ಚುನಾವಣೆ ನಡೆಯುವ ವೇಳೆಯಲ್ಲಿಯೇ ಹಲವು ಹಿರಿಯ ಪತ್ರಕರ್ತರು ಆರ್.ಎಸ್.ಎಸ್. ಬಿಜೆಪಿ ಹಾಗೂ ಮೋದಿಯ ವಿಷಯದಲ್ಲಿ ಅಂತರ ಕಾಯ್ದುಕೊಳ್ಳುತ್ತಿದೆ. ಈ ಬಾರಿ ಆರ್.ಎಸ್.ಎಸ್. ಎಲೆಕ್ಷನ್ನಿನಲ್ಲಿ ಗೆಲುವಿಗೆ 100% ಶ್ರಮ ಹಾಕುತ್ತಿಲ್ಲ ಎಂದು ಹೇಳುತ್ತಿದ್ದರು. ಚುನಾವಣೆ ನಡೆಯುತ್ತಿರುವಾಗ ಇಂಥಹ ತಂತ್ರಗಳನ್ನೆಲ್ಲ ನೋಡಿದ್ದ ಜನ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ಅದಕ್ಕೆ ತಕ್ಕಂತೆ ಚುನಾವಣೆ ಆದ ಮೇಲೆ ಆರ್.ಎಸ್.ಎಸ್. ನಾಯಕರು ʻಅಹಂಕಾರದಿಂದಲೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಅವಕಾಶ ಕಳೆದುಕೊಂಡಿತುʼʼ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು. ಈಗ ಈ ಅಂತರ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಆರ್.ಎಸ್.ಎಸ್. ಅಸಮಾಧಾನಕ್ಕೆ ಏನು ಕಾರಣ..?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಚುನಾವಣೆ ವೇಳೆ ‘ಇನ್ನು ಬಿಜೆಪಿಗೆ ಆರ್‌ಎಸ್‌ಎಸ್ ಸಹಾಯದ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದು ಅಕಸ್ಮಿಕ ಅಲ್ಲ. ಬೇಕೆಂದೇ ಅವರಿಂದ ಹೇಳಿಸಿದ್ದು ಎಂಬ ಮಾತು ಸಂಘದ ನಾಯಕರದ್ದು. ಅದಕ್ಕೆ ತಕ್ಕಂತೆ ಅದಕ್ಕೆ ಸ್ಪಷ್ಟನೆ ನೀಡುವ ಗೋಜಿಗೆ ಮೋದಿಯವರಾಗಲೀ, ನಡ್ಡಾ ಅವರಾಗಲೀ ಹೋಗಲೇ ಇಲ್ಲ. ಅಲ್ಲದೆ ಇತ್ತೀಚೆಗೆ ನಡೆದ ಬಿಜೆಪಿ ಸ್ಥಾಪನಾದಿನದ ಫೋಟೋ ಎಕ್ಸಿಬಿಷನ್ʻನಲ್ಲಿ 2000 ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಆ 2000 ಫೋಟೋಗಳಲ್ಲಿ ಸುಮಾರು 1500 ಫೋಟೋಗಳಲ್ಲಿ ಮೋದಿಯವರೇ ಇದ್ದರು. ಇದು ಸಂಘದವರ ಸಿಟ್ಟಿಗೆ ಕಾರಣವಾಯ್ತಂತೆ. ಎಲ್ಲವೂ ಮೋದಿ ಮಯವಾಗುತ್ತಿದೆ ಎಂಬ ಆತಂಕ, ಆರ್. ಎಸ್. ಎಸ್. ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ ಎನ್ನಲಾಗಿದೆ.
ಅಲ್ಲದೆ ನಿತಿನ್ ಗಡ್ಕರಿ ಅವರನ್ನು ಸಂಪುಟದಿಂದ ಹೊರಗಿಡುವ ಚಿಂತನೆ ನಡೆಸಿದ್ದು ಕೂಡಾ (2021ರಲ್ಲಿ ನಡೆದ ಸಂಪುಟ ವಿಸ್ತರಣೆ ವೇಳೆ) ಸಂಘ ಪರಿವಾರದವರ ಆಕ್ರೋಶಕ್ಕೆ ಗುರಿಯಾಗಿತ್ತು. ಸಂಪುಟದಲ್ಲಿ ಉಳಿಸಿಕೊಂಡರಾದರೂ.. ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ʻನಿಂದ ಗಡ್ಕರಿಯನ್ನು ಕೈಬಿಟ್ಟರು. ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ ಬಿ.ಎಲ್.ಸಂತೋಷ್ ಬದಲಿಗೆ ಸುನೀಲ ಬನ್ಸಲ್‌ರನ್ನು ತರುವ ಪ್ರಯತ್ನ ನಡೆದದ್ದೂ ಕೂಡಾ ಆರೆಸ್ಸೆಸ್ಸಿಗೆ ಇಷ್ಟವಾಗಲಿಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಸಿಎಂ ಆಗುವಂತೆ ಮಾಡಿದ್ದು ಕೂಡಾ ಸಂಘದವರ ಹಠವೇ. ಹೀಗೆ ಹಲವು ಹಂತಗಳಲ್ಲಿ ಮೋದಿ-ಶಾ ಜೋಡಿ ಸಂಘದ ಜೊತೆ ಗುದ್ದಾಡುತ್ತಲೇ ಇದೆ.
ಮುಂದೇನು..?
ಬಿಜೆಪಿಯಲ್ಲಿ ಪ್ರಬಲರಾಗುವ ನಾಯಕರ ಜೊತೆ ಆರ್.ಎಸ್.ಎಸ್. ಮುನಿಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ವಾಜಪೇಯಿ, ಅಡ್ವಾಣಿ ವಿಷಯದಲ್ಲೂ ಹೀಗೆಯೇ ಆಗಿತ್ತು. ವಾಜಪೇಯಿ, ಸಮಸ್ಯೆಗಳನ್ನು ನಿವಾರಿಸಿಕೊಂಡಂತೆ ಅಡ್ವಾಣಿಯವರಿಗೆ ಆಗಲಿಲ್ಲ. ಇನ್ನು ಆರ್.ಎಸ್.ಎಸ್.ಗೂ ಮೋದಿ ಬೇಕು. ಅಧಿಕಾರದಲ್ಲಿ ಸಂಗದವರು ಇರುವುದು ಮುಖ್ಯ. ಅಲ್ಲದೆ ಮೋದಿಯವರ ಜನಪ್ರಿಯತೆಯನ್ನು ಒಪ್ಪಿಕೊಂಡಿರುವ ಸಂಘದ ನಾಯಕರು ಹಗ್ಗವನ್ನು ತುಂಡು ಮಾಡಲಾರರು ಎಂಬ ನಂಬಿಕೆಯಂತೂ ಇದೆ. ಏಕೆಂದರೆ ಮೋದಿ ಅಧಿಕಾರದಲ್ಲಿದ್ದರೆ ಆರ್.ಎಸ್.ಎಸ್. ಪ್ರಬಲವಾಗಿರಲಿದೆ. ಮೋದಿಯವರಿಗೂ ಅಷ್ಟೆ, ಆರ್.ಎಸ್.ಎಸ್. ತಮ್ಮೊಂದಿಗೆ ನಿಂತು ಬಲಿಷ್ಠವಾಗಿರುವ ತನಕವೂ ತಾನು ಬಲಿಷ್ಠ ಎಂಬ ಸತ್ಯದ ಅರಿವಿದೆ.



