ಆರ್ಟಿಕಲ್ ೩೭೦ ರದ್ದಾಯ್ತು. ೧೯೪೯ರಲ್ಲಿ ಜಾರಿಯಾಗಿದ್ದ, ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ನೀತಿ ನಿಯಮ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿದ್ದ, ಮೀಸಲಾತಿ ಮೊದಲಾದ ದೇಶದ ಯಾವ ಸಂವಿಧಾನದ ನಿಯಮಗಳನ್ನೂ ಪಾಲಿಸದೇ ಇದ್ದ ಜಮ್ಮು ಕಾಶ್ಮೀರಕ್ಕೆ ಈಗ ಎಲ್ಲ ರಾಜ್ಯಗಳಂತೆಯೇ ಒಂದು ರಾಜ್ಯ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ರದ್ದು ನಿರ್ಧಾರ ಸರಿ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ, ಈ ವಿಷಯದಲ್ಲಿ ಮೂರೂವರೆ ದಶಕಗಳ ನಾನಾ ರೀತಿಯ ಹೋರಾಟ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಜಯ ಎಂದೇ ಬಣ್ಣಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯನ್ನೇ ಹೊಗಳುತ್ತಿರುವುದು ಏಕೆ?
ಹಲವರು ಜಮ್ಮು ಕಾಶ್ಮೀರವನ್ನು ೩೭೦ ಸಂಕೋಲೆಯಿಂದ ಮುಕ್ತಿಗೊಳಿಸುವ ಕನಸು ಕಂಡಿದ್ದರು. ಶ್ಯಾಂ ಪ್ರಸಾದ್ ಮುಖರ್ಜಿಯಿಂದ ಶುರುವಾದ ಹೋರಾಟ, ಹಲವು ದಶಕಗಳವರೆಗೆ ನಡೆದು, ಈಗ ಮೊದಲ ಹಂತದ ಗೆಲುವು ಸಿಕ್ಕಿದೆ. ಹೋರಾಟಕ್ಕೆ ಸಂಪೂರ್ಣ ಜಯ ಸಿಗಬೇಕು ಎಂದರೆ ಅಲ್ಲಿ ಚುನಾವಣೆ ನಡೆದು ಮೂಲಭೂತವಾದಿಗಳನ್ನು ಸೋಲಿಸಬೇಕು ಹಾಗೂ ಪಾಕ್ ವಶದಲ್ಲಿರುವ ಕಾಶ್ಮೀರವೂ ಭಾರತದ ವಶಕ್ಕೆ ಬರಬೇಕು. ಹೀಗಿರುವಾಗ ಎಲ್ಲೃೂ ಮೋದಿಯನ್ನೇ ಹೊಗಳುತ್ತಿರುವುದು ಏಕೆ..? ಅದಕ್ಕೆ ಕಾರಣವೂ ಇದೆ.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 370ನೇ ವಿಧಿ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದು ಹೌದಾದರೂ, ಅಂಥದ್ದೊಂದು ಹೋರಾಟಕ್ಕೆ ಅವರು ಮೂರೂವರೆ ದಶಕಗಳ ಹಿಂದೆಯೇ ಏಕತಾ ಯಾತ್ರೆಯ ಮೂಲಕ ಮುನ್ನುಡಿ ಬರೆದಿದ್ದರು. 1984 – 85ರಲ್ಲೇ ಆರ್‌ಎಸ್‌ಎಸ್‌ನ ಸಭೆಯೊಂದರಲ್ಲಿ ಮಾತನಾಡುವಾಗ ಮೊದಲ ಬಾರಿಗೆ ನರೇಂದ್ರ ಮೋದಿ ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಗಳಿಂದ ಆಗುತ್ತಿರುವ ಪರಿಣಾಮಗಳ ಕುರಿತು ಮಾತನಾಡಿದ್ದರು. 1992ರಲ್ಲಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಕಾಶ್ಮೀರ ವಿಮೋಚನೆಗಾಗಿ 45 ದಿನಗಳ ಏಕತಾ ಯಾತ್ರೆ ಮಾಡಿ ಉಗ್ರರ ಅಡ್ಡಿಯ ನಡುವೆಯೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಜನವರಿ 24ರಂದು ತ್ರಿವರ್ಣ ಧ್ವಜ ಹಾರಿಸಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದರು. ಅಲ್ಲದೆ ಅದೇ ವರ್ಷ ಬಿಜೆಪಿಯಿಂದ ಕಾಶ್ಮೀರದ ಅಧ್ಯಯನ ಸಮಿತಿ ಸದಸ್ಯರಾಗಿ 4 ದಿನಗಳ ಕಾಲ ಕಾಶ್ಮೀರ ಪ್ರವಾಸ ಮಾಡಿ ಅಲ್ಲಿನ ವಸ್ತುಸ್ಥಿತಿಯನ್ನು ಅರಿತಿದ್ದರು.