ಅಕ್ಕಿ ಬೆಲೆ ಏರಿದೆ. ಬೇಳೆ ಬೆಲೆ ಏರಿದೆ. ತರಕಾರಿ ಬೆಲೆ ಏರಿದೆ. ಕಾಫಿ/ಟೀ/ಹೋಟೆಲ್ ತಿಂಡಿಗಳ ಬೆಲೆ ಏರಿದೆ. ವಿದ್ಯುತ್ ದರ ಏರಿದೆ. ಒಂದೊಂದು ಬೆಲೆಗೂ ಒಂದೊಂದು ಕಾರಣ ಇದೆ. ಎಲ್ಲದಕ್ಕೂ ಶನೀಶ್ವರನೇ ಕಾರಣ ಎಂದು ಗ್ಯಾರಂಟಿ ಭಾಗ್ಯಗಳನ್ನೇ ದೂರಬೇಕಿಲ್ಲ. ಆದರೆ ಬೆಲೆ ಏರಿಕೆ ಎನ್ನುವುದು ಒಂದು ಚೈನ್ ಇದ್ದ ಹಾಗೆ. ಗ್ಯಾರಂಟಿಯೂ ಒಂದು ಕಾರಣ ಎನ್ನಬಹುದಷ್ಟೇ.
ಅಕ್ಕಿ ಬೆಲೆ ದುಬಾರಿ : ಗ್ಯಾರಂಟಿ, ವಿದ್ಯುತ್ ದರ ಏರಿಕೆ ಮತ್ತು ಬರಗಾಲ ಕಾರಣ
ಅಕ್ಕಿ ಬೆಲೆ ದುಬಾರಿಯಾಗುತ್ತಿರುವುದಕ್ಕೆ ಸದ್ಯಕ್ಕೆ ಕಾರಣ ಗ್ಯಾರಂಟಿಯೇ. 10 ಕೆಜಿ ಅಕ್ಕ ಫ್ರೀ ಎಂದು ಘೋಷಿಸಿದ್ದ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುತ್ತಿಲ್ಲ. ಇದು ಗೊತ್ತಾಗಿದ್ದೇ ತಡ, ರಾಜ್ಯಕ್ಕೆ ಅಕ್ಕಿ ಪೂರೈಸುವ ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶಗಳು ಸದ್ಯಕ್ಕೆ ನೀಡಲು ಹಿಂದೇಟು ಹಾಕುತ್ತಿವೆ. ಕರ್ನಾಟಕದಲ್ಲಿ ಅಕ್ಕಿ ಅಭಾವ ಇದೆ ಎಂದು ತಿಳಿದಾಕ್ಷಣ ಅವು ಅಕ್ಕಿ ಪೂರೈಕೆ ಮಾಡಲು ಹಿಂದೇಟು ಹಾಕುತ್ತಿವೆ. ಆಂಧ್ರದಲ್ಲಿಯೂ ಅಕ್ಕಿ ಕೊರತೆ ಇದೆ. ಆದರೆ ಅಲ್ಲಿ ನಮಗಿಂತ ಒಂದು ತಿಂಗಳು ಮೊದಲು ಮೊದಲ ಬೆಳೆ ಬರುತ್ತದೆ. ರಾಜ್ಯದಲ್ಲಿ ನವೆಂಬರ್ನಲ್ಲಿ ಮೊದಲ ಬೆಳೆ ನಿರೀಕ್ಷಿಸಬಹುದು. ಅಲ್ಲಿವೆರೆಗೆ ದರ ಏರಿಕೆ ಹೆಚ್ಚಬಹುದು ಎನ್ನುವುದು ಎಪಿಎಂಸಿ ವರ್ತಕರ ನಿರೀಕ್ಷೆ. ಅಂದರೆ ಮತ್ತೊಂದು ಬರಗಾಲದ ಸೂಚನೆಯೂ ಕಾರಣ. ಹೀಗಾಗಿ ಸ್ಟಾಕ್ ಕಡಿಮೆ ಮಾಡಿಕೊಳ್ಳಲು ಅಲ್ಲಿನ ರಾಜ್ಯ ಸರ್ಕಾರಗಳೂ ಸಿದ್ಧವಿಲ್ಲ. ಇದರ ಜೊತೆಗೆ ರೈಸ್ ಮಿಲ್ ಮಾಲೀಕರ ಮೇಲೆ ವಿದ್ಯುತ್ ದರ ಏರಿಕೆ ಹೊರೆಯಾಗುತ್ತಿದೆ. ರಾಜ್ಯ ಸರ್ಕಾರ ಬೆಲೆ ಇಳಿಕೆ ಮಾಡುವುದಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟಿದೆ. ಮಾತುಕತೆಗೆ ಅವಕಾಶವೇ ಇಲ್ಲ. ಈ ಎಲ್ಲದರ ಪರಿಣಾಮ..
