ಯಾರದ್ದೋ ಸೃಷ್ಟಿಗೆ ಇನ್ಯಾರದ್ದೋ ಹೆಸರು ಹಾಕಿಕೊಳ್ಳೋ ಖದೀಮರು ಎಐ ಜಗತ್ತಿನಲ್ಲೂ ಇದ್ದಾರೆ. ಇದು ಸಿನಿಮಾ ಕಥೆ, ಸಂಗೀತದ ವಿಷಯ ಅಲ್ಲ. ಚೀನಾದ ವಿಜ್ಞಾನಿ/ಕಂಪೆನಿಯೊಂದು ನಾಯಿ ರೋಬೋಟ್ ಸೃಷ್ಟಿಸಿ ಮಾರಾಟ ಮಾಡಿತ್ತು. ಹಾಗೆ ಮಾರಾಟವಾಗಿದ್ದ ರೋಬೋಟ್‌ನ್ನು ಖರೀದಿಸಿ ತಂದು, ಇದು ನಮ್ಮದೇ ಸೃಷ್ಟಿ, ನಮ್ಮದೇ ಕಲ್ಪನೆ, ನಮ್ಮದೇ ಸಾಧನೆ ಎಂದು ಹೇಳಿಕೊಂಡು ಯುನಿವರ್ಸಿಟಿಯೊಂದು ಸಿಕ್ಕಿ ಬಿದ್ದಿದೆ. ಆರಂಭದಲ್ಲಿ ʻಗ್ಯಾಲ್ಗೊಟಿಯಾಸ್ ವಿವಿʼ ಗುಜರಾತಿನದ್ದೆಂದು ತಿಳಿದು ʻಮೋದಿ ರಾಜ್ಯʼ ಎಂಬ ಕಾರಣಕ್ಕೆ ಟೀಕಿಸಲು ಮುಗಿಬಿದ್ದರು. ನಂತರ ಸ್ಪಷ್ಟನೆ ಬಂತು. ಆದರೆ.. ಇದೆಲ್ಲದರ ಮಧ್ಯೆ ವಿಪ್ರೋದವರೂ ಕೂಡಾ ಇದೇ ರೋಬೋಟ್‌ನ್ನು ಎಐ ಸಮ್ಮಿಟ್‌ನಲ್ಲಿ ತೋರಿಸಿದ್ದರು ಎನ್ನುವುದನ್ನು ಮರೆತಿದ್ದು ಯಾಕೆ ಎನ್ನುವುದೇ ನಿಗೂಢ.
ಆಗಿದ್ದು ಏನೆಂದರೆ..
ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Summit) ಚೀನಾದ ಬ್ರಾಂಡ್ ರೋಬೋಡಾಗ್ (Robodog) ಅನ್ನು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಪ್ರದರ್ಶಿಸಿತ್ತು. ವಿಶೇಷವಾಗಿ ನೇಹಾ ಸಿಂಗ್ ಎಂಬ ಪ್ರಾಧ್ಯಾಪಕಿ D ನ್ಯೂಸ್‌ಗೆ ನೀಡಿದ ಇಂಟರ್ವ್ಯೂದಲ್ಲಿ ರೋಬೋಟ್ ಅನ್ನು “Orion” ಎಂದು ಕರೆದು, ಯೂನಿವರ್ಸಿಟಿಯ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಅಭಿವೃದ್ಧಿಪಡಿಸಿದ್ದಾಗಿ ಹೇಳಿದ್ದರು. ಆದರೆ ಇದು ಚೀನಾದ Unitree Robotics ಕಂಪನಿಯ Unitree Go2 ಮಾದರಿಯ ರೋಬೋಡಾಗ್ ಆಗಿತ್ತು. ಸುಮಾರು $1,600-$2,800 ಬೆಲೆಯಲ್ಲಿ ಮಾರಾಟವಾಗುವ ಕಮರ್ಷಿಯಲ್ ರೋಬೋಟ್ ಡಾಗ್ ಆಗಿತ್ತು. ಇದನ್ನು ಗುರುತಿಸಿದವರು ಸೋಷಿಯಲ್ ಮೀಡಿಯಾ ತಜ್ಞರು. ಇದನ್ನು ಪ್ರಪಂಚದಾದ್ಯಂತ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.
ಯಾವಾಗ ಇದು ಹೊರಬಂತೋ.. ತಕ್ಷಣ ಯುನಿವರ್ಸಿಟಿಯನ್ನು ಜಾಗ ಖಾಲಿ ಮಾಡುವಂತೆ ಸೂಚಿಸಲಾಯ್ತು. AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿನ ತನ್ನ ಸ್ಟಾಲ್ ಅನ್ನು ಖಾಲಿ ಮಾಡಲು ಗಾಲ್ಗೋಟಿಯಾಸ್‌ಗೆ ಸೂಚಿಸಲಾಯಿತು. ಸಮಸ್ಯೆ ಎಂದರೆ ವಿವಿಯ ಪ್ರಿನ್ಸಿಪಾಲ್ ಅವರಿಗೂ ಇದರ ಬಗ್ಗೆ ಸಿಬ್ಬಂದಿ ತಪ್ಪು ಮಾಹಿತಿ ನೀಡಿದ್ದರಂತೆ.
