ಕಣ್ಣುಗಳಲ್ಲಿ ಕೆಂಡ ಕುದಿಯುತ್ತಲೇ ಇರುತ್ತದೆ. ಇವರೇನಾ.. ಬರೀ ಲವ್ ಸ್ಟೋರಿಗಳನ್ನೇ ಮಾಡ್ಕೊಳ್ತಾ ಇದ್ದ ದೊಡ್ಮನೆ ಹುಡ್ಗ ಅಂತಾ ಪ್ರಶ್ನೆ ಮಾಡಿಕೊಳ್ತಾನೆ ಪ್ರೇಕ್ಷಕ. ಮಾತಿಲ್ಲ.. ಕಥೆಯಿಲ್ಲ.. ಬರೀ ಮೌನದಲ್ಲೇ ಕೊಲ್ತಾನೆ. ಅಪರೂಪಕ್ಕೆ ಬರೋ ಡೈಲಾಗುಗಳಲ್ಲೂ ಬೆಂಕಿ.. ಸ್ಕ್ರೀನ್ ತುಂಬಾ ರಕ್ತ.. ಪೆಪೆ. ಚಿತ್ರದುದ್ದಕ್ಕೂ ರಕ್ತ ಚೆಲ್ಲಾಡುತ್ತಲೇ ಇರುತ್ತದೆ.. ರಕ್ತವಷ್ಟೇ ಅಲ್ಲ.. ಕಥೆಯೂ ಅಷ್ಟೆ ಕೊತ ಕೊತ ಕುದಿಯುತ್ತದೆ.
ಪೆಪೆ ಪಾತ್ರಕ್ಕೆ ವಿನಯ್ ರಾಜ್ ಕುಮಾರ್ ಹೊಂದಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ರಕ್ತ ಹರಿಸುವವರ ನಡುವೆಯೇ ಬೆಳೆದ ಪೆಪೆ ಮಹಾಮೌನಿ. ಇಂಥದ್ದೊಂದು ಪಾತ್ರವನ್ನು ವಿನಯ್ ಕೂಡ ಪ್ರದೀಪ್ ಅಲಿಯಾಸ್ ಪೆಪೆ ಪಾತ್ರವನ್ನು ಅಷ್ಟೇ ಸಲೀಸಾಗಿ ನಿಭಾಯಿಸಿದ್ದಾರೆ. ನಾಯಕಿ ಸಿಂಧು ಪಾತ್ರದಲ್ಲಿ ಕಾಜಲ್ ಕುಂದರ್ ನಟನೆ ಇಷ್ಟವಾಗುತ್ತದೆ. ಚಿತ್ರದಲ್ಲಿರೋದು ಜಾತಿ ಮತ್ತು ವರ್ಗ ಸಂಘರ್ಷ ಇರುವ ಕಥೆ. ತಲೆ ತಲೆಮಾರುಗಳ ತನಕ ಸಾಗಿ ಬಂದ ದ್ವೇಷದ ಕಥೆ. ಪ್ರೇಕ್ಷಕರ ಎದುರು ಪ್ರಸ್ತುತ ಪಡಿಸುವಾಗ ಫ್ಲ್ಯಾಶ್ ಬ್ಯಾಕ್ ತಂತ್ರದ ಮೊರೆ ಹೋಗಲಾಗಿದೆ. ಎಲ್ಲವನ್ನೂ ಒಮ್ಮೆಲೇ ಬಿಟ್ಟುಕೊಡದೇ ಹಂತ ಹಂತವಾಗಿ ಸಸ್ಪೆನ್ಸ್ ರಿವೀಲ್ ಮಾಡುವ ತಂತ್ರವನ್ನು ನಿರ್ದೇಶಕರು ಪ್ರಯೋಗಿಸಿದ್ದಾರೆ. ಒಟ್ಟಾರೆಯಾಗಿ ನೋಡುವಾಗ ಈ ಸಿನಿಮಾ ಬೇರೆಯದೇ ಫೀಲ್ ನೀಡುತ್ತದೆ.
ಪೆಪೆ ಚಿತ್ರದ ಕಥೆ ಏನು..?
ಮಲಬಾರಿ ಮತ್ತು ರಾಯಪ್ಪ ಕುಟುಂಬಗಳ ಮಧ್ಯೆ ಕಾಲ ಕಾಲದಿಂದಲೂ ನಡೆದುಕೊಂಡು ಬಂದ ದ್ವೇಷದ ಇದೆ. ರಕ್ತಕ್ಕೆ ರಕ್ತ ಎಂಬಂತೆ ಎರಡೂ ಕುಟುಂಬಗಳಲ್ಲೂ ಹೆಣಗಳು ಉರುಳಿವೆ. ರಾಯಪ್ಪನ ಮೊಮ್ಮಗ ಪೆಪೆ (ವಿನಯ್ ರಾಜ್‌ಕುಮಾರ್) ಕೈಗೆ ರಕ್ತ ಮೆತ್ತಿಕೊಳ್ಳಬಾರದು ಎಂಬುದು ಆತನ ತಾಯಿಯ ಸುನೀತಾ (ಅರುಣಾ ಬಾಲರಾಜ್) ಆಸೆ. ಆದರೆ ಆಗುವುದೇ ಬೇರೆ. ಹಾಗಾದ್ರೆ, ನಡೆಯುವುದೇನು? ಅನಾದಿ ಕಾಲದಿಂದಲೂ ನಡೆದುಕೊಂಡ ರಕ್ತಪಾತ, ಹಾಗೇ ಮುಂದುವರಿಯುತ್ತಾ..? ಚಿತ್ರವನ್ನು ವಿವರಿಸಲು ಎರಡು ದೃಶ್ಯಗಳು ಸಾಕು.
