ಡಿಕೆ ಶಿವಕುಮಾರ್ ಅವರ ಕೈಲಿರುವ ಕಾರ್ಟಿಯರ್ ವಾಚ್ ಸ್ಟೋರಿ ದಿನೇ ದಿನೇ ಬೇರೆಯದ್ದೇ ಸ್ವರೂಪ ಪಡೆಯುತ್ತಿದೆ. ಅದ್ಯಾರಿಗೆ ಪುರುಸೊತ್ತಿದ್ದು, ವಾಚ್ ಮೇಲೆ ಕಣ್ಣಿಟ್ಟರೋ.. ಗೊತ್ತಿಲ್ಲ. ವಾಚ್ ಸ್ಟೋರಿಯಂತೂ ರೈಸ್ ಆಗಿದೆ. ಸಿದ್ದರಾಮಯ್ಯ ಅವರು ಡಿಕೆ ಮನೆಗೆ ಹೋಗಿ ಬ್ರೇಕ್ ಫಾಸ್ಟ್ ಮಾಡಿದ್ರಲ್ಲ, ಆವತ್ತು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಒಂದೇ ಕಂಪೆನಿಯ ಕಾರ್ಟಿಯರ್ ವಾಚ್ ಕಟ್ಟಿಕೊಂಡಿದ್ದರು. ಈಗ ಅದನ್ನು ಬೆನ್ನು ಹತ್ತಿರೋ ಬಿಜೆಪಿ, ಛಲವಾದಿ ನಾರಾಯಣ ಸ್ವಾಮಿ ಅವರನ್ನು ಮುಂದೆ ಬಿಟ್ಟಿದೆ. ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಡಿಕೆ ಉತ್ತರ ಕೊಟ್ಟಿದ್ದಾರೆ. ಆದರೆ, ಉತ್ತರ ಕೊಟ್ಟ ನಂತರವೂ ಛಲವಾದಿ ಪ್ರಶ್ನೆ ಎತ್ತಿದ್ದಾರೆ. ಎಲ್ಲ ಓಕೆ.. ʻಆ ವಾಚ್ʼ ಮಿಸ್ ಯಾಕೆ..? ಎಂಬುದೇ ಆ ಪ್ರಶ್ನೆ.
ಚುನಾವಣಾ ಅಫಿಡವಿಟ್‌ನಲ್ಲಿ ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ ₹9 ಲಕ್ಷ ಎಂದಿದ್ದಾರೆ. ಹ್ಯೂಬ್ಲೆಟ್ ವಾಚ್ ₹23,90,246 ಎಂದಿದ್ದಾರೆ. ಆದರೆ, ಅವರ ಕೈಯಲ್ಲಿ ಕಾರ್ಟಿಯರ್ ಕಂಪನಿಯ ವಾಚ್ ಇದೆ. ಅದರ ಇಂದಿನ ದರ ₹43 ಲಕ್ಷ ಇದ್ದು, ತೆರಿಗೆ ಸೇರಿ ₹46-47 ಲಕ್ಷ ಆಗುತ್ತದೆ. ಇದು ಕದ್ದ ಮಾಲೇ? ಕೊಂಡ ಮಾಲೇ? ಒಂದು ವೇಳೆ ನೀವು ರಾಜ್ಯಕ್ಕೆ ಸುಳ್ಳು ಹೇಳಿದ್ದರೆ, ಕಾರ್ಡಿನಿಂದ ಪಾವತಿ ಆಗಿದ್ದರೆ ದಾಖಲೆ ಬಿಡುಗಡೆ ಮಾಡಿ.. ಎಂದು ಪ್ರಶ್ನೆ ಮಾಡಿದ್ದರು.
