ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿಯಲ್ಲಿ :
ಒಂದು ತಿಂಗಳು ಸತಾಯಿಸಿ ಭಾರತಕ್ಕೆ ಮರಳಿದ ಪ್ರಜ್ವಲ್ ರೇವಣ್ಣ ಈಗ ಅರೆಸ್ಟ್ ಆಗಿದ್ಧಾರೆ. ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಪೊಲೀಸರ ವಶದಲ್ಲಿದ್ಧಾರೆ. ಸದ್ಯಕ್ಕೆ ಪೊಲೀಸ್ ಕಸ್ಟಡಿಯಲ್ಲಿರುವ ಪ್ರಜ್ವಲ್, ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲ್ಲ. ಮುಂದೇನಾಗುತ್ತೋ.. ಗೊತ್ತಿಲ್ಲ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ ಎಸ್ʻಐಟಿ ಟೀಂ.
ಭವಾನಿ ರೇವಣ್ಣಗೆ ಜೈಲು ಭಯ :
ಈ ನಡುವೆ, ಎಸ್‌ಐಟಿ ಅಧಿಕಾರಿಗಳು ಅರೆಸ್ಟ್ ಮಾಡಬಹುದು ಎಂಬ ಭೀತಿಯಿಂದ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಜಾ ಆಗಿದೆ. ವಿಶೇಷವೆಂದರೆ ಭವಾನಿಗೆ ಎಸ್ʻಐಟಿ ನೋಟಿಸ್ ಕೊಟ್ಟಿದ್ದು, ಭವಾನಿ ಅವರು ಕೋರ್ಟಿನ ಮೊರೆ ಹೋದ ಮೇಲೆ. ಅವರಿಗೂ ಬೆಂಗಳೂರು, ಹಾಸನ ಹಾಗೂ ತವರೂರಿನಲ್ಲಿ ಬಂಗಲೆಗಳೇ ಇವೆ. ಇಲ್ಲೆಲ್ಲಿಯೂ ಸದ್ಯಕ್ಕೆ ಭವಾನಿ ಮೇಡಂ ಇಲ್ಲ. ಅವರ ಮೇಲಿರೋದು ಕಿಡ್ನಾಪ್ ಕೇಸು.
ಶನಿವಾರ ಸಂಜೆಯೊಳಗೆ ವಿಚಾರಣೆ ಎದುರಿಸಬೇಕು. ವಿಚಾರಣೆಗೆ ಹಾಜರಾದ ವೇಳೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಧನ ಮಾಡುವ ಸಾಧ್ಯತೆ ಹೆಚ್ಚಿದೆ. ಬಂಧನ ಭೀತಿಯಿಂದಾಗಿ ಭವಾನಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬುದು ಎಸ್‌ಐಟಿ ತಂಡಕ್ಕೆ ಮಾಹಿತಿ ಇಲ್ಲ. ಮನೆಯಲ್ಲಿ ಇಲ್ಲದ ಕಾರಣಕ್ಕೆ ಶುಕ್ರವಾರ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಅನ್ನು ಬಾಗಿಲಿಗೆ ಅಂಟಿಸಿ ಬಂದಿದ್ದರು. ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿ ಹುಡುಕಾಟ ಆರಂಭಿಸಲಾಗಿದೆ. ಮಾತ್ರವಲ್ಲ, ಸಂಬಂಧಿಕರ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.
ರೇವಣ್ಣ ದೇವೇಗೌಡರ ಮನೆಯಲ್ಲಿ :
ಕಿಡ್ನಾಪ್ ಕೇಸಿನಲ್ಲೇ ಎಚ್.ಡಿ.ರೇವಣ್ಣ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜಾಮೀನು ಪಡೆದು ಹೊರಬಂದ ರೇವಣ್ಣ, ತಮ್ಮ ವಿರುದ್ಧದ ಎರಡು ಎಫ್ʻಐಆರ್ ರದ್ದು ಮಾಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ಧಾರೆ. ಇದೇ ವೇಳೆ ರೇವಣ್ಣಗೆ ನೀಡಿರುವ ಜಾಮೀನು ರದ್ದು ಕೋರಿ ಎಸ್ʻಐಟಿಯೂ ಕೋರ್ಟ್ ಮೆಟ್ಟಿಲೇರಿದೆ. ಈ ಎರಡೂ ಪ್ರಕರಣಗಳನ್ನೂ ಒಟ್ಟಿಗೇ ವಿಚಾರಣೆ ನಡೆಸುವ ನ್ಯಾಯಾಲಯ, ಸೋಮವಾರ ತೀರ್ಪು ಹೇಳಬಹುದು.