ಮೀಡಿಯಂ ರೇಂಜಿನ 35ರೂ.ಗೆ ಸಿಗುತ್ತಿದ್ದ ಅಕ್ಕಿ 38-40ರೂ.ಗೆ ಏರಿದೆ. ಇದು ಸ್ಟೀಮ್ ರೈಸ್ ದರವಾದರೆ, ರಾ ರೈಸ್ ದರವೂ ಏರಿದೆ. 50 ರೂ.ಗೆ ಸಿಗುತ್ತಿದ್ದ ಅಕ್ಕಿಯ ಬೆಲೆ ಈಗ 55 ರೂ.ಗೆ ಏರಿದೆ. ಇನ್ನು ಕೋಲಮ್ (ಬುಲೆಟ್ ರೈಸ್) . 72-73ಕ್ಕೆ ಏರಿಕೆಯಾಗಿದೆ. ಇದು ಹಿಂದೆ . 52-55 ಇತ್ತು. ಈ ಬೆಲೆ ಇನ್ನೂ ಹೆಚ್ಚಳವಾಗಲಿದೆ. ಒಟ್ಟಿನಲ್ಲಿ ಎಲ್ಲವೂ ದುಬಾರಿಯಾಗಿವೆ.
ತರಕಾರಿ ಬೆಲೆ ಹೆಚ್ಚಳ :
ತರಕಾರಿ ಬೆಲೆ ಏರಿಕೆಗೆ ಕಾರಣ ಬಹುತೇಕ ಮಳೆಯ ಕೊರತೆ. ತಿಂಗಳ ಹಿಂದೆ ಕೇಜಿಗೆ .20- .25 ಇದ್ದ ಟೊಮೆಟೋ ಬೆಲೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಭಾನುವಾರ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೋ ಸಗಟು ದರ . 60-80 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 100 ರು. ಸನಿಹಕ್ಕೆ ತಲುಪಿದೆ. ಪೂರೈಕೆ ತೀರಾ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ. ಮಳೆ ಅಭಾವ ಕಾರಣದಿಂದ ನವೆಂಬರ್ವರೆಗೂ ಇದೇ ರೀತಿ ಬೆಲೆ ಏರಿಕೆ ಮುಂದುವರಿವ ಸಾಧ್ಯತೆ ಇದೆ. ಮಳೆ ಅಭಾವ, ಅಕ್ಕಿ, ಬೇಳೆ ಕಾಳುಗಳ ದಾಸ್ತಾನು ಮಾಡಿಟ್ಟುಕೊಳ್ಳುವ ಅನಿವಾರ್ಯತೆ, ರಫ್ತಿನ ವಿಚಾರದಲ್ಲಿ ಎಡವಿರುವುದು ಇದಕ್ಕೆ ಕಾರಣ. ಹೀಗಾಗಿಯೇ ಈಗಾಗಲೇ ಟೊಮ್ಯಾಟೋ, ಬೀನ್ಸ್, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹೀರೇಕಾಯಿ, ಬೆಂಡೆಕಾಯಿ, ಹೂಕೋಸು.. ಹೀಗೆ ಎಲ್ಲ ತರಕಾರಿ ದರವೂ ಡಬಲ್ ಆಗಿದೆ. ಎಲ್ಲ ತರಕಾರಿಗಳು 80 ರೂ. ಗಡಿ ದಾಟಿದ್ದು, ಹುರಳಿಕಾಯಿ 200 ರೂ. ಸನಿಹ ಸಾಗಿದೆ.