ಯಾವಾಗ ಅದು ಕದ್ದಿದ್ದೋ.. ಕೊಂಡಿದ್ದೋ ಎಂದು ಪ್ರಶ್ನೆ ಮಾಡಿದ್ರೋ.. ಆಗ ಡಿಕೆ ಶಿವಕುಮಾರ್ ಕೆರಳಿ ಕೆಂಡವಾದರು. ಅಫ್‌ಕೋರ್ಸ್.. ಛಲವಾದಿ ನಾರಾಯಣ ಸ್ವಾಮಿ ಅವರಷ್ಟೇ ಅಲ್ಲ, ಸಾರ್ವಜನಿಕವಾಗಿ ಲಭ್ಯ ಇರುವ 2018, 2023ರ ಎಲೆಕ್ಷನ್ ಅಫಿಡವಿಟ್ಟಿನಲ್ಲೂ ಆ ದಾಖಲೆಗಳಿಲ್ಲ. ಅದು ಸತ್ಯ. ಅದಕ್ಕೆ ಉತ್ತರ ನೀಡಿರುವ ಡಿಕೆ ಶಿವಕುಮಾರ್ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್ ಕಾಪಿ ಹಾಕಿ ಉತ್ತರ ಕೊಟ್ಟಿದ್ದಾರೆ.
ತಮ್ಮ ಬಳಿ ಇರುವ ಮೂರು ವಾಚ್‌ಗಳ ಲೆಕ್ಕ ಕೊಟ್ಟಿದ್ದಾರೆ. ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಠ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು ಎಂದೆಲ್ಲ ಉತ್ತರ ಕೊಟ್ಟಿದ್ದಾರೆ. ಡಿಕೆ ಲೋಕಾಯುಕ್ತ ರಿಪೋರ್ಟ್ ಪ್ರಕಾರ ಅವರ ಬಳಿ ಎರಡು ಕಾರ್ಟಿಯರ್ (9 ಲಕ್ಷದ್ದು ಒಂದು, 24 ಲಕ್ಷದ್ದು ಒಂದು) ಒಂದು ರೊಲೆಕ್ಸ್ ವಾಚ್ ಇದೆ. ಆದರೆ, ಇಲ್ಲಿ ಒಂದು ಮಿಸ್ಟೇಕ್ ಆಗಿದೆ. ಅದೇನು ಎಂದರೆ 2018 ಹಾಗೂ 2023ರ ಎಲೆಕ್ಷನ್ ಅಫಿಡವಿಟ್‌ನಲ್ಲಿದ್ದ ಹುಬ್ಲೂಟ್ ವಾಚ್ ಮಿಸ್ಸಿಂಗ್.
ಈಗಲೂ ಡಿಕೆಶಿ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ, ಅದು ಅಫಿಡವಿಟ್‍ನಲ್ಲಿಲ್ಲ. ಈಗ ಲೋಕಾಯುಕ್ತಕ್ಕೆ ಕೊಟ್ಟ ಮಾಹಿತಿಯಡಿ ರೋಲೆಕ್ಸ್ ವಾಚ್- 9 ಲಕ್ಷ, ಕಾರ್ಟಿಯರ್ ವಾಚ್- 23.90 ಲಕ್ಷ, ಇನ್ನೊಂದು ಕಾರ್ಟಿಯರ್ ವಾಚ್- 12.06 ಲಕ್ಷ ಎಂದಿದ್ದಾರೆ. ಹಾಗಿದ್ದರೆ ಹೂಬ್ಲೋಟ್ ವಾಚ್ ಎಲ್ಲಿ ಹೋಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಈಗ ನೀವು ಕಾರ್ಟಿಯರ್ ವಾಚ್ ವಿಚಾರವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀರಿ. ಹಿಂದೆ ಅಫಿಡವಿಟ್‍ನಲ್ಲಿ ಕೊಟ್ಟಿಲ್ಲ. ಅದು ಕೂಡ ಅಪರಾಧವೇ. ನೀವು ನೂರು ವಾಚ್ ಕಟ್ಟಿದರೆ ನಾನು ಸ್ನೇಹಿತನಾಗಿ ಅತ್ಯಂತ ಖುಷಿ ಪಡುವೆ. ನೀವು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿದ್ದೀರಿ. ಆದರೆ, ಅದನ್ನು ತಿಳಿಸಿಲ್ಲ ಎಂಬುದಷ್ಟೇ ನನ್ನ ಪ್ರಶ್ನೆ ಎಂದಿದ್ದಾರೆ.



