ಸತ್ತವರು ಬದುಕಿದ್ದಾಗ ಪುಣ್ಯದ ಕೆಲಸ ಮಾಡಿದ್ದರೆ ಸ್ವರ್ಗಕ್ಕೆ ಹೋಗ್ತಾರೆ. ಕೆಟ್ಟ ಕೆಲಸವನ್ನೇ ಮಾಡಿದ್ದರೆ ನರಕಕ್ಕೆ ಹೋಗ್ತಾರೆ. ಇದು ಕೇವಲ ಹಿಂದೂಗಳಲ್ಲಿರೋ ನಂಬಿಕೆ ಅಲ್ಲ. ಪ್ರತೀ ಧರ್ಮ, ಪಂಥಗಳಲ್ಲೂ ಈ ರೀತಿಯ ನಂಬಿಕೆ ಇದೆ. ಅಂತಹ ಒಬ್ಬ ವ್ಯಕ್ತಿ ಕಂಡಿರುವ ಕಥೆ ಇದು. ಈ ಕಥೆ ಹೇಳಿರುವಾತನ ಹೆಸರು ಲಾಂಡೆನ್ ಕೆಂಪ್. ಅಮೆರಿಕದ ವಾಷಿಂಗ್ಟನ್ ನಿವಾಸಿ. ಈತನಿಗೆ ಈಗ 35 ವರ್ಷ. ಅಂದಹಾಗೆ ಈತ ಸತ್ತು ಬದುಕಿದವನು. ಒಂದೇ ದಿನ ಮೂರು ಸತ್ತಿದ್ದ ಲಾಂಡೆನ್ ಕೆಂಪ್ ಸಾವನ್ನು ವೈದ್ಯರು ಮೂರು ಬಾರಿಯೂ ಅಧಿಕೃತವಾಗಿ ಘೋಷಿಸಿದ್ದರು. ಆದರೆ ಬದುಕಿ ಕಣ್ಣು ಬಿಟ್ಟ ಕೆಂಪ್ ಹೇಳಿದ್ದು ಸ್ವರ್ಗದ ಕಥೆ.
ಈ ಘಟನೆ ಜರುಗಿದ್ದು 2000ನೇ ಇಸವಿಯ ಜನವರಿ 17ರಲ್ಲಿ. ಆಗ ಕೆಂಪ್ʻಗೆ ಜಸ್ಟ್ 8 ವರ್ಷ. ನಾನು ನನ್ನ ತಂದೆ ಆಂಡಿ, ತಾಯಿ ಜೂಲಿ ಜೊತೆ ಚರ್ಚಿಗೆ ಹೋಗಿ ಬರುತ್ತಿದ್ದೆ. ಆಗ ನಾವಿದ್ದ ಕಾರಿಗೆ ಒಂದು ಆಂಬುಲೆನ್ಸ್ ಡಿಕ್ಕಿ ಹೊಡೆಯಿತು. ಅಪ್ಪ ಸ್ಥಳದಲ್ಲೇ ಮೃತಪಟ್ಟರು. ನಂತರ ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಹೇಳುವ ಕೆಂಪ್, ತನ್ನ ಸಾವನ್ನು ವೈದ್ಯರು ಮೂರು ಬಾರಿ ಘೋಷಿಸಿದ್ದರು. ವಿಶೇಷ ಅಂದ್ರೆ ನಾನು ಮೂರು ಬಾರಿಯೂ ಸ್ವರ್ಗಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ನಾನು ಸ್ವರ್ಗಕ್ಕೆ ಹೋಗಿದ್ದೆ. ಅಲ್ಲಿ ನನ್ನ ತಂದೆಯನ್ನು ನಾನು ನೋಡುತ್ತಿದ್ದೆ. ಅವರ ಜೊತೆ ಒಂದು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದ ತಂದೆಯ ಫ್ರೆಂಡ್ ಓಲನ್ ಪಾಲ್ಮರ್ ಕೂಡಾ ಇದ್ದರು. ಅವರ ಮಗ ನೀಲ್ ಕೂಡಾ ಇದ್ದ. ಆದರೆ ಅವರು ಯಾರೊಂದಿಗೂ ನಾನು ಮಾತನಾಡಿರಲಿಲ್ಲ. ಆದರೆ ನನಗೆ ಅವರು ಯಾರು ಅನ್ನೋದು ಗೊತ್ತಿತ್ತು ಎಂದಿರುವ ಕೆಂಪ್ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದು ಯಾವಾಗ ಗೊತ್ತೇ.. ಕೆಂಪ್ ತಾಯಿಯ ಗರ್ಭಪಾತದ ಕಥೆ ಕೇಳಿದ ಮೇಲೆ.