ಒಟ್ಟಿನಲ್ಲಿ ಪ್ರಜ್ವಲ್ ತಾತ ಮಾಜಿ ಪ್ರಧಾನಿ, ಚಿಕ್ಕಪ್ಪ ಮಾಜಿ ಸಿಎಂ, ಅಪ್ಪ ರೇವಣ್ಣ ಮಾಜಿ ಸಚಿವ.. ಹೀಗಿದ್ದರೂ ಮಾಡಬಾರದ್ದು ಮಾಡಿದ್ದ ತಪ್ಪಿಗೆ ಕೋರ್ಟ್ ಎದುರು ತಲೆ ತಗ್ಗಿಸಿ ನಿಂತಿದ್ಧಾರೆ. ಸಮಾಜದ ಎದುರು ಅವರ ಬಗ್ಗೆ ಈಗಾಗಲೇ ಜಡ್ಜ್ʻಮೆಂಟ್ ಕೂಡಾ ಬಂದಾಗಿದೆ. ಮನೆಗಳಿವೆ, ಬಂಗಲೆಗಳೇ ಇವೆ. ಆದರೆ.. ಯಾವ ಮನೆ.. ಬಂಗಲೆಯಲ್ಲೂ ನೆಮ್ಮದಿಯಾಗಿ ಇರಲು ಸಾಧ್ಯವಾಗದೆ ಊರೂರು ಸುತ್ತುತ್ತಿದ್ದಾರೆ ಅಪ್ಪ-ಅಮ್ಮ-ಮಕ್ಕಳು.
ಇನ್ನು ಪ್ರಜ್ವಲ್ ಮೇಲಿರುವ ಕೇಸುಗಳ ವಿಚಾರಣೆಗೆ ದೊಡ್ಡ ಮಹಿಳಾ ಅಧಿಕಾರಿಗಳ ತಂಡವೇ ಅಖಾಡಕ್ಕೆ ಇಳಿದಿದೆ. ವಿದೇಶದ ಬಂದಿಳಿದ ಕೂಡಲೇ ಪ್ರಜ್ವಲ್ ಅವರನ್ನು ಎಸ್‌ಪಿ ಡಾ.ಸುಮನ್ ಡಿ.ಪೆನ್ನೇಕರ್ ನೇತೃತ್ವದ ಮಹಿಳಾ ಅಧಿಕಾರಿಗಳ ತಂಡ ಬಂಧಿಸಿದ್ದಾರೆ. ಟೀಂನಲ್ಲಿ ಇನ್ಸ್‌ಪೆಕ್ಟರ್ ಗಳಾದ ಶೋಭಾ ಹಾಗೂ ಜಿ.ಶೋಭಾ, ತನಿಖಾಧಿ ಕಾರಿ ಸುಮಾರಾಣಿ, ಎಸ್ಪಿ ಸುಮನ್ ಮೊದಲಾದ ಲೇಡಿ ಆಫೀಸರುಗಳೇ ಇದ್ಧಾರೆ. ಇಡೀ ತಂಡದಲ್ಲಿ 2 ಮಹಿಳಾ ಎಸ್ಪಿ, 2 ಮಹಿಳಾ ಎಸಿಪಿ, 5 ಮಹಿಳಾ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 20 ಮಂದಿ ಮಹಿಳೆಯರೇ ಇದ್ದಾರೆ.
ಪ್ರಜ್ವಲ್ ವಿರುದ್ಧ ತನಿಖೆಗೆ ಮಹಿಳಾ ಅಧಿಕಾರಿಗಳ ನೇಮಕ ಹಿಂದೆ ಜೀವ ಭೀತಿಯಿಂದ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಕೊಡಲು ಹಿಂದೇಟು ಹಾಕುತ್ತಿರುವ ಸಂತ್ರಸ್ತೆಯರಿಗೆ ಆತ್ಮಸ್ಥೆರ್ಯ ತುಂಬುವ ಯೋಜನೆ ಸಹ ಇದೆ ಎನ್ನಲಾಗಿದೆ. ಮಹಿಳೆ ಅಧಿಕಾರಿಗಳು ನಿರ್ಭೀತಿಯಿಂದ ಸಂಸದರನ್ನು ಸಾಮಾನ್ಯ ಆರೋಪಿಯಂತೆ ಸಾರ್ವಜನಿಕವಾಗಿ ಕರೆದುಕೊಂಡು ಹೋದರೆ ಶೋಷಣೆಗೊಳಗಾ ದವರಿಗೆ ಧೈರ್ಯ ಬರಲಿದೆ. ಅಲ್ಲದೆ ಎಂಥ ಪ್ರಭಾವಿಯಾದರೂ ಕಾನೂನಿನ ಮುಂದೆ ಸಾಮಾನ್ಯ ಎನ್ನುವುದು ಅರಿವಾಗಲಿದೆ. ಆಗ ಎಸ್‌ಐಟಿ ಮೇಲೆ ವಿಶ್ವಾಸ ಬರಲಿದೆ ಎಂಬುದು ಅಧಿಕಾರಿಗಳ ಆಲೋಚನೆಯಾಗಿದೆ.



