ನಟ ದರ್ಶನ್ ಅವರ ಬಗ್ಗೆ ಇರುವ ಅಥವಾ ಇದ್ದಂತಹ ಅತಿ ದೊಡ್ಡ ದೂರು ಎಂದರೆ, ದರ್ಶನ್ ಅವರು ಫ್ಯಾಮಿಲಿ ಮ್ಯಾನ್ ಅಲ್ಲ ಅನ್ನೋದು. ಬಹುಶಃ ರೇಣುಕಾಸ್ವಾಮಿ ಕೊಲೆ ಪ್ರಕರಣ, ಜೈಲು, ಹತ್ತಿರದವರೆಲ್ಲ ದೂರ ನಿಂತಾಗಲೂ ಜೊತೆಗಿದ್ದದ್ದು ಕುಟುಂಬ ಮಾತ್ರ. ಆ ಘಟನೆಗೂ ಮೊದಲು ದರ್ಶನ್ ಎಲ್ಲಿ ಎಂದರೆ.. ಅವರ ಹತ್ತಿರದವರಿಗೂ ಸಿಗುತ್ತಿರಲಿಲ್ಲ. ಅವರಿಗೂ ಗೊತ್ತಿರುತ್ತಿರಲಿಲ್ಲ.
ಫ್ರೆಂಡ್ಸ್ ಜೊತೆ ಪಾರ್ಟಿ, ಮಿಡ್ ನೈಟ್ ಪಾರ್ಟಿ, ಗುಂಡು ಪಾರ್ಟಿ, ತುಂಡು ಪಾರ್ಟಿ, ಅವರ ಆ ಮನೆ.. ಮೈಸೂರಿನ ತೋಟದ ಮನೆ, ಆ ಹೋಟೆಲ್ಲು.. ಈ ಹೋಟೆಲ್ಲು.. ಇಂತಹವುಗಳೇ ಇರುತ್ತಿದ್ದವು. ಧರ್ಮಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್ ಕಾಣಿಸಿಕೊಂಡಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಬೇರೆಲ್ಲ ನಟರು ತಮ್ಮ ತಮ್ಮ ಚಿತ್ರಗಳ ಯಶಸ್ಸಿನ ಕಾರ್ಯಕ್ರಮ ನಡೆದಾಗ ವೇದಿಕೆಯಲ್ಲಿ ಪತ್ನಿ, ಮಕ್ಕಳ ಜೊತೆ ಬಂದರೆ.. ದರ್ಶನ್ ಅಲ್ಲೂ ಏಕಾಂಗಿ. ಕಾಟೇರದಂತಹ ಬ್ಲಾಕ್ ಬಸ್ಟರ್ ಕೊಟ್ಟು, ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಕಾರ್ಯಕ್ರಮದಲ್ಲೂ ದರ್ಶನ್ ಅವರ ಪತ್ನಿ, ತಾಯಿ, ತಮ್ಮ ಯಾರೂ ಇರಲಿಲ್ಲ. ಹೀಗಿದ್ದ ದರ್ಶನ್ ಈಗ ಬದಲಾಗಿದ್ದಾರೆ. ಎಲ್ಲಿಯೇ ಹೋದರೂ.. ವಿಜಯಲಕ್ಷ್ಮಿ ಜೊತೆಯಲ್ಲಿರುತ್ತಾರೆ.
ಈಗ ಅವರು ಪತ್ನಿಯ ಜೊತೆಯೇ ಇರುತ್ತಿದ್ದಾರೆ. ಅವರ ಜೊತೆಯೇ ಸುತ್ತಾಡುತ್ತಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಕೂಡ ಖುಷಿಯಾಗಿದ್ದಾರೆ. ಇತ್ತೀಚೆಗೆ ನಟ, ನಿರ್ಮಾಪಕ ಬಿ. ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ದಂಪತಿ ಚಂದನಾ ಎಸ್. ನಾಗ್ ಏಪ್ರಿಲ್ 20ರಂದು ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದಿದೆ. ಇದಕ್ಕೆ ದರ್ಶನ್ ಅವರು ಪತ್ನಿ ಜೊತೆ ಆಗಮಿಸಿ, ಚಂದನಾಗೆ ಶುಭ ಕೋರಿದ್ದಾರೆ.
ದರ್ಶನ್ ಅವರ ಸಿನಿಮಾ ಕಾರ್ಯಕ್ರಮಗಳಲ್ಲಿ ಬರೋದಿರಲಿ, ಶೂಟಿಂಗ್ ಸ್ಥಳಕ್ಕೂ ಹೋಗದೇ ಇದ್ದ ವಿಜಯಲಕ್ಷ್ಮಿ ದರ್ಶನ್, ಈಗ ಚಿತ್ರೀಕರಣದ ಸ್ಥಳದಲ್ಲೇ ಇದ್ದು ಎಲ್ಲವನ್ನೂ ನೋಡಿಕೊಳ್ತಿದ್ದಾರೆ. ದರ್ಶನ್ ಅವರ ಪರ್ಸನಲ್ ವ್ಯವಹಾರಗಳನ್ನೂ ಅವರೇ ನಿಭಾಯಿಸುತ್ತಿದ್ದಾರೆ. ಇನ್ನು ದೇವಸ್ಥಾನ, ಪೂಜೆಗಳೂ ನಿರಂತರವಾಗಿ ನಡೆಯುತ್ತಿವೆ.
ಒಟ್ಟಿನಲ್ಲಿ ಮದುವೆಯಾಗಿ, ಮಕ್ಕಳಿದ್ದರೂ.. ಅಲ್ಲಿ ಇಲ್ಲಿ ಓಡಾಡುತ್ತಿದ್ದ ದರ್ಶನ್, ಈಗ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಪತ್ನಿಯನ್ನು ಕಾರ್ಯಕ್ರಮಗಳಲ್ಲಿ ಸಮೀಪ ಬರುವುದಕ್ಕೂ ಬಿಡದೇ ಇದ್ದ ದರ್ಶನ್, ಪ್ರತಿ ಕಾರ್ಯಕ್ರಮಗಳಲ್ಲಿಯೂ ಹೆಂಡತಿ ಜೊತೆ ಇರುತ್ತಾರೆ. ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ದರ್ಶನ್ ಒಂಟಿಯಾಗಿ ಬರುತ್ತಾರೆ ಅಥವಾ ಗೆಳೆಯರ ಗ್ಯಾಂಗ್ ಜೊತೆ ಬರುತ್ತಿದ್ದ ದೃಶ್ಯಗಳು ಈಗ ಕಾಣುತ್ತಿಲ್ಲ. ಎಲ್ಲಿಯೇ ಹೋಗಲಿ.. ಏನೇ ಮಾಡಲಿ.. ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಇರುತ್ತಾರೆ. ವಿಜಯಲಕ್ಷ್ಮಿ ಮುಖದಲ್ಲಿ ಈಗ ನಗು ಮೂಡಿದೆ. ಒಂದಾನೊಂದು ಕಾಲದ ದರ್ಶನ್ ಬೇರೆ.. ಸ್ಟಾರ್ ಆದ ಮೇಲಿನ ದರ್ಶನ್ ಬೇರೆ.. ರೇಣುಕಾಸ್ವಾಮಿ ಕೊಲೆ ನಂತರದ ದರ್ಶನ್ ಬೇರೆ..