ಏನೆಂದರೆ ಕೆಂಪ್ ಅವರ ತಾಯಿ ಜೂಲಿಗೆ ಕೆಂಪ್ ಹುಟ್ಟುವುದಕ್ಕೂ ಮೊದಲು ಎರಡು ಅಬಾರ್ಷನ್ ಆಗಿತ್ತು. ಅದನ್ನು ಮಗನಿಗೆ ಯಾವತ್ತೂ ಹೇಳಿರಲಿಲ್ಲ. ಆದರೆ ಸ್ವರ್ಗಕ್ಕೆ ಹೋಗಿದ್ದಾಗ ಕೆಂಪ್ʻಗೆ ಅದು ಗೊತ್ತಾಯ್ತು. ಇದೆಲ್ಲವನ್ನೂ ಆತ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾನೆ.
ಹಾಗಂತ ಇದು ಹೊಸ ಕಥೆ ಏನಲ್ಲ. ಕೆಂಪ್, 8 ವರ್ಷದವನಿದ್ದಾಗ ಹೇಳಿಕೊಂಡಿದ್ದ ಕಥೆಯನ್ನೇ ಈಗ ಮತ್ತೆ ಡಾಕ್ಯುಮೆಂಟರಿಗಳಲ್ಲಿ ಹೇಳಿಸಲಾಗಿದೆ, ಅಷ್ಟೆ. ಕೆಂಪ್ 8 ವರ್ಷದವನಿದ್ದಾಗ ಹೇಳಿದ್ದ ಕಥೆಯನ್ನು ಆಗ ಅಮೆರಿಕದ ಹಲವು ಪತ್ರಿಕೆಗಳು ವರದಿ ಮಾಡಿದ್ದವು ಕೂಡಾ. ನನಗೆ ನನ್ನ ತಂದೆ ಭೂಮಿಗೆ ವಾಪಸ್ ಹೋಗು. ಒಳ್ಳೆಯ ಕ್ರೈಸ್ತನಾಗು ಎಂದು ಹೇಳಿ ಕಳಿಸಿಕೊಟ್ಟರು ಎಂದು ಕೂಡಾ ಹೇಳಿದ್ದಾನೆ.
ಕೆಂಪ್ ಅನುಭವ, ಇಂತಹ ಹಲವಾರು ಕಥೆಗಳಿಗೆ ಇನ್ನೊಂದು ಸೇರ್ಪಡೆ ಅಷ್ಟೆ. ಕೆಲವರು ತೀವ್ರ ಸ್ವರೂಪದ ಆಘಾತ, ಅಪಘಾತಗಳಾದಾಗ, ಆಪರೇಷನ್ ಆದಾಗ ಇದೇ ರೀತಿಯ ಅನುಭವ ಎದುರಿಸಿದ್ದಾರೆ. ಸಾವಿನ ಅಂಚಿಗೆ ಹೋಗಿ ಬಂದವರು, ಈ ಹಿಂದೆ ಮೃತಪಟ್ಟ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ನೋಡಿದ ಭ್ರಾಂತಿಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ. ಅದು ಬ್ರಾಂತಿಯೇ ಹೊರತು, ಮತ್ತೇನಲ್ಲ. ಸತ್ಯವಾಗಿದ್ದರೆ ಜಗತ್ತಿನ ಎಲ್ಲರಿಗೂ ಒಂದೇ ರೀತಿಯ ಅನುಭವ ಆಗಿರಬೇಕಿತ್ತು ಎನ್ನುವುದು ಇದನ್ನು ನಂಬದವರ ವಾದ.



