ನಾಗಾಸಾಧುಗಳು ಬರೀ ಮೈಲಿರುತ್ತಾರೆ. ಈಗ ನೋಡಿದರೆ ಚಳಿಗಾಲ. ಕರ್ನಾಟಕದಲ್ಲೇ ಚಳಿ ತಡೆಯೋಕಾಗ್ತಿಲ್ಲ. ಅಂಥಾದ್ದರಲ್ಲಿ ಗಂಗಾ, ಯಮುನಾ ಮತ್ತು ನಿಗೂಢ ನದಿ ಸರಸ್ವತಿ ನದಿಯ ಸಂಗಮ ತಾಣ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮೈಕೊರೆಯುವ ಚಳಿ ಇರುತ್ತೆ. ಅಂತಾದ್ದರಲ್ಲಿ ಸಾವಿರ ಗಟ್ಟಲೆಯಲ್ಲಿ ಬರುವ ನಾಗಾಸಾಧುಗಳು ಬರೀ ಮೈಲಿರ್ತಾರೆ. ಅಲ್ಲೀಗ ಮೈನಡುಗಿಸುವ ಚಳಿ. ಗರಿಷ್ಠ ತಾಪಮಾನವೇ 19 ಡಿಗ್ರಿ ಸೆಲ್ಷಿಯಸ್. ಹಿಮಾಲಯಕ್ಕೆ ಹತ್ತಿರ. ಅಂತಾದ್ದರಲ್ಲಿ ನಾಗಾಸಾಧುಗಳಿಗೆ ಚಳಿ ಆಗಲ್ವಾ..?
ಇದು ಅಚ್ಚರಿ ಎನಿಸಿದ್ರೂ ಸತ್ಯ. ಅವರಿಗೆ ಚಳಿ ಆಗಲ್ಲ. ಎಲ್ಲಿರ್ತಾರೋ.. ಗೊತ್ತಿಲ್ಲ. ಹೇಗಿರ್ತಾರೋ ಗೊತ್ತಿಲ್ಲ. ಅವರಿಗೆ ಮಹಾಕುಂಭಮೇಳ ಇವತ್ತೇ ನಡೆಯುತ್ತೆ. ಇಂಥಾ ದಿನವೇ ಇಂಥ ನಕ್ಷತ್ರದಲ್ಲೇ ಪವಿತ್ರ ಸ್ನಾನ ಮಾಡ್ಬೇಕು ಅಂತಾ ಹೇಗೆ ಗೊತ್ತಾಗುತ್ತೋ.. ಗೊತ್ತಿಲ್ಲ. ಸಾವಿರಾರು.. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಕುಂಭ ಮೇಳ ನಡೆಯೋ ಜಾಗಕ್ಕೆ ಬರ್ತಾರೆ. ಗುಂಪು ಗುಂಪಾಗಿ ಬರೋ ನಾಗಾಸಾಧುಗಳನ್ನ ಕಂಡ್ರೆ ಅಲ್ಲಿ ಬಂದ ಭಕ್ತರಿಗೆ ಒಂದು ರೀತಿಯಲ್ಲಿ ಭಯ. ಇನ್ನೊಂದು ರೀತಿಯಲ್ಲಿ ಭಕ್ತಿ. ಏಕೆ ಅಂದ್ರೆ ಅವರು ನಿಗೂಢ ಮನುಷ್ಯರು.
ಮೈಮೇಲೆ ಒಂದೆಳೆ ಬಟ್ಟೆಯೂ ಇಲ್ಲದೆ ಅವರು ಚಳಿಗಾಲದಲ್ಲಿ ಹೇಗಿರ್ತಾರೆ.. ಸಾಮಾನ್ಯ ಮನುಷ್ಯರು ಅಂತಹ ಚಳಿಯಲ್ಲಿ ಮೈಬಿಸಿ ಆಗಿಟ್ಕೊಳ್ಳೋಕೆ ಬೆಂಕಿ ಕಾಯಿಸಿಕೊಳ್ಳೋದೋ.. ಮತ್ತೊಂದೋ ವ್ಯವಸ್ಥೆ ಮಾಡ್ಕೊಳ್ತಾರೆ. ಮೈತುಂಬಾ ಸ್ವೆಟರು, ಜಾಕೆಟ್ಟು ಹಾಕ್ಕೊಂಡಿರ್ತಾರೆ. ಅಷ್ಟಿದ್ದೂ ಗಢಗಢ ನಡುಗ್ತಾ ಇರ್ತಾರೆ. ಆದರೆ ಈ ನಾಗಾಸಾಧುಗಳಿಗೆ ಅಂಥದ್ದೇನೂ ಆಗಲ್ಲ. ಯಾಕೆ ಅಂದ್ರೆ ಅವರು ಅಗ್ನಿಸಾಧನ ಇಟ್ಕೊಂಡಿರ್ತಾರೆ. ಅಗ್ನಿಸಾಧನ ಅಂದ್ರೆ ಬೇರೇನಲ್ಲ. ಧ್ಯಾನದಿಂದ ದೊರಕುವ ಒಂದು ಸಿದ್ಧಿಯಷ್ಟೇ. ಅದು ದೇಹದೊಳಗೇ ಇರುತ್ತೆ. ಅಂತಾದ್ದೊಂದು ಅಗ್ನಿಸಾಧನ ಜಾಗೃತವಾದ ಮೇಲೆ ನಾಗಾಸಾಧುಗಳಿಗೆ ಚಳಿ, ಮಳೆ ಅನ್ನೋದು ಲೆಕ್ಕಕ್ಕೇ ಇರಲ್ಲ. ದೇಹದೊಳಗೆ ಚಳಿಯನ್ನೇ ಒಡೆದೋಡಿಸೋ ಶಕ್ತಿ ಉತ್ಪತ್ತಿಯಾಗುತ್ತೆ.