ಬೇಳೆ, ಜೀರಿಗೆ, ಮೆಣಸು ದರವೂ ದುಬಾರಿ :
ಕಳೆದ ವಾರ 120 ರೂ. ಇದ್ದ ತೊಗರಿ ಬೇಳೆ ದರ ಶನಿವಾರ 160 ರೂ. ತಲುಪಿದೆ. ಇದರೊಂದಿಗೆ ಉದ್ದಿನ ಬೇಳೆ, ಹೆಸರು ಕಾಳು-ಬೇಳೆ, ಹಲಸಂದೆ, ಶೇಂಗಾ ಹಾಗೂ ಹುರಳಿ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ವಾರ 125 ರೂ. ಇದ್ದ ತೊಗರಿ ಬೇಳೆ ಈಗ 150-160 ರೂ.ಗೆ ಏರಿಕೆಯಾಗಿದೆ. ಉದ್ದಿನ ಬೇಳೆ ಕೆಜಿಗೆ 25 ರೂ ಹೆಚ್ಚಳವಾಗಿ 135 ರೂ., 100 ರೂ ಇದ್ದ ಹೆಸರು ಕಾಳು 120 ರೂ., 70 ರೂ. ಇದ್ದ ಹಲಸಂದಿ ಕಾಳು 100 ರೂ. 120 ರೂ. ಇದ್ದ ಶೇಂಗಾ 145 ರೂ. ಹಾಗೂ ವಾರದ ಹಿಂದೆ 66 ರೂ. ಇದ್ದ ಹುರಳಿ ಕಾಳು ಬೆಲೆ ಶನಿವಾರ 105 ರೂ.ಗೆ ಏರಿಕೆಯಾಗಿದೆ. ಅದು ಖಾಲಿ ಆದರೆ ಬೆಲೆಯಲ್ಲಿಮತ್ತೆ 10-20 ರೂ. ಹೆಚ್ಚಾಗ ಬಹುದು. ಈಗ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಹಳೆಯ ಸ್ಟಾಕ್. ಪರಿಸ್ಥಿತಿ ಹೀಗೇ ಮುಂದುವರಿದರೆ ದೀಪಾವಳಿ ಹಬ್ಬದ ವೇಳೆಗೆ ತೊಗರಿ ಬೇಳೆ ದರ ಕೆ.ಜಿಗೆ 200 ರೂ. ತಲುಪಿದರೂ ಅಚ್ಚರಿ ಇಲ್ಲ. ಜೀರಿಗೆ, ಮೆಣಸು, ಹರಿಶಿಣದ ಬೆಲೆಗಳಲ್ಲೂ ಡಬಲ್ ಬೆಲೆ ಏರಿಕೆಯಾಗಿದೆ.
ಹಾಲಿನ ದರ ಏರಿಕೆಯ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರೇ ಸುಳಿವು ಕೊಟ್ಟಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಕೂಡಾ ಹೇಳಿದ್ದರೆ. ಒಂದು ತಿಂಗಳು ಅಥವಾ ಎರಡು ತಿಂಗಳು ತಡವಾಗಬಹುದು. ಹಾಲಿನ ಬೆಲೆ ಏರಿಕೆಯಂತೂ ಪಿಕ್ಸ್. ವಿದ್ಯುತ್ ದರ ಏರಿಕೆಯ ಕಾರಣಕ್ಕೆ ಹೋಟೆಲ್ಲುಗಳ ವಿದ್ಯುತ್ ದರವೂ ದುಪ್ಟಟ್ಟಾಗಿದೆ. ಹಾಲು, ತರಕಾರಿ, ಅಕ್ಕಿಯೂ ಏರಿಕೆ ಕಂಡಿರುವ ಕಾರಣ ಗ್ರಾಹಕರಿಗೆ ಹೊಡೆತ ಬೀಳುವುದು ಫಿಕ್ಸ್. ಕೆಲವು ಕಡೆಗಳಲ್ಲಂತೂ ಈಗಾಗಲೇ ದರ ಏರಿಸಿಯಾಗಿದೆ. ಒಟ್ಟಿನಲ್ಲಿ ದುಬಾರಿ ದುನಿಯಾ ಕೈಬೀಸಿ ಕರೆಯುತ್ತಿದೆ.