ಆ ಎರಡು ದೃಶ್ಯ..
ಅಪ್ಪನನ್ನು ಕೋಣೆಯಲ್ಲಿ ಕೂಡಿ ಹಾಕಿ ಸಾಯಲು ಬಿಟ್ಟು ಕಣ್ಣೀರಿಡುವ ಮಗ.. ಸೊಸೆ.. ಸರಸ್ವತಿಯನ್ನು ಪೂಜೆ ಮಾಡ್ತೀವಿ, ಆದರೆ ಹೆಣ್ಣು ಮಕ್ಕಳನ್ನ ಓದೋಕೆ ಬಿಡಲ್ಲ. ದೇವತೆ ಅಣತಾ ಚಾಮುಂಡಿಗೂ ರಕ್ತ ಕೊಡ್ತೇವೆ.. ಆದರೆ ಅದೇ ಹೆಣ್ಣು ಮಕ್ಕಳ ರಕ್ತ ಕುಡಿತೇವೆ.. ನೀನು, ನಿನ್ನ ಸಂಪ್ರದಾಯ ಸಾಕು.. ಸತ್ತೋಗ್ಬಿಡಪ್ಪ ಎನ್ನುವ ಮಗ.. ಕಣ್ಣೀರು ಹಾಕುತ್ತಲೇ ಅವನು ಆ ಮಾತು ಹೇಳೋದೇಕೆ..?
ಮತ್ತೊಂದು ದೃಶ್ಯದಲ್ಲಿ ಪೆಪೆ ಮೇಲಿನ ಸೇಡಿಗಾಗಿ ಮಗಳನ್ನೇ ರಾಜಕಾರಣಿಯ ಬಳಿಗೆ ಕಳುಹಿಸುವ ಅಪ್ಪ, ಅವಳ ಕಣಕಣದಲ್ಲೂ ಸೇಡು..ಒಬ್ಬರನ್ನೂ ಉಳಿಸಲ್ಲ ಎಂದು ಪ್ರತಿಜ್ಞೆ ಮಾಡುತ್ತಾಳೆ..
ಪೆಪೆ ಮಾತುಗಳಿಗಿಂತ ಮೌನದಲ್ಲೇ ರಕ್ತ ಸುರಿಸುತ್ತಾನೆ. ಕಥೆಯನ್ನು ಹೀಗೆಯೇ ಹೇಳಬೇಕು ಎಂಬ ನಿರ್ದೇಶಕರ ಹಠ, ಕೆಲವು ಕಡೆ ಕೈಕೊಟ್ಟಿದೆ ಎನಿಸುತ್ತದೆಯಾದರೂ.. ಒಂದೊಳ್ಳೆ ಪ್ರಯೋಗ ಎಂಬುದಂತೂ ನಿಜ. ಸಿನಿಮಾ ಕಟ್ಟುವಿಕೆಯ ಪ್ರಯತ್ನದಲ್ಲಿ ಹಲವು ಮಲಯಾಳಂ ಸಿನಿಮಾಗಳ ಛಾಯೆ ಕಾಣಿಸುತ್ತದೆ. ಕಥೆ ಹೇಳುವ ಶೈಲಿ ಮತ್ತು ನಿರೂಪಣಾ ಶೈಲಿ ಕನ್ನಡಕ್ಕೆ ಹೊಸದು.
ಶ್ರೀಲೇಶ್ ಎಸ್ ನಾಯರ್ ಚಿತ್ರದಲ್ಲಿ ಹೇಳಿರುವುದು ಎರಡು ಕುಟುಂಬಗಳ ನಡುವಿನ ಕಥೆಯಾದರೂ.. ಕಥೆಯ ನಡುವೆ ಆಗಾಗ ಜಾತಿ ಸಂಘರ್ಷದ ಎಳೆಯೂ ಬರುತ್ತದೆ. ಚಿತ್ರದುದ್ದಕ್ಕೂ ರಕ್ತ ಹರಿಯುತ್ತಲೇ ಇರುತ್ತದೆ. ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಚಿತ್ರದ ಇನ್ನೊಂದು ಹೈಲೈಟ್. ಛಾಯಾಗ್ರಹಣ ಮತ್ತು ಸಂಕಲನ ಕೂಡ ಪೆಪೆ ಚಿತ್ರವನ್ನು ನೋಡುವಂತೆ ಮಾಡುತ್ತದೆ.
ಚಿತ್ರದಲ್ಲಿ ಮೈನಸ್ ಅಂಶಗಳು ಇಲ್ಲವೇ ಇಲ್ಲ ಎಂದಲ್ಲ. ಸ್ಲೋ ಆಗಿ ಹೇಳಬೇಕು ಎಂದು ಹಠಕ್ಕೆ ಬಿದ್ದ ನಿರ್ದೇಶಕ, ಕಥೆಯನ್ನು ಮುಂದೆ ಹೋಗಲು ಬಿಡುವುದಿಲ್ಲ. ಕೆಲವೊಮ್ಮೆ ನಿರ್ದೇಶಕರ ಈ ತಂತ್ರಗಾರಿಕೆಯೇ ಚಿತ್ರದ ಖಳನಾಯಕ ಆಗುವಂತೆ ಮಾಡುತ್ತದೆ. ಸಿನಿಮಾ ನೋಡುವಾಗ ಕೆಲವೊಮ್ಮೆ ಕಥೆ ನಿಂತಲ್ಲಿಯೇ ನಿಂತು ಆಕಳಿಸುವಂತೆ ಮಾಡುತ್ತದೆ. ಇದೆಲ್ಲದರ ನಡುವೆಯೂ ಇಷ್ಟವಾಗುವುದು ವಿನಯ್ ರಾಜ್ ಕುಮಾರ್.