ಜೊತೆಗೆ ನಾಡಿಶೋಧನ ಅನ್ನೋದೊಂದು ಶಕ್ತಿ ಇದ್ಯಂತೆ. ನಿರಂತರ ಪ್ರಾಣಾಯಾಮದಿಂದಾಗಿ ಬರೋ ಶಕ್ತಿಯಂತೆ. ಆ ಶಕ್ತಿಯಿಂದಾಗಿ ಈ ನಾಗಾಸಾಧುಗಳು ಗಾಳಿಯ ಹರಿವನ್ನ ಕಂಟ್ರೋಲ್ ಮಾಡ್ತಾರಂತೆ. ನಾಡಿ ಶೋಧನದಿಂದ ಗಾಳಿಯನ್ನು ತಡೆಯುವ ಶಕ್ತಿ ಪಡೆಯೋ ನಾಗಾಸಾಧುಗಳು, ಅಗ್ನಿಸಾಧನದಿಂದ ದೇಹವನ್ನೇ ಬೆಂಕಿ ನಿರೋಧಕ ಮಾಡ್ಕೊಳ್ತಾರಂತೆ.
ಇನ್ನು ನಾಗಾಸಾಧುಗಳು ಮೈಗೆ ಬೂದಿ ಬಳ್ಕೊಂಡಿರ್ತಾರಲ್ಲ. ಅದು ನಮ್ಮ ಕಣ್ಣಿಗೆ ಬೂದಿಯಾದರೆ, ಆ ಬೂದಿಯಲ್ಲಿ, ಅದು ನಾಗಾಸಾಧುಗಳಿಗೆ ಲೋಹ ಕವಚಾನೂ ಹೌದು. ಬಹುತೇಕ ನಾಗಾಸಾಧುಗಳು ಹೆಣಗಳನ್ನ ಸುಟ್ಟ ಬೂದಿಯನ್ನೇ ಮೈಮೇಲೆ ಹಾಕ್ಕೊಂಡಿರ್ತಾರೆ. ಆ ಬೂದಿಯಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳಿರುತ್ತವೆ. ಆ ಖನಿಜಗಳೆಲ್ಲ ನಾಗಾಸಾಧುಗಳ ದೇಹವನ್ನ ಬಿಸಿಯಾಗಿ ಇಟ್ಟಿರುತ್ತವಂತೆ.
ಅಂದಹಾಗೆ ಈ ನಾಗಾಸಾಧುಗಳನ್ನ ಸೃಷ್ಟಿಸಿದವರು ಶಂಕರಾಚಾರ್ಯರು ಅನ್ನೋ ನಂಬಿಕೆ ಇದೆ. ಇನ್ನೊಂದು ನಂಬಿಕೆಯ ಪ್ರಕಾರ ನಾಗಾಸಾಧುಗಳ ಸಂಪ್ರದಾಯ ಮೊದಲಿನಿಂದನೂ ಇತ್ತು. ಆ ನಾಗಾಸಾಧುಗಳನ್ನೆಲ್ಲ ಒಂದು ಗೂಡಿಸಿದ ಶಂಕರಾಚಾರ್ಯರು ಧರ್ಮರಕ್ಷಣೆಗಾಗಿ ಒಂದು ಸೈನ್ಯವನ್ನೇ ರಚಿಸಿದರು ಎನ್ನುತ್ತದೆ ಇನ್ನೊಂದು ಕಥೆ.
ಈ ನಾಗಾಸಾಧುಗಳು ಧರ್ಮಕ್ಕೆ ಕಂಟಕ ಎದುರಾದಾಗ ಸೈನ್ಯವಾಗಿ ನುಗ್ಗುತ್ತಾರೆ ಎನ್ನುವುದು ನಂಬಿಕೆ. ಆ ನಂಬಿಕೆಗಳೆಲ್ಲ ಸತ್ಯ ಎನ್ನುವಂತ ಕಥೆಗಳೂ ಇವೆ. ಹಾಗಂತ ಈ ನಾಗಾಸಾಧುಗಳು ಸಣ್ಣ ಪುಟ್ಟ ಜಗಳಗಳಿಗೆಲ್ಲ ಬರುವುದೂ ಇಲ್ಲ. ಸಾಮಾನ್ಯವಾಗಿ ನಾಗಾಸಾಧುಗಳು, ತಮಗೂ ಸಮಾಜಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಬದುಕ್ತಾ ಇರ್ತಾರೆ. ಮಹಾಕುಂಭ ಮೇಳಗಳಂತಹ ಧಾರ್ಮಿಕ ಉತ್ಸವಗಳಲ್ಲಿ ಕಾಣಿಸ್ಕೊಳ್ತಾರೆ. ಆ ಧಾರ್ಮಿಕ ಉತ್ಸವ ಮುಗೀತೋ.. ನಾಪತ್ತೆಯಾಗಿಬಿಡ್ತಾರೆ. ಮತ್ತೆ ಅವರನ್ನು ಜನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡೋದು ಮಹಾಕುಂಭಮೇಳದಲ್ಲೇ.



