋನೂ ಕೊಲೆ ಕೇಸ್‌ಅಲ್ಲಿ ಅರೆಸ್ಟ್ ಆಗಿಲ್ಲ. ನಮ್ಮ ಬಾಸ್ ಮೊದಲು. ಜೈ ಡಿ ಬಾಸ್, ಜೈ ಡಿ ಬಾಸ್. ನಮ್ಮ ಬಾಸ್ ಏನೇ ಮಾಡಿದರೂ ನಮ್ಮ ಹೆಮ್ಮೆ. ನಮ್ಮ ಬಾಸ್ ಕನ್ನಡ ಚಿತ್ರರಂಗದ ಆಸ್ತಿ’
ಇಂತಹ ಪೋಸ್ಟುಗಳು, ಪೊಲೀಸ್ ಠಾಣೆ ಎದುರು ಕೇಳಿ ಬರುತ್ತಿದ್ದ ಜೈಕಾರಗಳು, ದರ್ಶನ್ ಏನೂ ತಪ್ಪು ಮಾಡಿಲ್ಲ ಎಂಬ ವರ್ತನೆಗಳು ಅಚ್ಚರಿ ಹುಟ್ಟಿಸುತ್ತಿವೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿಯ ಮೇಲೆ ರಕ್ತ ಬರುವಂತೆ ಹೊಡೆದಾಗಲೂ ಅಭಿಮಾನಿಗಳು ಜೈಕಾರ ಹಾಕಿದ್ದರು. ಅವರ ಹೆಂಡ್ತಿಗೆ ಅವರು ಹೊಡೆದ್ರೆ ಏನ್ ತಪ್ಪು ಅನ್ನೋ ಪ್ರಶ್ನೆ ಮಾಡಿದ್ದರು. ಈಗ ಕೊಲೆ ಕೇಸಿನಲ್ಲೂ ಅಭಿಮಾನಿಗಳು ದರ್ಶನ್ ಅವರಿಗೆ ಜೈಕಾರ ಹಾಕಿದ್ದಾರೆ.
ಆದರೆ.. ಕೆಲವು ದರ್ಶನ್ ಅಭಿಮಾನಿಗಳು ಈ ವರ್ತನೆಯಿಂದ ಹಿಂದೆ ಸರಿದವರೂ ಇದ್ದಾರೆ. ಇದ್ಯಾಕೋ ಪದೇ ಪದೇ ಆಗ್ತಿದೆ. ಅತಿಯಾಯ್ತು. ದರ್ಶನ್ʻಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ ದರ್ಶನ್ ಅಭಿಮಾನಿಗಳೂ ಇದ್ದಾರೆ. ಆದರೆ.. ಸಂಖ್ಯೆ ಕಡಿಮೆ.
ನಟರನ್ನು ಅಭಿಮಾನಿಸುವುದು ಬೇರೆ. ಆರಾಧಿಸುವುದು ಬೇರೆ. ಆದರೆ.. ಆ ನಟರು ಪರ್ಸನಲ್ ಜೀವನದಲ್ಲಿ ಮಾಡಿದ ಕ್ರೌರ್ಯವನ್ನೂ, ಕೊಲೆಯನ್ನೂ ಸಮರ್ಥಿಸುವುದು ಬೇರೆ. ಕೆಲವು ದರ್ಶನ್ ಅಭಿಮಾನಿಗಳು ದರ್ಶನ್ ಗ್ಯಾಂಗ್ʻನಿಂದ ನಡೆದಿರುವ ರೇಣುಕಾಸ್ವಾಮಿ ಕೊಲೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಕೂಡಾ ದರ್ಶನ್ ಅಭಿಮಾನಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟುಗಳು, ವಿಚಿತ್ರವಾಗಿವೆ. ನೂರಾರು ಜನ ದರ್ಶನ್ ಅಭಿಮಾನಿಗಳು ಪೊಲೀಸ್ ಠಾಣೆಯ ಎದುರು ಬಂದು ಜೈಕಾರ ಕೂಗಿದ್ದಾರೆ. ದರ್ಶನ್ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಕೈಬಿಟ್ಟರಾ ಧರ್ಮಪತ್ನಿ ವಿಜಯಲಕ್ಷ್ಮಿ..?
