ವಿಷ್ಣುವರ್ಧನ್ ಅಭಿಮಾನಿಗಳ ಹೋರಾಟ ಮುಗಿದಿಲ್ಲ. ಅಭಿಮಾನಿಗಳ ಹೃದಯದಲ್ಲಿ ವಿಷ್ಣುವರ್ಧನ್ (Vishnuvardhan) ಇವತ್ತಿಗೂ ಜೀವಂತವಿದ್ದಾರೆ. ಸಾಹಸಸಿಂಹ, ಅಭಿನಯ ಭರ‍್ಗವ ಎಂದೆಲ್ಲ ಕರೆಸಿಕೊಂಡ ವಿಷ್ಣು, ಇವತ್ತಿಗೂ ಅಭಿಮಾನಿಗಳ ಹೃದಯದಲ್ಲಿ ಯಜಮಾನರಾಗಿಯೇ ಮುಂದುವರೆದಿದ್ದಾರೆ. ಅಂತಹ ಅಭಿಮಾನಿಗಳದ್ದು ಒಂದೇ ಹೋರಾಟ. ವಿಷ್ಣುವರ್ಧನ್ ಅವರನ್ನು ಸಂಸ್ಕಾರ ಮಾಡಿದ ಜಾಗವನ್ನು ಪುಣ್ಯಭೂಮಿ ಎಂದು ಗುರುತಿಸಿ, ಶಾಶ್ವತವಾಗಿ ನಿಲ್ಲಿಸಬೇಕು ಎನ್ನುವುದು. ಆದರೆ ಅದು ಈಡೇರುತ್ತಿಲ್ಲ.
ವಿಷ್ಣುವರ್ಧನ್ ಅವರ ಪುಣ್ಯಭೂಮಿ ವಿವಾದ ಇನ್ನೂ ಬಗೆಹರಿದಿಲ್ಲ. ಮೈಸೂರಿನಲ್ಲಿ ಸ್ಮಾರಕವೇನೋ ಆಗಿದೆ, ಆದರೆ ಪುಣ್ಯಭೂಮಿ ವಿವಾದ ಇನ್ನೂ ಹಾಗೆಯೇ ಇದೆ. ವಿಷ್ಣುವರ್ಧನ್ ಅವರನ್ನು ಅಂತ್ಯಕ್ರಿಯೆ ಮಾಡಿದ ಸ್ಥಳ ಅಭಿಮಾನ್ ಸ್ಟುಡಿಯೋ. (Abhimaan studio) ಈಗ ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ‍್ಧರಿಸಿದ ವಿಷ್ಣು ಸೇನಾ (Vishnu sena) ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. (Veeraputra sreenivas)
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಅಲ್ಲಿಂದ ಅದೇ ಪುಣ್ಯಭೂಮಿ ಅಂತ ವಿಷ್ಣುವರ್ಧನ್ ಅಭಿಮಾನಿಗಳು ತೀರ್ಮಾನ ಮಾಡಿಕೊಂಡಿದ್ದಾರೆ. ಹೀಗಾಗಿ ಪುಣ್ಯಭೂಮಿ ಮಾಡಲು ಅಭಿಮಾನ್ ಸ್ಟುಡಿಯೋದಲ್ಲಿ 20 ಗುಂಟೆ ಜಾಗವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಿರಿಯ ನಟ ಬಾಲಕೃಷ್ಣ (Baalakrishna) ಅವರ ಕಲಾಸೇವೆ ಮೆಚ್ಚಿ 20 ಎಕರೆ ಜಮೀನನ್ನು ನೀಡಿತ್ತು. ಅಲ್ಲೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಆಗಿತ್ತು. ಈಗ ಬಾಲಣ್ಣನ ಮಕ್ಕಳು ಹಾಗೂ ಮೊಮ್ಮಕ್ಕಳು 10 ಎಕ್ಕರೆಯನ್ನು ಮಾರಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಈ ಬೆನ್ನಲ್ಲೇ ಉಳಿದ ಜಮೀನು ಅರಣ್ಯ ವ್ಯಾಪ್ತಿಗೆ ಬಂದಿದೆ. ಹೀಗಾಗಿ ಪುಣ್ಯಭೂಮಿ ನಿರ್ಮಾಣಕ್ಕೆ ಎರಡೂ ಕಡೆಯಿಂದಲೂ ಅಡಚಣೆಯಾಗಿದೆ. ಈ ಸಂಬಂಧ ಡಾ.ವಿಷ್ಣು ಸೇನಾ ಸಮಿತಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕಾನೂನು ಹೋರಾಟ (legal fight) ಮಾಡಲು ನಿರ‍್ಧರಿಸಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ ವಿಷ್ಣು ಸೇನಾ ಸಮಿತಿಗೆ ನ್ಯಾಯಾಲಯ (court) ಈ ಬಗ್ಗೆ ಹೋರಾಟ ನಡೆಸುವುದಕ್ಕೆ ಅಭಿಮಾನಿ ಸಂಘಗಳಿಗೆ ಯಾವುದೇ ಹಕ್ಕಿಲ್ಲ. ಇದನ್ನು ಸರ್ಕಾರದ ಮೂಲಕ ಅಥವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ವಿಷಯ ಇತ್ಯರ್ಥಪಡಿಸಿಕೊಳ್ಳಿ ಎಂದು ಹೇಳಿತ್ತು. ಅದರಂತೆಯೇ ಈಗ ವಿಷ್ಣುಸೇನಾ ಸಮಿತಿ ಸರ್ಕಾರರಕ್ಕೆ ಆಗ್ರಹ ಮಾಡಿದೆ. ಅಷ್ಟೇ ಅಲ್ಲದೆ ಈ ಕುರಿತ ಕಾನೂನು ಹೋರಾಟಕ್ಕೂ ಮುಂದಾಗಿದೆ.
ಒಂದು ಕಡೆ ಸರ್ಕಾರವನ್ನು ಆಗ್ರಹಿಸುತ್ತಲೇ ಮತ್ತೊಂದು ಕಡೆ ಸಾರ‍್ವಜನಿಕ ಹಿತಾಸಕ್ತಿಗೆ ಅರ್ಜಿ ಸಲ್ಲಿಸಿ ಹೋರಾಟ ನಡೆಸುವುದು ವಿಷ್ಣು ಸೇನಾ ಸಮಿತಿ ನಿರ್ಧರಿಸಿದ್ದಾರೆ. ಕಾನೂನಾತ್ಮಕವಾಗಿ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಯಾವುದೇ ಹಕ್ಕಿಲ್ಲ. ಆದರೆ ಅಭಿಮಾನ ಕಾನೂನು ಮೀರಿದ್ದು. ಹೀಗಾಗಿ ಪಿಐಎಲ್ (ಸಾರ‍್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿ ಹೋರಾಟ ಮಾಡಲು ಮುಂದಾಗಿದ್ದಾರೆ.



