ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಲವು ನಾಯಕರು ಓಪನ್ ಚಾಲೆಂಜ್ ಹಾಕುತ್ತಿದ್ದಾರೆ. ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಅವರು ಚಾಲೆಂಜ್ ಹಾಕುವುದು ಬೇರೆ. ಡಿಕೆ ಸುರೇಶ್, ಚೆಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಶಿವಲಿಂಗೇ ಗೌಡ, ಗುಬ್ಬಿ ವಾಸು.. ಹೀಗೆ ಚಾಲೆಂಜ್ ಹಾಕುವವರಿಗೆ ಕಡಿಮೆಯೇನಿಲ್ಲ. ಈ ನಡುವೆ ಸಚಿವ ಜಮೀರ್ ಅಹ್ಮದ್ ಹಾಕಿರುವ ಚಾಲೆಂಜ್ ಅಷ್ಟೇ ಇಂಟ್ರೆಸ್ಟಿಂಗ್. ಥೇಟು ಡಿಕೆ ಶಿವಕುಮಾರ್ ಶೈಲಿಯಲ್ಲೇ ಓಪನ್ ಸವಾಲ್ ಹಾಕಿದ್ದಾರೆ. ಈ ನಡುವೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ಧರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.
‘ಕುಮಾರಸ್ವಾಮಿ ಅವರೇ ನೀವು ಒಂದು ಮನೆ ಇಟ್ಟುಕೊಂಡು ಹೊರಗೆ ಏನೇನ್ ಮಾಡಿದ್ದೀರಾ ಅಂತ ಬಾಯಿ ಬಿಡಲಾ?, ನಾನು ನಿಮ್ಮ ರೀತಿ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ. ನೀವು ಸಿದ್ದರಾಮಯ್ಯ ಅವರಿಗಿಂತ ಮೊದಲು ನನ್ನನ್ನು ಎದುರಿಸಿ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
‘ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಯ ಜನರಿಗೆ ಎಷ್ಟು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ನಾನು ಕೇಳಿದ್ದಕ್ಕೆ ನನ್ನ ಕೇಳೋದಕ್ಕೆ ಅವನು ಯಾರು, ಒಂದು ನಂಬರ್‌ನಲ್ಲಿ ಎರಡು ಬಸ್ ಓಡಿಸುತ್ತಿದ್ದವನು ಎಂದು ಟೀಕಿಸಿದ್ದೀರಿ. ನಾನು ಅಂತಹವನಾಗಿದ್ದರೆ 2017ರ ವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡಿದ್ದಿರಿ. ಅಂತಹ ಆರೋಪವಿದ್ದ ಪ್ರಕರಣ ನನ್ನದಲ್ಲ, ನನ್ನ ಚಿಕ್ಕಪ್ಪನದ್ದು. ಈಗಾಗಲೇ ಕೋರ್ಟ್‌ನಲ್ಲಿ ಕ್ಲೀನ್ ಚೀಟ್ ಪಡೆದುಕೊಂಡಿದ್ದೀನಿ’ ‘ಬಾಯಿ ಬಿಟ್ಟರೆ ಧಮ್ಕಿ ಹಾಕುವುದು, ಬ್ಲಾಕ್ ಮೇಲ್ ಮಾಡೋದು. ಇದು ಎಷ್ಟು ದಿನ ನಡೆಯುತ್ತೆ ಕುಮಾರಸ್ವಾಮಿ ಅವರೇ?’ ನೀವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೊದಲು ನನ್ನನ್ನು ಎದುರಿಸಿ ಎನ್ನುವುದು ಜಮೀರ್ ಅಹ್ಮದ್ ಅವರ ಓಪನ್ ಚಾಲೆಂಜ್.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ.. ರಾಜ್ಯ ಸರ್ಕಾರವನ್ನು 6 ತಿಂಗಳೊಳಗೆ ಅಸ್ಥಿರಗೊಳಿಸಿ ಬೀಳಿಸುತ್ತೇನೆ ಎಂದು ಕುಮಾರಸ್ವಾಮಿ ಅಮಿತ್ ಶಾ ಅವರಿಗೆ ಮಾತು ಕೊಟ್ಟಿದ್ದಾರೆ. ದೇವೇಗೌಡರ ಸಮ್ಮುಖದಲ್ಲಿಯೇ ಇದು ನಡೆದಿದೆ. ಹೀಗಾಗಿಯೇ ಇಷ್ಟೆಲ್ಲ ಗದ್ದಲ ನಡೆಯುತ್ತಿವೆ ಎನ್ನುವುದು ಶಾಸಕರ ಗಂಭೀರ ಆರೋಪ. ಶಾ ಅವರಿಗೆ ನೀಡಿರುವ ಭರವಸೆ ಈಡೇರಿಸಲು ಕುಮಾರಸ್ವಾಮಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುಡಾ ಹಗರಣದಲ್ಲಿ ತನ್ನ ಪಾತ್ರವಾಗಲಿ, ತನ್ನ ಬಾಮೈದುನನ ಪಾತ್ರವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ ಸಿದ್ಧರಾಮಯ್ಯ ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಕುಮಾರಸ್ವಾಮಿ ಅವರ ಮೇಲಿರುವ ಅಕ್ರಮ ಹಾಗೂ ಹಗರಣಗಳ ಪ್ರಾಸಿಕ್ಯೂಷನ್ ಚುರುಕು ಮಾಡಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ನಡುವೆ ಕುಮಾರಸ್ವಾಮಿ ಅವರ ಪ್ರಾಸಿಕ್ಯೂಷನ್ʻಗೆ ಎಸ್‌ಐಟಿಯವರು ಕಳೆದ ನವೆಂಬರ್‌ನಲ್ಲೇ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ದೂರು ಆಧರಿಸಿ ತರಾತುರಿಯಲ್ಲಿ ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಎಸ್‌ಐಟಿಯವರು ತನಿಖಾ ವರದಿ ಆಧರಿಸಿ ಕೇಳಿದರೂ ಯಾಕೆ ಅನುಮತಿ ಕೊಟ್ಟಿಲ್ಲ. ರಾಜೀನಾಮೆ ಕೊಡಬೇಕಾದವರು ಸಿದ್ದರಾಮಯ್ಯ ಅವರಲ್ಲ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗನ್ನು ರಾಜ್ಯಾದ್ಯಂತ ಮೊಳಗಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.