ಆದರೆ ಈ ನಡುವೆ ಅಚ್ಚರಿಯ ಬೆಳವಣಿಗೆ ನಡೆದಿರುವುದು ದರ್ಶನ್ ಅವರ ಧರ್ಮಪತ್ನಿಯಿಂದ. ಪವಿತ್ರ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ ದರ್ಶನ್ ವಿಚಾರಕ್ಕೆ ಹಲವು ಬಾರಿ ಜಗಳಗಳೇ ನಡೆದಿವೆ. ವಿಜಯಲಕ್ಷ್ಮಿ, ದರ್ಶನ್ ಅವರ ಧರ್ಮಪತ್ನಿ. ಅವರಿಬ್ಬರದ್ದೂ ಲವ್ ಮ್ಯಾರೇಜ್. ಮದುವೆಯಾಗುವಾಗ ದರ್ಶನ್ ಅವರು ಸ್ಟಾರ್ ನಟರಲ್ಲ. ಶ್ರೀಮಂತರೂ ಅಲ್ಲ. ವಿಜಯಲಕ್ಷ್ಮಿ ಕೂಡಾ ಈ ಹಿಂದೆ ದರ್ಶನ್ ಅವರಿಂದ ನೋವು ಕಂಡವರೇ. ಹೊಡೆತ ತಿಂದವರೇ. ಇದೀಗ ಪವಿತ್ರ ಗೌಡ ಅವರಿಗಾಗಿ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ ಮೇಲೆ ವಿಜಯಲಕ್ಷ್ಮಿ ಅವರು ಮೌನ ವಹಿಸಿದ್ದಾರೆ. ಈ ಘಟನೆ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ ಪ್ರೊಫೈಲ್ ಫೋಟೋನ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್ಫಾಲೋ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್ಫಾಲೋ ಮಾಡಿದ್ದಾರೆ. ಈ ಮೊದಲು ಅವರು ದರ್ಶನ್ನ ಫಾಲೋ ಮಾಡುತ್ತಿದ್ದರು. ಇನ್ನು, ಇನ್ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ವಿಜಯಲಕ್ಷ್ಮಿ ಮತ್ತು ದರ್ಶನ್ ಚೆನ್ನಾಗಿರಲಿ ಎಂದು ಹಾರೈಸಿಯೇ.. ಕೊಲೆಯಾದ ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲ ಪೋಸ್ಟ್ ಹಾಕಿದ್ದ. ಅಶ್ಲೀಲವಾಗಿ ಪೋಸ್ಟ್ ಮಾಡುವುದು, ಮೆಸೇಜ್ ಹಾಕುವುದು ಅಪರಾಧವೇ ಆದರೂ.. ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು. ಅಲ್ಲದೆ ವಿಜಯಲಕ್ಷ್ಮಿ ಅವರಿಗೆ ಎಲ್ಲ ಮಾಧ್ಯಮಗಳಲ್ಲಿ ಪವಿತ್ರ ಗೌಡ ಅವರನ್ನೂ ದರ್ಶನ್ ಅವರ ಪತ್ನಿ ಎಂದೇ ಸಂಬೋಧಿಸುತ್ತಿರುವುದು ಆಕ್ರೋಶ ತರಿಸಿದೆ.
ವಿಚಿತ್ರವೆಂದರೆ.. ನಟ ದರ್ಶನ್ ಅವರ ಅಭಿಮಾನಿಗಳು ಮಾತ್ರ ಅಣ್ಣಂಗೆ ಜೈ ಜೈ ಅಂತಿದ್ದಾರೆ.



