ಸಿ.ವಿ.ಶಿವಶಂಕರ್ ಅವರ ಅಮರ ಕನ್ನಡ ಗೀತೆಗಳು
ಕನ್ನಡದ ರವಿ ಮೂಡಿಬಂದಾ, ಮುನ್ನಡೆಯ ಬೆಳಕನ್ನು ತಂದಾ.. ರಾಜ್ಯೋತ್ಸವ.. ನಮ್ಮ ರಾಜೋತ್ಸವ..
ನಾ ನೋಡಿ ನಲಿಯುವ ಕಾರವಾರ.. ಈ ಕಾರವರ ಕಡಲಿನ ತೀರ..
ನಾಡಚರಿತೆ ನೆನಪಿಸುವ ವೀರ ಗೀತೆಯಾ, ಹಾಡು ನೀನು ಕನ್ನಡಿಗಾ ದೇಶಗೀತೆಯ..
ಹೋಗದಿರಿ ಸೋದರರೇ.. ಹೋಗದಿರಿ ಬಂಧುಗಳೇ.. ನಮ್ಮ ಊರನು ಬಿಟ್ಟು ಹೋಗುವಿರಾ..
ಬೆಳೆದಿದೆ ನೋಡಾ ಬೆಂಗಳೂರು ನಗರಾ..
ಒಂದೊಂದು ಹಾಡು ಮುತ್ತು. ಕನ್ನಡಿಗರಿಗೆ ಮುತ್ತಿನಂತ ಹಾಡುಗಳನ್ನು ಕೊಟ್ಟ ಸಿವಿ ಶಿವಶಂಕರ್ ಇನ್ನಿಲ್ಲ. ಬಿಡುಗಡೆಯೇ ಆಗದ ಚಿತ್ರ ಹೋಗದಿರಿ ಸೋದರರೇ.. ಹೋಗದಿರಿ ಬಂಧುಗಳೇ ಹಾಡು ಎಷ್ಟು ಖ್ಯಾತಿ ಪಡೆದುಕೊಂಡಿತ್ತೆಂದರೆ, ಯಾವ ಚಿತ್ರ ಎಂದೂ ಕನ್ನಡಿಗರು ಕೇಳಲಿಲ್ಲ. ಹೃದಯದಲ್ಲಿ ಆ ಹಾಡಿಗೊಂದು ಶಾಶ್ವತ ಸ್ಥಾನ ಕೊಟ್ಟುಬಿಟ್ಟ.
ತೀರಾ ಮೊನ್ನೆ ಮೊನ್ನೆ ಅವರದ್ದೊಂದು ವಿಡಿಯೋ ವೈರಲ್ ಆಗಿತ್ತು. ಮೊಬೈಲ್`ನಲ್ಲಿ ಐಟಂ ಸಾಂಗ್ ಹುಡುಕುವ ತುಂಟ ಅಜ್ಜನ ವಿಡಿಯೋ. ಆ ವಿಡಿಯೋ ನೋಡಿದವರಿಗೆ ಇವರೇ ಕನ್ನಡಿಗರ ಹೆಮ್ಮೆಯ ಶಿವಶಂಕರ್ ಎಂಬುದು ಗೊತ್ತಿರಲಿಲ್ಲ.
ಶಿವಶಂಕರ್ ಕೇವಲ ನಟರಲ್ಲ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ಚಿತ್ರಕಥಾ ಬರಹರಾರ, ಗೀತಸಾಹಿತಿ. ರತ್ನಮಂಜರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಶಿವಶಂಕರ್, ಪದವೀಧರ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಕನ್ನಡ ಪ್ರೇಮದ ಹಾಡುಗಳನ್ನೇ ಬರೆದು ಖ್ಯಾತರಾದವರು.
ಕನ್ನಡದಲ್ಲಿ ಸಿ.ವಿ.ಶಿವಶಂಕರ್ ಪರಿಚಯಿಸಿದ ಪ್ರತಿಭೆಗಳು ಆನೇಕ. ರಾಜೇಶ್, ಮಂಜುಳ, ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ಕಲ್ಪನಾ, ಧಿರೇಂದ್ರ ಗೋಪಾಲ್ ಮೊದಲಾದ ನಟರು, ರತ್ನಂರಂತಹ ಸಂಗೀತ ದಿಗ್ಗಜರನ್ನು ಪರಿಚಯಿಸಿದ ಖ್ಯಾತಿಯೂ ಇವರದ್ದು. ಹುಣಸೂರು ಕೃಷ್ಣಮೂರ್ತಿಯವರ ಶಿಷ್ಯರಾಗಿದ್ದ ಸಿವಿ ಶಿವಶಂಕರ್, ಮದ್ರಾಸಿನಲ್ಲಿದ್ದಾಗ ಅಲ್ಲಿದ್ದ ತಮಿಳು ನಟ-ನಟಿಯರಿಗೆ ಕನ್ನಡ ಮೇಷ್ಟರಾಗಿದ್ದರು.
ನಮ್ಮ ಊರು, ಮನೆ ಕಟ್ಟಿ ನೋಡು, ಪದವೀಧರ, ಮಹಡಿ ಮನೆ, ಮಹಾತಪಸ್ವಿ, ನಮ್ಮ ಊರಿನ ರಸಿಕರು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಶ್ರೀಕೃಷ್ಣ ಗಾರುಡಿ, ಭಕ್ತಕನಕದಾಸ, ಆಶಾಸುಂದರಿ, ಸ್ಕೂಲ್ ಮಾಸ್ಟರ್, ಸಂತ ತುಕಾರಾಂ.. ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.
ನಾಟಕಕಾರರಾಗಿ ರಾಣಿರಾಜು ಬಿಎ, ಆರೋಗ್ಯ ಪಿಶಾಚಿ, ನಿತ್ರಾಣ ಸುಂದರಿ, ಮಾಧೂ ಮಗಳು ನಾಟಕಗಳನ್ನು ರಚಿಸಿದ್ದರು. ರೇಡಿಯೋದಲ್ಲಿ ಕಂಪೆನಿಯ ಪೆಂಪು-ಇಂಪು ಸರಣಿ ನಡೆಸಿಕೊಟ್ಟಿದ್ದರು. ಶಿವಶಂಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಡಾ.ರಾಜ್ ಕುಮಾರ್ ಪ್ರಶಸ್ತಿ ಲಭಿಸಿದ್ದವು.
ಚಿ.ಉದಯಶಂಕರ್ ಅವರ ಚಂದ್ರಶೇಖರಪುರ/ಚಿಟ್ಟನಹಳ್ಳಿ ಇವರ ಹುಟ್ಟೂರು. ಆದರೆ ಚಿ.ಉದಯಶಂಕರ್ ಅವರು ಚಿತ್ರರಂಗಕ್ಕೆ ಬರಲು ಸ್ಫೂರ್ತಿಯಾಗಿದ್ದು ಶಿವಶಂಕರ್.



