ಇವಿಎಂ ಮತದಾನದ ವಿರುದ್ಧ ದೇಶಾದ್ಯಂತ ಸಮರವನ್ನೇ ನಡೆಸಿರುವ ಕಾಂಗ್ರೆಸ್ಸಿಗೆ ಹೆಜ್ಜೆ ಹೆಜ್ಜೆಗೂ ಹಿನ್ನಡೆಯಾಗುತ್ತಿದೆ. ಅದರಲ್ಲಿಯೂ ವೋಟ್ ಚೋರಿ ಅಭಿಯಾನ ಶುರು ಮಾಡಿದ ನಂತರ ಆಗಿರುವ ಯಾವ ಬೆಳವಣಿಗೆಗಳೂ ಕಾಂಗ್ರೆಸ್ಸಿಗೆ ಪೂರಕವಾಗಿಲ್ಲ. ಅದರಲ್ಲಿ ಮೊದಲನೆಯ ಪ್ರಮಾದ ಎಂದರೆ ತಾವು ಮಾಡಿದ್ದ ಆರೋಪ ಸುಳ್ಳೆಂದು ಜಗಜ್ಜಾಹೀರಾದರೂ, ಅದು ತಮಗೆ ಗೊತ್ತೇ ಇಲ್ಲವೇನೋ ಎಂಬಂತೆ ಆರೋಪ ಮಾಡುತ್ತಲೇ ನಿಂತಿರುವುದು. ಈಗ ಅದಕ್ಕೆ ಇನ್ನೊಂದು ಸೇರಿದೆ. ಅವರದ್ದೇ ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ರಾಜ್ಯದ ಮತದಾರರು ಇವಿಎಂ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ಶೇಕಡ 83.61 ರಷ್ಟು ಮತದಾರರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ನಡೆದ ಸಮೀಕ್ಷೆಯಲ್ಲಿ. ಮಲ್ಲಿಕಾರ್ಜುನ ಖರ್ಗೆಯವರ ಕಲಬುರಗಿಯಲ್ಲಿ ಶೇಕಡ 94.8ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶೇಕಡ 88.59ರಷ್ಟು ಮತದಾರರು ಇವಿಎಂ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತಯಂತ್ರಗಳನ್ನು ನಿಖರತೆಯ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. 2025ರ ಆಗಸ್ಟ್‌ನಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗಿದೆ. ಅವರದ್ದೇ ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ಅವರ ಪಕ್ಷದ ಅಭಿಯಾನದ ವಿರುದ್ಧವೇ ಬಂದಿರುವ ಜನಾಭಿಪ್ರಾಯ, ಸರ್ಕಾರಕ್ಕೆ ಮುಜುಗರ ತಂದಿರುವುದು ಹೌದು. ಆದರೆ ಇದರ ಮಧ್ಯೆ ಸಮರ್ಥನೆಗೆ ಒಂದು ಪೂರಕ ಅಂಶವೂ ಸಿಕ್ಕಿದೆ.
ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಹಿನ್ನಲೆ ನಡೆಸಿರುವ ಸಮೀಕ್ಷೆ ಇದು. ಸಮೀಕ್ಷೆಗಾಗಿ ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ನಡೆಸುತ್ತಿರುವ ಎನ್ಜಿಒದ ಸಹಾಯ ಪಡೆಯಲಾಗಿದೆ. ರಾಜ್ಯ ಸರ್ಕಾರದ ಸಚಿವಾಲಯದ ಅಡಿಯಲ್ಲೇ ಕೆಲಸ ನಡೆದಿದ್ದರೂ, ಅಧಿಕಾರಿಗಳು ಈ ಸಮೀಕ್ಷೆ ನಡೆಸಿಲ್ಲ. ಒಂದು ಖಾಸಗಿ ಎನ್‌ಜಿಓಗೆ ವಹಿಸಲಾಗಿತ್ತು. ಆ ಎನ್‌ಜಿಓ ನಡೆಸುತ್ತಿರುವ ವ್ಯಕ್ತಿ ಬಾಲಸುಬ್ರಮಣಿಯನ್. ಈ ಬಾಲಸುಬ್ರಮಣಿಯನ್, ನರೇಂದ್ರ ಮೋದಿ ಅವರ ಪುಸ್ತಕದ ಲೇಖಕ. ಪ್ರಧಾನ ಮಂತ್ರಿ ಕಚೇರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುವ ವ್ಯಕ್ತಿ. ಇದನ್ನೇ ಸಮರ್ಥನೆಯಾಗಿ ಬಳಸಿಕೊಂಡಿದ್ಧಾರೆ ಪ್ರಿಯಾಂಕ್ ಖರ್ಗೆ.
ಇನ್ನು ರಾಹುಲ್ ಗಾಂಧಿ ಆರೋಪ ಮಾಡಿದ್ದು ಆಗಸ್ಟ್ ತಿಂಗಳಲ್ಲಿ. ಸಮೀಕ್ಷೆ ನಡೆದಿರುವುದು ಅದಕ್ಕೂ ಮುನ್ನ. ಹೀಗಾಗಿ ಜನರಿಗೆ ಈ ಮಾಹಿತಿಯೇ ಗೊತ್ತಿಲ್ಲ ಎನ್ನುವುದು ಸಿದ್ಧರಾಮಯ್ಯ ಅವರ ವಾದ. ಅಷ್ಟೇ ಅಲ್ಲ, ಐದೂವರೆ ಸಾವಿರ ಜನರ ಅಭಿಪ್ರಾಯ 7 ಕೋಟಿ ಜನರ ಅಭಿಪ್ರಾಯ ಅಲ್ಲ ಎನ್ನುವ ವಾದವೂ ಇದೆ.
ಆದರೆ ಇದಕ್ಕೆಲ್ಲ ಕೌಂಟರ್ ಕೊಟ್ಟಿರುವ ಬಿಜೆಪಿ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಪ್ರತಿ ಬಾರಿ ರಾಹುಲ್ ಗಾಂಧಿ ಇವಿಎಂ ಅನ್ನು ಹಾಗೂ ಚುನಾವಣಾ ಆಯೋಗವನ್ನು ದೂಷಿಸುತ್ತಾರೆ. ಹಾಗೆ ಮಾಡಿದಾಗಲೆಲ್ಲ ಅವರ ಆರೋಪಗಳು ಸುಳ್ಳೆಂಬುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ಲೇವಡಿ ಮಾಡಿರುವ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಜನರು ಇವಿಎಂಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ. ರಾಹುಲ್ ಗಾಂಧಿ ಪ್ರತಿ ಬಾರಿ ಇವಿಎಂಗಳನ್ನು ಅಥವಾ ವ್ಯವಸ್ಥೆಯನ್ನು ದೂಷಿಸಿದಾಗ ಅವರಿಗೆ ವಾಸ್ತವದ ಅರಿವು ಮೂಡಿಸುವಂಥ ವಿದ್ಯಮಾನಗಳು ನಡೆಯತ್ತವೆ ಎಂದಿದ್ದಾರೆ.