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಸ್ವತಃ ತೆರಳಿ ಸೈನಿಕರಿಗೆ ನೆರವು ನೀಡಿದ್ದರು. ಗುಜರಾತ್ ಮುಖ್ಯಮಂತ್ರಿಯಾದಾಗಲೂ ಹಲವಾರು ಬಾರಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿವಿಧ ಸಮುದಾಯದೊಂದಿಗೆ ಸಮಾಲೋಚಿಸಿ ಸ್ಫೂರ್ತಿ ತುಂಬಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಪ್ರಚಾರ ಮಾಡಲು ಕಾಶ್ಮೀರಕ್ಕೆ ತೆರಳಿದಾಗ ವಿಧಿ 35ಎ ದಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ಕುರಿತು ಬೆಳಕು ಚೆಲ್ಲಿದ್ದರು.
ಪ್ರಧಾನಿಯಾದ ನಂತರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಉಗ್ರವಾದವನ್ನು ನಿಗ್ರಹಿಸುವ ಜೊತೆಗೆ ಅಲ್ಲಿನ ಶ್ರೇಯೋಭಿವೃದ್ಧಿಗೆ ಪ್ರಮುಖ ತೊಡಕಾಗಿದ್ದ ಆರ್ಟಿಕಲ್ 370 ಮತ್ತು 35ಎಗಳನ್ನು 2019ರಲ್ಲಿ ಸಂಸತ್ತಿನಲ್ಲಿ ರದ್ದು ಮಾಡಿದರು. ಈಗ ಇದಕ್ಕೆ ನ್ಯಾಯಾಲಯದ ಅನುಮೋದನೆಯೂ ದೊರೆಯುವುದರೊಂದಿಗೆ ಮೂರೂವರೆ ದಶಕಗಳ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.
ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಕಾಶ್ಮೀರ ಕುರಿತು ತಂದ 2 ಬಿಲ್‌ಗಳನ್ನು ರಾಜ್ಯಸಭೆ ಅಂಗೀಕರಿಸಿದೆ. ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡನಾ (ತಿದ್ದುಪಡಿ) ಮಸೂದೆ ಇದೀಗ ರಾಜ್ಯಸಭೆಯಲ್ಲೂ ಪಾಸ್ ಆಗಿದೆ. ಈ ಮಸೂದೆ ತಿದ್ದುಪಡಿಯಲ್ಲಿ ಪ್ರಮುಖ ಅಂಶಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರದ ಪಂಡಿತರಿಗೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಿರಾಶ್ರಿತರಿಗೆ 2 ಸ್ಥಾನ ಮೀಸಲಿಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಜಮ್ಮುಗೆ ಈ ಹಿಂದೆ 37 ಸ್ಥಾನ ಇತ್ತು. ಅದನ್ನು ಇದೀಗ 43ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕಾಶ್ಮೀರಕ್ಕೆ 46 ಸ್ಥಾನ ಇದ್ದು ಅದನ್ನು 47ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆಂದೇ ಮೀಸಲಿಡಲಾಗಿದೆ ಏಕೆಂದರೆ ಅದು ನಮ್ಮ ಪ್ರದೇಶ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ್ದಾರೆ. ಹೀಗಾಗಿ ಎಲ್ಲರೂ ಮೋದಿಯನ್ನೇ ಹೊಗಳುತ್ತಿದ್ದಾರೆ.



