ಪುನೀತ್ ರಾಜಕುಮಾರ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಪುನೀತ್ ಹೆಸರಿನ ಸೇವೆಗಳು ಎಲ್ಲಿಯೂ ನಿಂತಿಲ್ಲ. ಪುನೀತ್ ಅಭಿಮಾನಿ ದೇವರುಗಳು ಮಾಡುವ ಸೇವೆಯೇ ಬೇರೆ.. ಪುನೀತ್ ಅವರ ಕುಟುಂಬದವರು ಮಾಡುತ್ತಿರುವ ಸೇವೆಯೇ ಬೇರೆ.. ಪುನೀತ್ ಜೊತೆಯಲ್ಲಿದ್ದ ಕಲಾವಿದರು ಪುನೀತ್ ಹೆಸರಲ್ಲಿ ಮಾಡುತ್ತಿರುವ ಸೇವೆಯೇ ಬೇರೆ. ಇದು ಪುನೀತ್ ರಾಜಕುಮಾರ್ ಹೆಸರಲ್ಲಿ ಪ್ರಕಾಶ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜ ಸೇವೆ.
ದಿ.ಪುನೀತ್ ರಾಜಕುಮಾರ್ ಹೆಸರಲ್ಲಿ ಪ್ರಕಾಶ್ ರೈ ಆಂಬುಲೆನ್ಸ್ ಕೊಡುಗೆ ನೀಡುವುದಾಗಿ ಪುನೀತ್ ಅವರ ಗಂಧದ ಗುಡಿ ಚಿತ್ರದ ಟ್ರೇಲರ್ ರಿಲೀಸ್ ಆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಪುನೀತ ಪರ್ವದಲ್ಲಿ ಹೇಳಿಕೊಂಡಿದ್ದಂತೆಯೇ ಕೆಲವು ಜಿಲ್ಲೆಗಳಿಗೆ ಆಂಬುಲೆನ್ಸ್ ನೀಡಿದ್ದರು ಕೂಡಾ. ಅದು ಮುಂದುವರೆದಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮೆಲ್ಲರ ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಮತ್ತೈದು ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್ಗಳನ್ನು ನೀಡಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ನಟ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ ಸಹಾಯದಿಂದ ತಮ್ಮ ಪ್ರಕಾಶ್ ರಾಜ್ ಫೌಂಡೇಷನ್‌ನಿಂದ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಈ ಆ್ಯಂಬುಲೆನ್ಸ್ಗಳು ಕೊಡುಗೆ ನೀಡಿದ್ದೇವೆ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ.
ಸಾಮಾಜಿಕ ಕಾರ್ಯಗಳ ಮೂಲಕ ಹೆಸರು ವಾಸಿಯಾದವರು ನಟ ಪುನೀತ್ ರಾಜ್ಕುಮಾರ್. ಅವರು ಮಾಡಿದ ಕಾರ್ಯಗಳು ಎಲ್ಲರಿಗೂ ಸದಾ ಸ್ಫೂರ್ತಿ. ಇದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಈಗ ಅದೇ ರೀತಿ ನಟ ಪ್ರಕಾಶ್ ರಾಜ್ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡುವುದಾಗಿ ಘೋಷಿಸಿದ್ದರು. ಎಲ್ಲ ೩೨ ಜಿಲ್ಲೆಗಳಿಗೂ ಆಂಬುಲೆನ್ಸ್ ನೀಡುತ್ತೇನೆ ಎಂದು ಘೋಷಿಸಿದ್ದ ಪ್ರಕಾಶ್ ರಾಜ್, ಕೆಲವು ಜಿಲ್ಲೆಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಿದ್ದರು.
ಈ ಸೇವೆಯಲ್ಲಿ ಪ್ರಕಾಶ್ ರೈ ಒಂಟಿಯಲ್ಲ. ಸ್ವತಃ ಅಲ್ಲದೇ ಹೋದರೂ, ಪುನೀತ್ ಹೆಸರಿನ ಟ್ರಸ್ಟ್ ಸ್ಥಾಪಿಸಿ, ಉಳ್ಳವರಿಂದ ದೇಣಿಗೆ ಪಡೆದು ಸೇವಾ ಕೆಲಸ ನಡೆಸುತ್ತಿದ್ದಾರೆ. ಪ್ರಕಾಶ್ ರಾಜ್ ಫೌಂಡೇಷನ್ ಅಡಿಯಲ್ಲಿ ಅಪ್ಪು ಎಕ್ಸ್ʻಪ್ರೆಸ್ ಹೆಸರಿನ ಮೂಲಕ ಆಂಬುಲೆನ್ಸ್ ಒದಗಿಸುವುದು ಪ್ರಕಾಶ್ ರೈ ಅವರ ಉದ್ದೇಶ ಮತ್ತು ಗುರಿ. ಪ್ರಕಾಶ್ ರಾಜ್ ಅವರ ಈ ಸೇವೆಗೆ ನಟ ಶಿವ ರಾಜ್ ಕುಮಾರ್, ಯಶ್, ತೆಲುಗಿನ ಚಿರಂಜೀವಿ, ತಮಿಳಿನ ಸೂರ್ಯ ಸೇರಿದಂತೆ ಹಲವರು ಸಹಾಯ ಮಾಡಿದ್ದಾರೆ. ಈ ಬಾರಿಯ ಐದು ಆಂಬುಲೆನ್ಸ್ʻಗಳನ್ನು ಕೊಡುಗೆಯಾಗಿ ನೀಡಿರುವುದು ನಟ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ʻನವರು. ಪ್ರಕಾಶ್ ರೈ ಈ ಮಾತು ಹೇಳಿದಾಗ ವೇದಿಕೆಯಲ್ಲಯೇ ನಟ ಪ್ರಕಾಶ್ ರೈ ಅವರ ಮಾತಿಗೆ ದನಿಗೂಡಿಸಿದ್ದ ಯಶ್, ಈ ಸೇವೆಯಲ್ಲಿ ನೀವು ಒಂಟಿಯಲ್ಲ ಎಂದಿದ್ದರು. ಅಣ್ಣ ಶಿವರಾಜ್ʻಕುಮಾರ್ ಹೇಳದೆಯೇ ಅಪ್ಪು ಎಕ್ಸ್ʻಪ್ರೆಸ್ʻಗೆ ಸಹಾಯ ಮಾಡಿದ್ದಾರೆ.



