ಸಾಮಾನ್ಯವಾಗಿ ಹೊಸ ಸಿನಿಮಾಗಳಿಗೆ ಹೆಚ್ಚು ಆಡಿಯನ್ಸ್ ಇರ್ತಾರೆ. ಅದು ಸಹಜ. ಆದರೆ.. ಪುನೀತ್ ರಾಜ್ʻಕುಮಾರ್ ಅವರ ಜಾಕಿ ಸಿನಿಮಾ ಲೆಕ್ಕ ಹಾಗಿಲ್ಲ. ಈ ವಾರ ರಿಲೀಸ್ ಆಗಿರೋ 7 ಸಿನಿಮಾಗಳಲ್ಲಿ ಜಾಕಿ ಸಿನಿಮಾ ಕೂಡಾ ಒಂದು. 14 ವರ್ಷಗಳ ಹಿಂದೆ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಂಡಿದ್ದ ಸಿನಿಮಾ, ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಿಲೀಸ್ ಆಗ್ತಾ ಇದೆ.
ವಿಶೇಷವೇನು ಗೊತ್ತೇ.. ರಿ-ರಿಲೀಸ್ ಆಗುತ್ತಿರುವ ಜಾಕಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್, ಉಳಿದ 6 ಹೊಸ ಸಿನಿಮಾಗಳಿಗಿಂತ ಜೋರಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿಯೇ ಬುಕ್ ಆಗಿರುವ ಟಿಕೆಟ್ʻಗಳ ಸಂಖ್ಯೆ ಆರೂವರೆ ಲಕ್ಷಕ್ಕೂ ಹೆಚ್ಚು. ರಾಜ್ಯಾದ್ಯಂತ ಲೆಕ್ಕ ಇನ್ನೂ ಬರಬೇಕಿದೆ. ಔಿಶೇಷ ಅಂದ್ರೆ.. ಈ ವಾರ ಜಾಕಿಯೊಂದಿಗೆ ರಿಲೀಸ್ ಆಗುತ್ತಿರುವ 6 ಸಿನಿಮಾಗಳ ಒಟ್ಟಾರೆ ಬಿಸಿನೆಸ್ಸಿಗಿಂತ ಜಾಕಿಯ ಬಿಸಿನೆಸ್ ಚೆನ್ನಾಗಿದೆ.
ಹಾಗೆ ನೋಡಿದರೆ.. 2024ರ ಆರಂಭದಿಂದಲೇ ಸಿನಿಮಾಗಳ ಅಬ್ಬರ ಜೋರಾಗಿಯೇ ಇದೆ. ಗೆದ್ದಿರುವುದು ಹಾಗೂ ಗೆಲ್ಲುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯೇ ಆದರೂ.. ಸಿನಿಮಾಗಳ ರಿಲೀಸ್ ಜೋರಾಗಿಯೇ ಇದೆ. ಈ ವಾರವೂ 7 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಸೌಂಡ್ ಮಾಡಿರುವುದು ಕೆರೆಬೇಟೆ ಹಾಗೂ ರಿ-ರಿಲೀಸ್ ಆಗುತ್ತಿರುವ ಜಾಕಿ.
‘ಕೆರೆಬೇಟೆ’ ಸಿನಿಮಾದಲ್ಲಿ ಗೌರಿಶಂಕರ್ ಹೀರೋ ಆಗಿ ಕಾಣಿಸಿಕೊಂಡಿದ್ದು, ಬಿಂದು ಶಿವರಾಮ್ ನಾಯಕಿ. ರಾಜ್‌ಗುರು ನಿರ್ದೇಶನದ ಈ ಸಿನಿಮಾವನ್ನು ಗೌರಿಶಂಕರ್ ಮತ್ತು ಜೈಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಕೆರೆಬೇಟೆ ಕ್ರೀಡೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೇಳಿದ್ದಾರೆ ರಾಜ್ ಗುರು.
ಇನ್ನುಳಿದಂತೆ ಪ್ರಕಾಶ್ ರೈ ಪ್ರಮೋಟ್ ಮಾಡುತ್ತಿರುವ ಕಾರಣಕ್ಕೆ ಫೋಟೋ, ಸೂರಿ ಶಿಷ್ಯನ ಸಿನಿಮಾ ಎಂಬ ಕಾರಣಕ್ಕೆ ಸೋಮು ಸೌಂಡ್ ಎಂಜಿನಿಯರ್, ಧರ್ಮ ಸಾಮರಸ್ಯ ಸಾರುವ ಮೆಹಬೂಬಾ, ಹೈಡ್ & ಸೀಕ್ ಎಂಬ ಥ್ರಿಲ್ಲರ್ ಸಿನಿಮಾ, ಚೌಚೌ ಬಾತ್ ಎಂಬ ಚೌಚೌ ಸಿನಿಮಾ ರಿಲೀಸ್ ಆಗುತ್ತಿವೆ.
ಇವೆಲ್ಲದರ ನಡುವೆ ಜಾಕಿ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಅಡ್ವಾನ್ಸ್ ಬುಕ್ಕಿಂಗ್ ಲಿಸ್ಟಿನಲ್ಲಿ ಜಾಕಿಯೇ ನಂಬರ್ ಒನ್ ಸ್ಥಾನದಲ್ಲಿದೆ. ಪುನೀತ್ ಮೇಲಿನ ಅಭಿಮಾನ ಕಾರಣವೋ.. ಅಥವಾ.. ಬಿಡುಗಡೆಗೆ ಮುಂಚೆ ಭರವಸೆಯ ಅಲೆ ಎಬ್ಬಿಸಿ ಥಿಯೇಟರಿಗೆ ಹೋದಾಗ ಆಗುತ್ತಿರುವ ನಿರಾಶೆಯೇ ಕಾರಣವೋ.. ಗೊತ್ತಿಲ್ಲ. ಒಟ್ಟಿನಲ್ಲಿ ಪುನೀತ್ ರಾಜಕುಮಾರ್ ಅವರು ಸಿನಿಮಾಗಳ ಮೂಲಕ ಜೀವಂತವಾಗಿಯೇ ಇದ್ದಾರೆ.