ಅಂದಹಾಗೆ ಈ ಗ್ಯಾಲ್ಗೋಟಿಯಾಸ್ ಯೂನಿವರ್ಸಿಟಿ (Galgotias University) ಗುಜರಾತಿನದ್ದು ಎಂದು ಮೊದಲು ಸುದ್ದಿಯಾಯ್ತು. ಮೊದಲೇ ಪ್ರಧಾನಿ ಮೋದಿ ಗುಜರಾತಿನವರು. ಸಡನ್ ಆಗಿ ಮೋದಿ ವಿರೋಧಿಗಳು ಆಕ್ಟಿವ್ ಆದರು. ಟೀಕೆಗಳ ಸುರಿಮಳೆಯನ್ನೇ ಸುರಿಸಿದರು. ಆದರೆ.. ಅಂತಿಮವಾಗಿ ಗ್ಯಾಲ್ಗೋಟಿಯಾಸ್ ಎಂಬ ಯೂನಿವರ್ಸಿಟಿ ಗುಜರಾತಿನಲ್ಲೂ ಇದೆ. ಆದರೆ.. ಇಲ್ಲಿ ವಿವಾದಕ್ಕೀಡಾಗಿರುವುದು ದೆಹಲಿಯಲ್ಲಿರುವ ಖಾಸಗಿ ಯುನಿವರ್ಸಿಟಿ ಎಂಬ ವಿಷಯ ಗೊತ್ತಾಯ್ತು.
ದೆಹಲಿಯಲ್ಲಿರುವ ಈ ಗ್ಯಾಲ್ಗೋಟಿಯಾಸ್ ಯೂನಿವರ್ಸಿಟಿ 2011ರಲ್ಲಿ ಸ್ಥಾಪನೆಯಾಯಿತು. ಸುನಿಲ್ ಗಲ್ಗೋಟಿಯಾ ಎಂಬುವರು ಆರಂಭಿಸಿರುವ ಈ ಯುನಿರ್ವಸಿಟಿ, ಗ್ರೇಟರ್ ನೋಯ್ಡಾದಲ್ಲಿದೆ. ಯಮುನಾ ಎಕ್ಸ್‌ಪ್ರೆಸ್‌ವೇಯ ಮೇಲೆ ಇದ್ದು, ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ಗೆ ಎದುರಾಗಿ ಇದೆ. ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 60-90 ಕಿ.ಮೀ. ದೂರದಲ್ಲಿದೆ.
ಆದರೆ ಇದೆಲ್ಲದರ ಮಧ್ಯೆ ಎಲ್ಲರೂ ಮರೆತ ಒಂದು ವಿಷಯ ಎಂದರೆ.. ಇದೇ ರೋಬೋಟ್ ಡಾಗ್‌ನ್ನು ವಿಪ್ರೋದವರು ಕೂಡಾ ಪ್ರದರ್ಶನ ಮಾಡಿದ್ದರು. ವಿಪ್ರೋದವರು ಪ್ರದರ್ಶನ ಮಾಡಿದ ಕ್ವಾಡ್ರುಪೆಡ್ ರೋಬೋಡಾಗ್ (ನಾಯಿ ರೀತಿಯ ರೋಬೋಟ್) ಕೂಡಾ ಚೀನಾದ Unitree Robotics ಕಂಪನಿಯ Unitree Go2 ಮಾದರಿಯ ರೋಬೋಟ್. ಆದರೆ ವಿಪ್ರೋದವರ ಬಗ್ಗೆ ಟೀಕೆ ಬರಲಿಲ್ಲ. ಬಹುಶಃ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರ ಮೇಲಿನ ವಿಶ್ವಾಸವೂ ಕಾರಣ ಎನ್ನಬಹುದು.
ವಿಪ್ರೋದ ಪ್ರತಿನಿಧಿ ವರುಣ್ ದುಬೆ ಎಂಬುವವರು ಇದನ್ನು AI-ಪವರ್ಡ್ ರೋಬೋಟ್ ಎಂದು ತೋರಿಸಿ, ಇನ್‌ಸ್ಪೆಕ್ಷನ್, ಡಿಸಾಸ್ಟರ್ ಸೈಟ್‌ಗಳು, ಹೈ-ರಿಸ್ಕ್ ಸನ್ನಿವೇಶಗಳಲ್ಲಿ ಮಾನವರ ಬದಲಿಗೆ ಬಳಸಬಹುದು ಎಂದು ಹೇಳಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲೇ ಸಮರ್ಥನೆಗೆ ಬಂದ ಹಲವರು ವಿಪ್ರೋದವರು ಇದನ್ನು ಸ್ವಂತ ಆವಿಷ್ಕಾರ ಎಂದು ನೇರವಾಗಿ ಕ್ಲೈಮ್ ಮಾಡಿಲ್ಲ (ಗ್ಯಾಲ್ಗೋಟಿಯಾಸ್ ರೀತಿ), ಬದಲಿಗೆ AI ಇಂಟಿಗ್ರೇಶನ್ ಮತ್ತು ಅಪ್ಲಿಕೇಶನ್‌ಗಳನ್ನು ಹೈಲೈಟ್ ಮಾಡಿದ್ದರು.. ಅಷ್ಟೇ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಪ್ರೋದವರು ಸಮ್ಮಿಟ್‌ನಲ್ಲಿ AI-ಪವರ್ಡ್ ರೋಬೋಟಿಕ್ ಆರ್ಮ್ (ಹೆಲ್ತ್‌ಕೇರ್‌ಗಾಗಿ, ಅಬ್ಡಾಮಿನಲ್ ಸ್ಕ್ಯಾನ್ ಮಾಡುವುದು ಮುಂತಾದ್ದು) ಸಹ ತೋರಿಸಿದ್ದರು.ವಿಪ್ರೋದವರು ಇದನ್ನು ಸ್ವಂತ ಆವಿಷ್ಕಾರ ಎಂದು ನೇರವಾಗಿ ಕ್ಲೈಮ್ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.



